ಮಂಗಳೂರು: ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಗೆ ಯಾವ ಸಂದರ್ಭದಲ್ಲಾದರೂ ಹೋಗಿ, ಪ್ರತಿಯೊಬ್ಬರ ಕೈಯಲ್ಲೂ ಪ್ಲಾಸ್ಟಿಕ್ ಕೈಚೀಲ ಇದ್ದೇ ಇರುತ್ತದೆ. ಒಂದಲ್ಲ, ಎರಡಲ್ಲ, ಕೆಲವರ ಕೈಯಲ್ಲಿ ನಾಲ್ಕೈದು ಚೀಲ. ಬಂದರು ಪ್ರದೇಶದ ಹೋಲ್‌ಸೇಲ್ ಮತ್ತು ಚಿಲ್ಲರೆ ಅಂಗಡಿಗಳಿರಲಿ, ವಿವಿಧ ಕಡೆಗಳ ವಾರದ ಸಂತೆ ಇರಲಿ, ಬಡಾವಣೆಗಳ ಕಿರಾಣಿ ಅಂಗಡಿಗಳಿರಲಿ, ಹಣ್ಣು– ತರಕಾರಿ ಮಾರಾಟದ ಸ್ಟಾಲ್‌ಗಳಿರಲಿ... ಇಲ್ಲೆಲ್ಲ ಪ್ಲಾಸ್ಟಿಕ್ ಬ್ಯಾಗ್‌ಗಳು ಕಾಣಿಸದೇ ಇರಲು ಸಾಧ್ಯವೇ ಇಲ್ಲ. ಆದರೂ ಅಧಿಕಾರಿಗಳ ಪ್ರಕಾರ ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಆಗಿದೆ!
ಜಿಲ್ಲೆಯಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿರ್ಮೂಲನೆ ಮಾಡಲು ವಿಶೇಷ ಅಭಿಯಾನ ಕೈಗೊಳ್ಳುವಂತೆಯೂ ಮಂಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತ, ಮಾದರಿ ನಗರವನ್ನಾಗಿಸುವಂತೆಯೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜೂನ್ 25ರಂದು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಆದರೆ, ನಿಷೇಧ ಪರಿಣಾಮಕಾರಿಯಾಗಿಲ್ಲ ಎಂಬುದಕ್ಕೆ ಕನ್ನಡಿ ಹಿಡಿದಂತಿದೆ, ಪ್ಲಾಸ್ಟಿಕ್ ಬಳಕೆ.
8 ವರ್ಷಗಳ ಹಿಂದಿನ ಆದೇಶ
ಸಚಿವರು ನಿಷೇಧದ ಆದೇಶವನ್ನು ಈ ವರ್ಷ ನೀಡಿದ್ದರೂ ಏಕಬಳಕೆ ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿ 2016ರಲ್ಲೇ ಸರ್ಕಾರ ಆದೇಶ ಹೊರಡಿಸಿತ್ತು. 2022ರಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶವೂ ಹೊರಬಿದ್ದಿತ್ತು. ಆದೇಶ ಕಾರ್ಯಗತಗೊಳಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಕಚೇರಿ ಕಳೆದ ವರ್ಷವಷ್ಟೇ ಮುಂದಾಗಿತ್ತು. ಕಳೆದ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಈ ಕುರಿತು ಆದೇಶಗಳು ಹೊರಬಿದ್ದಿದ್ದವು. ಆದರೂ ನಿಯಂತ್ರಣಕ್ಕೆ ಸೂಕ್ತ ಕ್ರಮ ಅಗಲಿಲ್ಲ. ಈ ವರ್ಷ ಜನವರಿ 25ರಂದು ಅರಣ್ಯ, ಪರಿಸರ ಮತ್ತು ಜೀವವಿಜ್ಞಾನ ಇಲಾಖೆಯು ಆನ್‌ಲೈನ್ ಸಭೆಯನ್ನೂ ಆಯೋಜಿಸಿತ್ತು. ನಂತರವೂ ಮಹತ್ವದ ಬೆಳವಣಿಗೆ ಏನೂ ಆಗಿರಲಿಲ್ಲ. ಕೆಡಿಪಿ ಸಭೆಯಲ್ಲಿ ಸಚಿವರು ಸೂಚಿಸಿದ ನಂತರವಷ್ಟೇ ನಿಷೇಧಕ್ಕೆ ರೂಪುರೇಷೆ ಸಿದ್ಧಗೊಂಡದ್ದು.
ಸರ್ಕಾರದ ಅಧಿಸೂಚನೆಯಂತೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್, ಪ್ಲೇಟ್, ಧ್ವಜ, ಕಪ್, ಸ್ಪೂನ್, ಫಿಲ್ಮ್, ಡೈನಿಂಗ್ ಟೇಬಲ್ ಮೇಲೆ ಹರಡುವ ಹಾಳೆ, ಸ್ಟ್ರಾ ಇತ್ಯಾದಿಗಳ ಉತ್ಪಾದನೆ, ಸಂಗ್ರಹ, ವಿತರಣೆ, ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ. ಕೇಂದ್ರದ ಪರಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ ನಿಷೇಧಿತ 20 ವಸ್ತುಗಳ ಪಟ್ಟಿಯನ್ನು 2021ರಲ್ಲಿ ಬಿಡುಗಡೆ ಮಾಡಿತ್ತು. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ 2016ರ ನಿಯಮಗಳಿಗೆ ತಿದ್ದುಪಡಿ ತಂದು 2021ರಲ್ಲಿ ಹೊಸ ನಿಯಮ ಜಾರಿಗೆ ತರಲಾಯಿತು. ಇದರ ಕಟ್ಟುನಿಟ್ಟಿನ ಜಾರಿಗಾಗಿ ಮಂಗಳೂರು ನಗರ ಮತ್ತು ಧರ್ಮಸ್ಥಳವನ್ನು ಆಯ್ಕೆ ಮಾಡಲಾಗಿತ್ತು. ಧರ್ಮಸ್ಥಳದಲ್ಲಿ ಬಹುತೇಕ ಇದು ಜಾರಿಯಾಗಿದ್ದರೂ ಮಂಗಳೂರಿನಲ್ಲಿ ಸವಾಲಾಗಿಯೇ ಉಳಿದಿದೆ.
‘ಏಕಬಳಕೆ ಪ್ಲಾಸ್ಟಿಕ್ ಕೊಡು– ಕೊಳ್ಳುವಿಕೆ ಕಡಿಮೆಯಾಗಬೇಕಾದರೆ ಜನರ ಸಹಕಾರ ಬೇಕು. ಎಲ್ಲರೂ ಮನಸ್ಸು ಮಾಡಿದರೆ ಪ್ಲಾಸ್ಟಿಕ್‌ಗೆ ಕಡಿವಾಣ ಹಾಕಬಹುದು’ ಎಂದು ಅಧಿಕಾರಿಗಳು ಹೇಳಿದರೆ ‘ಫ್ಯಾಕ್ಟರಿಯಲ್ಲಿ ಪ್ಲಾಸ್ಟಿಕ್ ಉತ್ಪಾದನೆಯ ಮೇಲೆ ಮೊದಲು ನಿಯಂತ್ರಣ ಹೇರಬೇಕು. ಅದನ್ನು ಮಾಡದೆ ದಂಡ ವಸೂಲಿ ಮೇಲೆ ಮಾತ್ರ ಕಣ್ಣಿಟ್ಟು ನಮ್ಮನ್ನು ಕಾಡಿದರೆ ಹೇಗೆ’ ಎಂದು ಅಂಗಡಿ, ಮಳಿಗೆಯವರು ಕೇಳುತ್ತಾರೆ. ಪ್ಲಾಸ್ಟಿಕ್ ನಿಷೇಧಕ್ಕಾಗಿ ಮಹಾನಗರ ಪಾಲಿಕೆ ಮತ್ತು ಪರಿಸರ ಇಲಾಖೆ ಇರಿಸಿರುವ ಹೆಜ್ಜೆ ಎಡವಿದ್ದು ಕೂಡ ಇಂಥ ದ್ವಂದ್ವದಿಂದಲೆ.
‘ಫ್ಯಾಕ್ಟರಿಯಿಂದ ನಗರಕ್ಕೆ ಬರುತ್ತದೆ, ನಾವು ತರಿಸಿಕೊಳ್ಳುತ್ತೇವೆ. ಇದು ನಕಲಿ ಐಟಂ ಏನೂ ಅಲ್ಲ, ಕಂಪನಿಯಿಂದಲೇ ಬರುವ ಒರಿಜಿನಲ್ ಪ್ಲಾಸ್ಟಿಕ್. ನಕಲಿಯನ್ನು ನಾವು ಇರಿಸಿಕೊಳ್ಳುವುದೇ ಇಲ್ಲ. ಆದರೆ ರೈಡ್ ಮಾಡಲು ಬರುವವರು ಒರಿಜಿನಲ್ ಐಟಂ ಕೂಡ ತೆಗೆದುಕೊಂಡು ಹೋಗುತ್ತಾರೆ. ಅವರಿಗೆ ದುಡ್ಡಷ್ಟೇ ಬೇಕಾಗಿರುವುದು’ ಎಂದು ಹೇಳುವ ಹಂಪನಕಟ್ಟೆ ಮಾರುಕಟ್ಟೆಯ ವ್ಯಾಪಾರಿ ಮುಸ್ತಫ ಅವರಿಗೆ ಏಕಬಳಕೆ ಪ್ಲಾಸ್ಟಿಕ್, ಬಟ್ಟೆ ಅಥವಾ ಕಾಗದದ ಕೈಚೀಲ ಇತ್ಯಾದಿ ಯಾವುದರ ಬಗ್ಗೆಯೂ ಮಾಹಿತಿ ಇಲ್ಲ. ಹಣ ಕೊಟ್ಟು ಫ್ಯಾಕ್ಟರಿಯಿಂದ ಖರೀದಿಸುವ ವಸ್ತುಗಳೆಲ್ಲವೂ ಅಸಲಿ ಎಂಬುದು ಅವರ ಅನಿಸಿಕೆ.
ಬಂದರು ಮುಖ್ಯರಸ್ತೆಯಲ್ಲಿ ಸಣ್ಣ ಅಂಗಡಿ ನಡೆಸುತ್ತಿರುವ ಇಸ್ಮಾಯಿಲ್ ಕೂಡ ಅಧಿಕಾರಿಗಳನ್ನೇ ದೂರುತ್ತಾರೆ. ‘ಫ್ಯಾಕ್ಟರಿಯಲ್ಲಿ ಉತ್ಪಾದನೆ ಆಗುವುದನ್ನು ಬಂದ್ ಮಾಡಬೇಕು. ಅದನ್ನು ಮಾಡದೆ ಇಲ್ಲಿಗೆ ಬಂದು ರೈಡ್ ಮಾಡಿ ಏನು ಪ್ರಯೋಜನ? ಪ್ಲಾಸ್ಟಿಕ್ ಬ್ಯಾಗ್ ಕೊಡದೇ ಇದ್ದರೆ ಜನರು ಕೇಳುವುದಿಲ್ಲ. ವ್ಯಾಪಾರ ಮಾಡದೇ ಹೋದರೆ ನಮಗೆ ನಷ್ಟ. ನಾನು ಕೊಡದೇ ಇದ್ದರೂ ಇನ್ನೊಂದು ಅಂಗಡಿಯವರು ಕೊಟ್ಟೇ ಕೊಡುತ್ತಾರೆ. ಆದ್ದರಿಂದ ಮೂಲವನ್ನೇ ತಡೆಯಬೇಕು’ ಎಂಬುದು ಅವರ ವಾದ.
ಜಿಲ್ಲಾಧಿಕಾರಿ ಆಯೋಜಿಸಿದ್ದ ಸಭೆಯ ನಂತರ ಅಲ್ಲಲ್ಲಿ ದಾಳಿ ನಡೆಸಿ ಪ್ಲಾಸ್ಟಿಕ್ ಬ್ಯಾಗ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ. ಆದರೂ ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗಲಿಲ್ಲ ಎಂಬ ದೂರುಗಳು ನಿರಂತರವಾಗಿ ಕೇಳಿಬರುತ್ತಿವೆ. ಅನಧಿಕೃತ ಫ್ಯಾಕ್ಟರಿಗಳನ್ನು ಹುಡುಕಿ ದಾಳಿ ನಡೆಸುವುದು ಮತ್ತು ‘ಹೊರಗಿನಿಂದ’ ಪ್ಲಾಸ್ಟಿಕ್ ಬರುವುದನ್ನು ತಡೆಯುವುದು ಸವಾಲಾಗಿದೆ ಎಂದು ಕೆಲವು ಸಿಬ್ಬಂದಿಯೇ ಅಳಲು ತೋಡಿಕೊಂಡಿದ್ದಾರೆ.
ಸದ್ಯದ ಕಾರ್ಯಾಚರಣೆ ಹೇಗೆ?
ನಗರದ 60 ವಾರ್ಡ್‌ಗಳಿಗೆ ಒಟ್ಟು 10 ಮಂದಿ ಆರೋಗ್ಯ ನಿರೀಕ್ಷಕರು ಇದ್ದಾರೆ. ಪ್ಲಾಸ್ಟಿಕ್ ಬಳಕೆ ತಡೆಯುವ ಜವಾಬ್ದಾರಿ ಅವರಿಗೆ ನೀಡಲಾಗಿದೆ. ಒಬ್ಬೊಬ್ಬರಿಗೆ 5ರಿಂದ 6 ವಾರ್ಡ್‌ಗಳನ್ನು ನಿಗದಿ ಮಾಡಲಾಗಿದೆ. ಒಂದು ವಾರ್ಡ್‌ನಲ್ಲಿ ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ದಾಳಿ ನಡೆಸುವುದು ಕಡ್ಡಾಯ.
‘ಎಲ್ಲ ಕಡೆಗಳಲ್ಲಿ ದಾಳಿಯಿಂದಲೇ ಪ್ಲಾಸ್ಟಿಕ್ ಬಳಕೆ ತಡೆಯುವುದು ಸುಲಭದ ಕೆಲಸವಲ್ಲ. ಮೊತ್ತಮೊದಲು ಜನರಲ್ಲಿ ಜಾಗೃತಿ ಮೂಡಬೇಕು. ಪ್ಲಾಸ್ಟಿಕ್‌ಗೆ ಬದಲು ಏನು ಬಳಸಬಹುದು ಎಂಬುದರ ಬಗ್ಗೆ ಅವರಿಗೆ ತಿಳಿದಿರಬೇಕು. ಪ್ರತಿ ಪ್ರದೇಶಗಳಲ್ಲಿ ಬದಲಿ ವಸ್ತು ಲಭ್ಯ ಇರುವಂತೆ ಮಾಡುವ ಕಾರ್ಯ ನಡೆಯುತ್ತಿದೆ. ಬಂದರ್ ರಸ್ತೆಯಲ್ಲಿ ಇದು ಆರಂಭವಾಗಿದೆ. ಅಲ್ಲಿ ಏಕಬಳಕೆ ಪ್ಲಾಸ್ಟಿಕ್ ಬದಲಿಗೆ ಪರಿಸರ ಸ್ನೇಹಿ ವಸ್ತುಗಳು ಕಾಣಿಸುತ್ತಿವೆ’ ಎಂದು ಮಹಾನಗರ ಪಾಲಿಕೆ ಪರಿಸರ ಎಂಜಿನಿಯರ್ ದಯಾನಂದ ಅನಿಲ್ ಪೂಜಾರಿ ತಿಳಿಸಿದರು.
ಆದರೆ ವಾಸ್ತವ ಬೇರೆಯೇ ಇದೆ. ಅಧಿಕಾರಿಗಳು ‘ಬದಲಿ’ ವ್ಯವಸ್ಥೆ ಮಾಡಿ ವಾಪಸಾದ ಬೆನ್ನಲ್ಲೇ ಅಂಗಡಿಯವರು ಮತ್ತು ಸಾರ್ವಜನಿಕರು ಮತ್ತೆ ಪ್ಲಾಸ್ಟಿಕ್‌ಗೇ ಮೊರೆಹೋಗುತ್ತಾರೆ. ಕೆಲವು ಅಂಗಡಿಗಳ ಮುಂದೆ ಕೈಚೀಲಗಳನ್ನು ತೂಗುಹಾಕಲಾಗಿದೆ. ಒಂದಕ್ಕೆ ₹160ರಿಂದ ₹200ರ ವರೆಗೆ ಇದೆ. ಆದರೆ ಅಲ್ಲಿಗೆ ಬರುವ ಗ್ರಾಹಕರು ಪ್ಲಾಸ್ಟಿಕ್ ಚೀಲವನ್ನೇ ಬಯಸುತ್ತಾರೆ.
‘ಪರಿಸರ ಸ್ನೇಹಿ ಕೈಚೀಲಗಳನ್ನು ಇರಿಸುವಂತೆ ನಮಗೆ ಯಾರೂ ಹೇಳಿಲ್ಲ. ನಮ್ಮ ಸ್ವಂತ ಕಾಳಜಿಯಿಂದ ತಂದಿರಿಸಿದ್ದೇವೆ. ಆದರೆ ಅವುಗಳನ್ನು ಕೊಳ್ಳುವ ಗ್ರಾಹಕರು ತೀರಾ ಕಡಿಮೆ. ಇಲ್ಲಿ ಸುತ್ತಮುತ್ತಲನಲ ಜನರಿಗೆ ಸ್ವಲ್ಪ ಕಾಳಜಿ ಇದೆ. ಅವರು ಮನೆಯಿಂದ ಬರುಬಳಕೆ ಮಾಡಬಹುದಾದ ಚೀಲ ತೆಗೆದುಕೊಂಡು ಬರುತ್ತಾರೆ. ಹೊರಗಿನಿಂದ ಬರುವವರು ಪ್ಲಾಸ್ಟಿಕ್ ಚೀಲ ಬಯಸುತ್ತಾರೆ. ಕೊಡದೇ ಇರುವುದಕ್ಕೆ ಆಗುವುದಿಲ್ಲ’ ಎನ್ನುತ್ತಾರೆ ಅಂಗಡಿ ಮಾಲೀಕರು.
ಏಕಬಳಕೆ ಪ್ಲಾಸ್ಟಿಕ್ ಚೀಲ ತಯಾರಿಸಿ ವಿತರಿಸುವ ಫ್ಯಾಕ್ಟರಿಗಳ ಮೇಲೆ ಕ್ರಮ ಕೈಗೊಂಡರೂ ಹಿಂಬಾಗಿಲಿನಿಂದ ಪ್ಲಾಸ್ಟಿಕ್ ಚೀಲಗಳನ್ನು ನಗರಕ್ಕೆ ತಲುಪಿಸುವ ಜಾಲ ಇದೆ. ಅವರ ಮೇಲೆ ನಿಗಾ ಇರಿಸಬೇಕಾದ ಅಗತ್ಯವಿದೆ ಎಂದು ಸಿಬ್ಬಂದಿಯೊಬ್ಬರು ಹೇಳಿದರು.
ಪರಿಸರ ಇಲಾಖೆ ಮತ್ತು ಸ್ಥಳೀಯಾಡಳಿತದ ‘ವ್ಯಾಪ್ತಿ’ ಸಮಸ್ಯೆ ಮತ್ತೊಂದು ಸವಾಲು. ‘ಆದೇಶಗಳನ್ನು ಜಾರಿ ಮಾಡುವುದಷ್ಟೇ ನಮ್ಮ ಕೆಲಸ. ಕಾರ್ಯಗತ ಮಾಡಲು ಸ್ಥಳೀಯಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಪರಿಸರ ಇಲಾಖೆಯವರು ಹೇಳಿದರೆ ‘ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲರೂ ಕೈಜೋಡಿಸಿದರೆ ಮಾತ್ರ ಸಮರ್ಪಕವಾಗಿ ತಡೆಯಲು ಸಾಧ್ಯ’ ಎಂದು ನಗರ ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.
ವಿಲೇವಾರಿಯೂ ಸಮಸ್ಯೆಯೇ?
ದಾಳಿ ಮಾಡಿ ವಶಪಡಿಸಿಕೊಂಡ ನಿಷೇಧಿತ ಪ್ಲಾಸ್ಟಿಕ್ ವಿಲೇವಾರಿಯೂ ಸವಾಲಾಗಿದೆ. ಟನ್‌ಗಟ್ಟಲೆ ಪ್ಲಾಸ್ಟಿಕ್ ಸಂಗ್ರಹಿಸಿಡಲು ಮತ್ತು ನಾಶಪಡಿಸಲು ವ್ಯವಸ್ಥೆ ಆಗಬೇಕಾಗಿದೆ. ‘ವಿವಿಧ ಇಲಾಖೆಗಳು ಜೊತೆಗೂಡಿ ಕಾರ್ಯಾಚರಣೆ ನಡೆಸುತ್ತಿದ್ದು ಈಗಾಗಲೇ ಅಂಗಡಿಗಳಿಂದ ಸುಮಾರು 5 ಟನ್‌ಗಳಿಗೂ ಹೆಚ್ಚು ಮತ್ತು ಫ್ಯಾಕ್ಟರಿಗಳಿಂದ 12 ಟನ್‌ಗಳಿಗೂ ಹೆಚ್ಚು ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಮರುಬಳಕೆಗೆ ಅಥವಾ ಸಿಮೆಂಟ್ ತಯಾರಿಕಾ ಘಟಕಗಳಿಗೆ ಕೊಡಬೇಕು. ಅದಕ್ಕಾಗಿ ಕಲಬುರಗಿ ಅಥವಾ ರಾಯಚೂರು ಕಡೆಗೆ ಸಾಗಿಸಬೇಕು. ಇದು ಕೂಡ ದೊಡ್ಡ ಸಮಸ್ಯೆ’ ಎಂದು ಸಹಾಯಕ ಪರಿಸರ ಅಧಿಕಾರಿ ಮಂಜು ರಾಜಣ್ಣ ತಿಳಿಸಿದರು.
ಮಾಲ್‌ಗಳಲ್ಲಿ ‘ಔದಾರ್ಯ’
ನಗರದ ಕೆಲವು ಮಾಲ್‌ಗಳಲ್ಲಿ ಪ್ಲಾಸ್ಟಿಕ್ ಬದಲಿಗೆ ಪೇಪರ್ ಅಥವಾ ಬಟ್ಟೆ ಚೀಲಗಳನ್ನು ಕೊಡುತ್ತಾರೆ. ಅದರೆ ಬಟ್ಟೆ ಚೀಲಗಳನ್ನು ಗ್ರಾಹಕರು ಖರೀದಿಸಬೇಕಾಗುತ್ತದೆ. ಹೀಗಾಗಿ ಹೆಚ್ಚಿನವರು ಮನೆಯಿಂದಲೇ ಚೀಲಗಳನ್ನು ತೆಗೆದುಕೊಂಡು ಬರುತ್ತಾರೆ.
‘ಸಾಮಾನ್ಯವಾಗಿ ಎಲ್ಲರೂ ಬ್ಯಾಗ್ ತೆಗೆದುಕೊಂಡು ಬರುತ್ತಾರೆ. ನಾವು ಕೂಡ ಪರಿಚಯಸ್ಥರಿಗೆ ಬ್ಯಾಗ್ ತರಲು ಹೇಳುತ್ತೇವೆ. ಕನಿಷ್ಠ ಒಂದು ಸಾವಿರ ರೂಪಾಯಿ ವ್ಯಾಪಾರ ಮಾಡಿದರೆ ಬಟ್ಟೆ ಬ್ಯಾಗ್ ಉಚಿತವಾಗಿ ಕೊಡುತ್ತೇವೆ. ಎಲ್ಲರಿಗೂ ಕೊಟ್ಟರೆ ನಮಗೆ ಅಸಲು ಆಗಲಿಕ್ಕಿಲ್ಲ’ ಎನ್ನುತ್ತಾರೆ ನಗರದ ಆ್ಯಪಲ್ ಮಾರ್ಟ್ ವ್ಯವಸ್ಥಾಪಕ ಅಶ್ವಾನ್.
‘ಪ್ಲಾಸ್ಟಿಕ್ ಚೀಲ ಕೊಟ್ಟರೆ ವಾಸ್ತವದಲ್ಲಿ ನಮಗೆ ನಷ್ಟ. ಒಂದು ಪ್ಯಾಕೆಟ್ ಪ್ಲಾಸ್ಟಿಕ್ ಚೀಲಕ್ಕೆ ₹ 160 ಕೊಡಬೇಕು. ಹಣ್ಣು-ತರಕಾರಿಯನ್ನು ಕಾಗದದಲ್ಲಿ ಕಟ್ಟಿಕೊಡಲು ಆಗುವುದಿಲ್ಲ. ಮಳೆಗಾಲದಲ್ಲಂತೂ ಪ್ಲಾಸ್ಟಿಕ್ ಬೇಕೇಬೇಕು. ಗ್ರಾಹಕರು ತಂದರೆ ಒಳ್ಳೆಯದು. ಇಲ್ಲದಿದ್ದರೆ ಏನುಮಾಡುವುದು’ ಎಂದು ಕೇಳುತ್ತಾರೆ ಮಲ್ಲಿಕಟ್ಟೆ ತರಕಾರಿ ಹಣ್ಣು ಅಂಗಡಿ ಜಾವೇದ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.