ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮನೋಜ್‌ ಕುಮಾರ್‌ ಮುಂದಿನ ಮೇಯರ್‌?

ಉಪಮೇಯರ್‌ ಹುದ್ದೆಗೆ ಬಿಜೆಪಿಯಿಂದ ಭಾನುಮತಿ, ಕಾಂಗ್ರೆಸ್‌ನಿಂದ ಝೀನತ್‌ ಅಭ್ಯರ್ಥಿ
Published : 19 ಸೆಪ್ಟೆಂಬರ್ 2024, 6:43 IST
Last Updated : 19 ಸೆಪ್ಟೆಂಬರ್ 2024, 6:43 IST
ಫಾಲೋ ಮಾಡಿ
Comments

ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆಯ ಮುಂದಿನ ಅವಧಿಗೆ ಮೇಯರ್ ಹುದ್ದೆಗೆ ಮನೋಜ್‌ ಕುಮಾರ್‌ ಹಾಗೂ ಉಪಮೇಯರ್ ಹುದ್ದೆಗೆ ಭಾನುಮತಿ ಪಿ.ಎಸ್‌. ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಗಳನ್ನಾಗಿಸಿದೆ.

ಪಾಲಿಕೆಯ ಈ ಅವಧಿಯ ಕೊನೆಯ ಮೇಯರ್‌ ಚುನಾವಣೆ ಗುರುವಾರ (ಇದೇ 19) ನಡೆಯಲಿದೆ. ಬೆಳಿಗ್ಗೆ 8ರಿಂದ 10ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇದೆ. 10ರಿಂದ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅಗತ್ಯಬಿದ್ದರೆ 11ಗಂಟೆಗೆ ಮತದಾನ ನಡೆಯಲಿದೆ.

ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಪಕ್ಷದ ವರಿಷ್ಠರ ಸಭೆಯಲ್ಲಿ ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆಯಲ್ಲಿ ಯಾವ ಸದಸ್ಯರು ಅಭ್ಯರ್ಥಿಗಳಾಗಬೇಕು ಎಂಬುದನ್ನು ಅಂತಿಮಗೊಳಿಸಲಾಯಿತು ಎಂದು ಪಕ್ಷದ ವಕ್ತಾರ ಅರುಣ್ ಜಿ.ಶೇಟ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇಯರ್‌ ಹುದ್ದೆಯು ಪರಿಶಿಷ್ಟ ಜಾತಿಯ ಸದಸ್ಯರಿಗೆ ಮೀಸಲಾಗಿದೆ. ಕಾಂಗ್ರೆಸ್‌ ಪಕ್ಷದ ಪಾಲಿಕೆ ಸದಸ್ಯರಲ್ಲಿ ಯಾರೂ ಪರಿಶಿಷ್ಟ ಜಾತಿಯವರಿಲ್ಲ. ಹಾಗಾಗಿ ಮೇಯರ್‌ ಹುದ್ದೆಗಾಗಿ ಗುರುವಾರ ನಡೆಯಲಿರುವ ಮತದಾನದಲ್ಲಿ ಮನೋಜ್ ಅವರೇ ಮೇಯರ್‌ ಆಗಿ ಆಯ್ಕೆಯಾಗುವುದು ಬಹುತೇಕ ನಿಶ್ಚಿತ.

ಮನೋಜ್‌ ಕುಮಾರ್‌ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ದೇರೇಬೈಲ್ ಉತ್ತರ ವಾರ್ಡ್‌ನ (ವಾರ್ಡ್ ಸಂಖ್ಯೆ 17) ಸದಸ್ಯ. ಅವರು ತೆರಿಗೆ ವಿಶ್ಲೇಷಣೆ, ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಗಳಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಮೊದಲ ಪ್ರಯತ್ನದಲ್ಲೇ ಪಾಲಿಕೆ ಸದಸ್ಯರಾಗಿರುವ ಅವರಿಗೆ ಮೊದಲ ಅವಧಿಯಲ್ಲೇ ಮೇಯರ್‌ ಗಾದಿಗೆ ಏರುವ ಅವಕಾಶ ಒದಗಿ ಬಂದಿದೆ.

ಉಪಮೇಯರ್‌ ಭಾನುಮತಿ ಪಿ.ಎಸ್‌.ಅವರು ಬೋಳಾರ ವಾರ್ಡ್‌ನ ( ವಾರ್ಡ್ ಸಂಖ್ಯೆ 58) ಸದಸ್ಯೆ. ಅವರಿಗೂ ಪಾಲಿಕೆ ಸದಸ್ಯೆಯಾದ ಮೊದಲ ಅವಧಿಯಲ್ಲೇ ಉಪಮೇಯರ್‌ ಆಗುವ ಅವಕಾಶ ಲಭಿಸಿದೆ. ಅವರು ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿಸಮಿತಿಯಲ್ಲಿ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದರು.

ಉಪಮೇಯರ್‌ ಹುದ್ದೆಯು ಹಿಂದುಳಿದ ವರ್ಗದ ಮಹಿಳೆಗೆ ಮೀಸಲಿದೆ. ಕಾಂಗ್ರೆಸ್‌ ಪಕ್ಷವು ಬಂದರ್ (ವಾರ್ಡ್‌ ಸಂಖ್ಯೆ 44) ವಾರ್ಡ್‌ನ ಸದಸ್ಯೆ ಝಿನತ್ ಸಂಶುದ್ದೀನ್ ಅವರನ್ನು ಉಪಮೇಯರ್‌ ಚುನಾವಣೆಯಲ್ಲಿ ಕಣಕ್ಕಿಳಿಸಲು ನಿರ್ಧರಿಸಿದೆ.

ಈಗಿನ ಚುನಾಯಿತ ಕೌನ್ಸಿಲ್‌ ಅವಧಿ 2025ರ ಫೆ. 27ಕ್ಕೆ ಕೊನೆಯಾಗಲಿದೆ. ಹಾಗಾಗಿ ನೂತನ ಮೇಯರ್‌ ಮತ್ತು ಉಪ ಮೇಯರ್‌ಗೆ ಕೇವಲ ಐದು ತಿಂಗಳ ಅಧಿಕಾರಾವಧಿ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT