ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸ್ನೇಹಿ ಪಾಲಿಕೆ, ಸ್ವಚ್ಛ ನಗರದ ಗುರಿ: ಮಂಗಳೂರು ಪಾಲಿಕೆ ಹೊಸ ಮೇಯರ್ ಸುಧೀರ್

ಭ್ರಷ್ಟಾಚಾರ ರಹಿತ ಆಡಳಿತ: ಮಂಗಳೂರು ಮಹಾನಗರ ಪಾಲಿಕೆ ಹೊಸ ಮೇಯರ್ ಸುಧೀರ್ ಶೆಟ್ಟಿ ಭರವಸೆ
Published 8 ಸೆಪ್ಟೆಂಬರ್ 2023, 14:02 IST
Last Updated 8 ಸೆಪ್ಟೆಂಬರ್ 2023, 14:02 IST
ಅಕ್ಷರ ಗಾತ್ರ

ಮಂಗಳೂರು: ‌ಕುಡಿಯುವ ನೀರಿನ ಅಭಾವಕ್ಕೆ ಪರಿಹಾರ, ಒಳಚರಂಡಿ ಸಮಸ್ಯೆಯಿಂದ ಮುಕ್ತಿ. ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತದ ಭರವಸೆ ನೀಡಿದ ನೂತನ ಮೇಯರ್ ಸುಧೀರ್ ಶೆಟ್ಟಿ ಮಂಗಳೂರು ಮಹಾನಗರಪಾಲಿಕೆಯನ್ನು ರಾಜ್ಯದಲ್ಲೇ ಮಾದರಿ ಪಾಲಿಕೆಯಾಗಿ ಮಾರ್ಪಡಿಸುವ ಕನಸು ಕಂಡಿರುವುದಾಗಿ ಹೇಳಿದರು.

ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ನಗರದ 24ನೇ ಮೇಯರ್ ಆಗಿ ಆಯ್ಕೆಯಾದ ನಂತರ ಸದಸ್ಯರುನ್ನುದ್ದೇಶಿಸಿ ಮಾತನಾಡಿದರು. ‘ಪ್ರತಿದಿನ ಮಧ್ಯಾಹ್ನ 3.30ರಿಂದ ಸಂಜೆ 6 ಗಂಟೆಯ ವರೆಗೆ ನಾನು ಪಾಲಿಕೆಯಲ್ಲಿ ಲಭ್ಯವಿದ್ದು ಸಾರ್ವಜನಿಕರು ಅಹವಾಲುಗಳಿದ್ದರೆ ಗಮನಕ್ಕೆ ತರಬಹುದು. ಸ್ವಚ್ಛ, ಸುಂದರ ಮತ್ತು ಆರೋಗ್ಯಕರ ನಗರವನ್ನಾಗಿ ಮಾಡಲು ಪ್ರತಿಪಕ್ಷದ ಸದಸ್ಯರು ಸೇರಿದಂತೆ ಎಲ್ಲರೂ ಜೊತೆಗೂಡಿ ಕೆಲಸ ಮಾಡಬೇಕಾಗಿದೆ’ ಎಂದರು.

ಸ್ಮಾರ್ಟ್ ಸಿಟಿ ಮತ್ತು ಅಮೃತ್ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಪ್ರಯತ್ನಿಸಲಾಗುವುದು. ಎಮ್ಮೆಕೆರೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿರುವ ಅಂತರರಾಷ್ಟ್ರೀಯ ಗುಣಮಟ್ಟದ ಈಜುಕೊಳ, ಉರ್ವದಲ್ಲಿ ನಿರ್ಮಾಣವಾಗುತ್ತಿರುವ ಕಬಡ್ಡಿ ಅಂಗಣ ಇತ್ಯಾದಿಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ ಎಂದರು.

‘ಮಳೆಯ ಕೊರತೆಯಿಂದ ಈ ಬಾರಿ ನೀರಿನ ಸಮಸ್ಯೆ ಕಾಡುವ ಆತಂಕವಿದೆ. ಹರೇಕಳ ಅಣೆಕಟ್ಟೆಯಿಂದ ನೀರು ಶುದ್ಧಿಕರಿಸಿ ನಗರಕ್ಕೆ ಸರಬರಾಜು ಮಾಡುವ ಸಂಸ್ಕರಣೆ ಘಟಕದ ಕಾಮಗಾರಿಯನ್ನು ನನ್ನ ಅವಧಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸುವೆ. ಈ ಯೋಜನೆ ಕಾರ್ಯಗತವಾದರೆ ಮಂಗಳೂರು ದಕ್ಷಿಣ ಮತ್ತು ಉತ್ತರ ಮತಕ್ಷೇತ್ರಗಳ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು. 

‘ಆರೋಗ್ಯ, ಸ್ವಚ್ಛತೆಗೆ ಗಮನ ನೀಡಿ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಆದ್ಯ ಕರ್ತವ್ಯವಾಗಿದ್ದು ಆದಾಯ ಗಳಿಕೆಗೂ ಒತ್ತು ನೀಡಲಾಗುವುದು. ಎಲ್ಲ ಬಗೆಯ ತೆರಿಗೆಯನ್ನು ಸಮಗ್ರವಾಗಿ ಸಂಗ್ರಹಿಸಲು ವಿಶಿಷ್ಟ ಯೋಜನೆ ಹಮ್ಮಿಕೊಳ್ಳುವ ಯೋಜನೆ ಇದೆ. ಮೂರು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ಅನುಷ್ಠಾನ ಮಾಡಲಾಗುವುದು’ ಎಂದರು.

ಸಂವಿಧಾನ ಶಿಲ್ಪಿ ಬಿ.ಆರ್‌. ಅಂಬೇಡ್ಕರ್ ಅವರನ್ನು ಸ್ಮರಿಸುತ್ತ ಮಾತು ಆರಂಭಿಸಿದ ಉಪಮೇಯರ್ ಸುನೀತಾ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಭರವಸೆ ನೀಡಿದರು.

ಸಂಸದ ನಳಿನ್ ಕುಮಾರ್‌ ಕಟೀಲ್‌, ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ.ಭರತ್ ಶೆಟ್ಟಿ ಇದ್ದರು. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಮಹಾನಗರ ಪಾಲಿಕೆ ಆಯುಕ್ತ ಆನಂದ ಸಿ.ಎಲ್‌ ಇದ್ದರು. ಎಲ್ಲ ಸ್ಥಾಯಿ ಸಮಿತಿಗಳಿಗೂ ಸದಸ್ಯರ ಆಯ್ಕೆ ಅವಿರೋಧವಾಗಿ ನಡೆಯಿತು.

ಗ್ರಾಮ ಪಂಚಾಯಿತಿಯಿಂದ ಮೇಯರ್ ಹುದ್ದೆ ವರೆಗೆ

ಮಂಗಳೂರು ಹೊರವಲಯದ ಕಣ್ಣೂರಿನಲ್ಲಿ ಜನಿಸಿದ ಸುಧೀರ್ ಶೆಟ್ಟಿ ಕಾಟಿಪಳ್ಳದ ಅಜ್ಜಿ ಮನೆಯಲ್ಲಿ ಉಳಿದುಕೊಂಡು ಓದು ಪೂರೈಸಿದವರು. ಅಜ್ಜಿ ಮನೆಯ ಸಮೀಪದ ಶಾಲೆಯಲ್ಲಿ ಕಲಿತ ಅವರು ಸುರತ್ಕಲ್‌ನ ಗೋವಿಂದದಾಸ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದರು.

ಕಣ್ಣೂರು ಗ್ರಾಮ ಪಂಚಾಯಿತಿ ಆಗಿದ್ದಾಗ ಸದಸ್ಯರಾಗಿ ಆಯ್ಕೆಯಾದ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಗುರುತಿಸಿಕೊಂಡಿದ್ದರು. 2002ರಲ್ಲಿ ಕಣ್ಣೂರು ಪ್ರದೇಶ ನಗರ ಪಾಲಿಕೆ ವ್ಯಾಪ್ತಿಗೆ ಸೇರಿತು. 2007ರ ಚುನಾವಣೆಯಲ್ಲಿ ಜಯ ಗಳಿಸಿದ ಸುಧೀರ್‌ ಶೆಟ್ಟಿ ಸತತ ಎರಡು ಬಾರಿ ಈ ವಾರ್ಡ್‌ ಪ್ರತಿನಿಧಿಸಿದ್ದರು. ಈ ಬಾರಿ 30ನೇ ವಾರ್ಡ್‌, ಕೊಡಿಯಾಲ್‌ಬೈಲ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಅವರು ಪಾಲಿಕೆಯಲ್ಲಿ ಮುಖ್ಯ ಸಚೇತಕರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪರಿಚಿತರು. ಪಂಪ್‌ವೆಲ್‌ನ ಕ್ಲಾಸಿಕ್ ಗೇಟ್‌ವೇ ನಿವಾಸಿಯಾದ ಅವರಿಗೆ ಪತ್ನಿ ಮತ್ತು ಪಿಯುಸಿ, ಏಳನೇ ತರಗತಿಯಲ್ಲಿ ಕಲಿಯುತ್ತಿರುವ ಪುತ್ರರು ಇದ್ದಾರೆ.

ಶಿಕ್ಷಕಿ, ಆಶಾ ಕಾರ್ಯಕರ್ತೆ ಸುನೀತಾ

11ನೇ ವಾರ್ಡ್‌, ಪಣಂಬೂರು ಬೇಂಗ್ರೆಯನ್ನು ಪ್ರತಿನಿಧಿಸುತ್ತಿರುವ ಸುನೀತಾ ಅವರು ತಾಯಿಯ ಜೊತೆ ಇದೇ ಪ್ರದೇಶದಲ್ಲಿ ವಾಸವಾಗಿದ್ದಾರೆ. ಬೊಕ್ಕಪಟ್ಣ ಶಾಲೆಯಲ್ಲಿ ಕಲಿತ ಅವರು ಗಣಪತಿ ಕಾಲೇಜಿನಲ್ಲಿ ಪಿಯುಸಿ ಓದಿದ್ದಾರೆ. ತಣ್ಣೀರುಬಾವಿ ಶಾಲೆಯಲ್ಲಿ ಶಿಕ್ಷಕಿಯಾಗಿ, ನಂತರ ಆಶಾ ಕಾರ್ಯಕರ್ತೆಯಾಗಿದ್ದ ಅವರು ರಾಜಕೀಯಕ್ಕೆ ಪ್ರವೇಶಿಸಿ ಮೊದಲ ಪ್ರಯತ್ನದಲ್ಲೇ ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.  

ಮೇಯರ್ ಸುಧೀರ್ ಶೆಟ್ಟಿ ಮತ್ತು ಉಪಮೇಯರ್ ಸುನೀತಾ ಅವರನ್ನು ಚುನಾವಣಾಧಿಕಾರಿ ಜಿ.ಸಿ. ಪ್ರಕಾಶ್ ಅಭಿನಂದಿಸಿದರು. ಪಾಲಿಕೆ ಆಯುಕ್ತ ಆನಂದ ಇದ್ದಾರೆ
ಮೇಯರ್ ಸುಧೀರ್ ಶೆಟ್ಟಿ ಮತ್ತು ಉಪಮೇಯರ್ ಸುನೀತಾ ಅವರನ್ನು ಚುನಾವಣಾಧಿಕಾರಿ ಜಿ.ಸಿ. ಪ್ರಕಾಶ್ ಅಭಿನಂದಿಸಿದರು. ಪಾಲಿಕೆ ಆಯುಕ್ತ ಆನಂದ ಇದ್ದಾರೆ
ಉಪಮೇಯರ್ ಸುನೀತಾ ಮತ್ತು ಮೇಯರ್‌ ಸುಧೀರ್ ಶೆಟ್ಟಿ
ಉಪಮೇಯರ್ ಸುನೀತಾ ಮತ್ತು ಮೇಯರ್‌ ಸುಧೀರ್ ಶೆಟ್ಟಿ

ಮಹಾನಗರ ಪಾಲಿಕೆ ನನ್ನ ದೇವಸ್ಥಾನ. ನಾನು ಇಲ್ಲಿನ ಧರ್ಮದರ್ಶಿ ಮಾತ್ರ. ಮೇಯರ್‌ ಹುದ್ದೆಯನ್ನು ಭ್ರಮೆಯಾಗಿಸಿ ತಲೆಯಲ್ಲಿ ಇರಿಸಿಕೊಳ್ಳದೆ ಜವಾಬ್ದಾರಿಯಾಗಿ ಹೆಗಲ ಮೇಲೆ ಹೊತ್ತುಕೊಳ್ಳುವೆ.

-ಸುಧೀರ್ ಶೆಟ್ಟಿ ಮೇಯರ್

ಸುಧೀರ್ ಶೆಟ್ಟಿ ಅವರು ಅನುಭವಿ ವ್ಯಕ್ತಿಯಾಗಿದ್ದು ಅವರ ಮೇಲೆ ಭರವಸೆ ಇದೆ. ಅವರ ನೇತೃತ್ವದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಜೊತೆಗೂಡಿ ಮಂಗಳೂರಿನ ಅಭಿವೃದ್ಧಿಗೆ ಶ್ರಮಿಸಬೇಕಿದೆ.

-ನಳಿನ್ ಕುಮಾರ್ ಕಟೀಲ್ ಸಂಸದ

ಸುಧೀರ್ ಶೆಟ್ಟಿ ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿ ಕೆಲಸ ಮಾಡಿದವರು. ಅಲ್ಪಸಂಖ್ಯಾತರ ಪ್ರಾಬಲ್ಯ ಇರುವ ವಾರ್ಡ್‌ನಲ್ಲಿ 2 ಬಾರಿ ಜಯಗಳಿಸಿದ್ದಾರೆ. ನಗರದ ಉಳಿಕೆ ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಲಿ.

-ವೇದವ್ಯಾಸ ಕಾಮತ್ ಶಾಸಕ

ಎರಡನೇ ಹಂತದ ನಗರಗಳಲ್ಲಿ ಪ್ರಮುಖವಾದ ಮಂಗಳೂರನ್ನು ಇಲ್ಲಿನ ಸಂಸ್ಕಾರ ಮತ್ತು ಸಂಸ್ಕೃತಿ ಉಳಿಸಿಕೊಂಡೇ ಅಭಿವೃದ್ಧಿಪಡಿಸಬೇಕಾಗಿದೆ. ಪ್ರವಾಸೋದ್ಯಮ ಬೆಳೆಯಲಿ.

-ಡಾ.ಭರತ್ ಶೆಟ್ಟಿ ಶಾಸಕ

ನಗರದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ತುರ್ತಾಗಿ ಸರಿಪಡಿಸಬೇಕಾಗಿದೆ. ಟ್ರಾಫಿಕ್ ಸಮಸ್ಯೆಗೂ ಪರಿಹಾರ ಕಾಣಬೇಕಾಗಿದೆ. ನಂತೂರು ಮತ್ತು ಕೆಪಿಟಿ ಜಂಕ್ಷನ್‌ಗಳಲ್ಲಿ ಫ್ಲೈ ಓವರ್‌ ಬೇಗ ಆಗಲಿ.

-ನವೀನ್ ಡಿಸೋಜ ಪ್ರತಿಪಕ್ಷ ನಾಯಕ

ಮೇಯರ್‌ ಸ್ಥಾನಕ್ಕೆ ಸ್ಪರ್ಧೆ; ಉಪಮೇಯರ್‌ ಅವಿರೋಧ ಆಯ್ಕೆ

ಶುಕ್ರವಾರ ನಡೆದ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಬಿಜೆಪಿಯ ಸುಧೀರ್ ಶೆಟ್ಟಿ ಮತ್ತು ಕಾಂಗ್ರೆಸ್‌ನ ನವೀನ್ ಡಿಸೋಜ ನಾಮಪತ್ರ ಸಲ್ಲಿಸಿದ್ದರು. ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಸ್ಥಾನದ ಸ್ಪರ್ಧೆಯಲ್ಲಿ ಸುಧೀರ್ ಅವರು ಸಂಸದ ಮತ್ತು ಇಬ್ಬರು ಶಾಸಕರ ಮತಗಳು ಸೇರಿದಂತೆ ಒಟ್ಟು 47 ಮತಗಳನ್ನು ಗಳಿಸಿದರು. ಕಾಂಗ್ರೆಸ್‌ನ ಎಲ್ಲ 14 ಸದಸ್ಯರು ನವೀನ್ ಡಿಸೋಜ ಅವರಿಗೆ ಮತ ಚಲಾಯಿಸಿದರು. ಎಸ್‌ಡಿಪಿಐನ ಶಂಶಾದ್ ಅಬೂಬಕ್ಕರ್ ಮತ್ತು ಮುನೀಬ್‌ ಬೇಂಗ್ರೆ ತಟಸ್ಥರಾಗಿದ್ದರು. ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿದ್ದ ಉಪಮೇಯರ್ ಸ್ಥಾನಕ್ಕೆ ಸುನೀತಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT