ಮಂಗಳೂರು: ಎಲೆಕ್ಟ್ರಿಕಲ್ ಆಟೊರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಜಿಲ್ಲಾಡಳಿತ ಅನುಮತಿ ನೀಡಿರುವುದನ್ನು ವಿರೋಧಿಸಿ ಆಟೊರಿಕ್ಷಾ ಚಾಲಕ ಮಾಲೀಕರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಆಟೊರಿಕ್ಷಾ ಚಾಲಕರು ಪ್ರತಿಭಟನೆ ನಡೆಸಿದರು.
ನಗರದ ಜ್ಯೋತಿ ಸರ್ಕಲ್‌ನಿಂದ ಮೆರವಣಿಗೆ ಆರಂಭಿಸಿದ ಆಟೊರಿಕ್ಷಾ ಚಾಲಕರು, ಕ್ಲಾಕ್ ಟವರ್ ವರೆಗೆ ಮೆರವಣಿಗೆ ನಡೆಸಿದರು.
ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಎಲೆಕ್ಟ್ರಿಕ್ ರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚಾರಕ್ಕೆ ಅನುಮತಿ ನೀಡಿರುವ ಜಿಲ್ಲಾಧಿಕಾರಿ ಆದೇಶವು ಏಕಪಕ್ಷೀಯವಾಗಿದೆ. ಈ ಆದೇಶ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಯಲಿದೆ ಎಂದರು.
ಈ ಆದೇಶವು ಹೊಟ್ಟೆಪಾಡಿಗಾಗಿ ದುಡಿಯುವ ರಿಕ್ಷಾ ಚಾಲಕರ ಬದುಕಿಗೆ ಕೊಳ್ಳಿ ಇಟ್ಟಂತೆ ಆಗಿದೆ. ಡಿಸಿ ಸ್ಥಳಕ್ಕೆ ಬರಬೇಕು ಅಥವಾ ಅವರು ಅಧಿಕೃತ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದರು.