ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ‘ಬೊಂಡ ಫ್ಯಾಕ್ಟರಿ’ ಎಳನೀರು ಕುಡಿದು ಅಸ್ವಸ್ಥ

Published 11 ಏಪ್ರಿಲ್ 2024, 16:15 IST
Last Updated 11 ಏಪ್ರಿಲ್ 2024, 16:15 IST
ಅಕ್ಷರ ಗಾತ್ರ

ಮಂಗಳೂರು: ನಗರ ಹೊರವಲಯದ ಅಡ್ಯಾರ್‌ನಲ್ಲಿರುವ ‘ಬೊಂಡ ಫ್ಯಾಕ್ಟರಿ’ಯಲ್ಲಿ ಎಳನೀರು ಕುಡಿದು ಹಲವು ಮಂದಿ ಅಸ್ವಸ್ಥರಾಗಿದ್ದಾರೆ. ವಾಂತಿ ಮತ್ತು ಬೇಧಿ ಕಾಣಿಸಿಕೊಂಡ 137 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

ಬೊಂಡ ಫ್ಯಾಕ್ಟರಿಯಲ್ಲಿ ಎಳನೀರಿನ ತೆಂಗಿನಲ್ಲಿಯ ಕೊಬ್ಬರಿಯಿಂದ ಐಸ್ಕ್ರೀಂ ತಯಾರಿಸಲಾಗುತ್ತದೆ. ಅದರಲ್ಲಿಯ ಎಳನೀರನ್ನು ಲೀಟರ್‌ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತದೆ. ಏ.8ರಂದು ಇಲ್ಲಿಂದ ಎಳನೀರು ಖರೀದಿಸಿಕೊಂಡು ಹೋದವರು 9ರಂದು ಅಸ್ವಸ್ಥರಾಗಿದ್ದರು. ಅನಾರೋಗ್ಯ ಹೆಚ್ಚಾಗುತ್ತಿದ್ದಂತೆ ಬಂಟ್ವಾಳ ತಾಲ್ಲೂಕಿನ ತುಂಬೆಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆ, ಬಿ.ಸಿ ರೋಡ್‌ನ ಪೆರ್ಲಿಯ ಆಸ್ಪತ್ರೆ, ಬಂಟ್ವಾಳ ತಾಲ್ಲೂಕು ಆಸ್ಪತ್ರೆ, ಕಲ್ಲಡ್ಕದ ಪುಷ್ಪರಾಜ್ ಆಸ್ಪತ್ರೆ, ಮಂಗಳೂರಿನ ಹೈಲ್ಯಾಂಡ್‌, ಯುನಿಟಿ, ಕಣಚೂರು, ಯೆನೆಪೋಯ, ಇಂಡಿಯಾನ, ಕೊಲಾಸೊ ಮತ್ತಿತರ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರು.

‘ಅಸ್ವಸ್ಥಗೊಂಡ ಹಲವರನ್ನು ಭೇಟಿಯಾಗಿ ಮಾತನಾಡಿಸಿದ್ದೇನೆ. ಅವರು ಕೊಟ್ಟ ಮಾಹಿತಿ ಪ್ರಕಾರ ವಿಷಾಹಾರ ಸೇವನೆಯ ಲಕ್ಷಣಗಳು ಕಂಡುಬಂದಿವೆ. ಬೊಂಡ ಫ್ಯಾಕ್ಟರಿಯ ಎಳನೀರು ಕುಡಿದವರಲ್ಲಿ ಮಾತ್ರ ಸಮಸ್ಯೆ ತಲೆದೋರಿರುವುದರಿಂದ ಸಮಸ್ಯೆಗೆ ಆ ಫ್ಯಾಕ್ಟರಿಯ ಎಳನೀರೇ ಕಾರಣ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಡ್ಯಾರ್‌ ಮತ್ತು ಕಾರ್‌ ಸ್ಟ್ರೀಟ್‌ನಲ್ಲಿರುವ ಮಳಿಗೆಗಳಿಗೆ ಬೀಗ ಜಡಿಯಲಾಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೊಂಡ ಫ್ಯಾಕ್ಟರಿಯ 15 ಲೀಟರ್‌ ಎಳನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಯೋಗಾಲಯದ ಫಲಿತಾಂಶ ಬಂದ ನಂತರ ನಿಖರ ಕಾರಣ ತಿಳಿಯಲಿದೆ. ಹೊರರೋಗಿಗಳಾಗಿ 84 ಮಂದಿ ಮತ್ತು ಒಳರೋಗಿಗಳಾಗಿ 53 ಮಂದಿ ಚಿಕಿತ್ಸೆ ಪಡೆದಿದ್ದು 23 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಆಸ್ಪತ್ರೆಯಲ್ಲಿರುವ ಎಲ್ಲರ ಆರೋಗ್ಯ ಸ್ಥಿರವಾಗಿದ್ದು ಆರೋಗ್ಯ ಇಲಾಖೆ ನಿರಂತರವಾಗಿ ಪರಿಸ್ಥಿತಿಯ ಅವಲೋಕನ ಮಾಡುತ್ತಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT