ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಕು ನೀರಿನಲ್ಲಿ ಅದ್ದಿದ ಮಡಿಕೆಯಲ್ಲಿ ಪಾನೀಯ ಮಾರಾಟ; 'ಮಟ್ಕಾ ಸೋಡಾ' ಮಳಿಗೆ ಬಂದ್

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೊ
Published 25 ಅಕ್ಟೋಬರ್ 2023, 14:03 IST
Last Updated 25 ಅಕ್ಟೋಬರ್ 2023, 14:03 IST
ಅಕ್ಷರ ಗಾತ್ರ

ಮಂಗಳೂರು: ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನದ ಬಳಿ ದಸರಾ ಉತ್ಸವದ ಸಂದರ್ಭದಲ್ಲಿ ಬೀದಿ ಬದಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಮಟ್ಕಾ ಸೋಡಾ ಮಾರಾಟ ಮಳಿಗೆಯಲ್ಲಿ ಕೊಳಕು ನೀರಿನಲ್ಲಿ ಮಡಿಕೆಗಳನ್ನು ಮುಳುಗಿಸಿ, ಅದರಲ್ಲೇ ಸೋಡಾ ಮಾರಾಟ ಮಾಡುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಆ ಮಳಿಗೆಯ ತಪಾಸಣೆ ನಡೆಸಿದ್ದು, ಅದನ್ನು ಮುಚ್ಚಿಸಿದ್ದಾರೆ. ದಸರಾ ಉತ್ಸವದ ಸಂದರ್ಭದಲ್ಲಿ ಬಟಾಟೆ ಟ್ವಿಸ್ಟರ್‌, ಲೈಮ್‌ ಸೋಡಾ, ಗೋಭಿ ಮಂಚೂರಿ, ಕಬ್ಬಿನಹಾಲು ಮುಂತಾದ ಆಹಾರ ಪದಾರ್ಥ ಮಾರಾಟ ಮಾಡುವ ತಾತ್ಕಾಲಿಕ ಮಳಿಗೆಗಳನ್ನೂ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಜಾತ್ರೆ ಸಂದರ್ಭದಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುವಾಗ ಶುಚಿತ್ವದ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದಾರೆ.

‘ಕೊಳಕು ನೀರಿನಲ್ಲಿ ಮಡಿಕೆ ತೊಳೆದು ಅದರಲ್ಲೇ ಗ್ರಾಹಕರಿಗೆ ಪಾನೀಯ ನೀಡುತ್ತಿರುವ ಮಾಹಿತಿ ಬಂದ ತಕ್ಷಣವೇ ನಮ್ಮ ಅಧಿಕಾರಿಗಳು ಮಳಿಗೆಗೆ ಭೇಟಿ ನೀಡಿ, ಅದನ್ನು ಮುಚ್ಚಿಸಿದ್ದಾರೆ. ಮಳಿಗೆಯ ಎಲ್ಲ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ’ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಟ್ಕಾ ಸೋಡಾ ಮಳಿಗೆಯನ್ನು ಬೆಂಗಳೂರಿನ ಮಹಿಳೆಯೊಬ್ಬರು ಹರಾಜಿನಲ್ಲಿ ಖರೀದಿಸಿದ್ದರು. ಅವರನ್ನು ಪತ್ತೆ ಹಚ್ಚಿ ದಂಡ ವಿಧಿಸುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

‘ಜಾತ್ರೆಯ ಸಂದರ್ಭದಲ್ಲಿ ಪಾಲಿಕೆಯ ಜಾಗದಲ್ಲಿ ತಾತ್ಕಾಲಿಕ ಮಳಿಗೆ ಅಳವಡಿಸಲು ಆಯಾ ದೇವಸ್ಥಾನದವರೇ ಅವಕಾಶ ಮಾಡಿಕೊಡುತ್ತಿದ್ದಾರೆ. ಇಂತಹ ಮಳಿಗೆಗಳನ್ನು ಅಳವಡಿಸಲು ಪಾಲಿಕೆಯಿಂದ ಪ‍ರವಾನಗಿ ನೀಡಿರುವುದಿಲ್ಲ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಮಳಿಗೆಗಳಲ್ಲಿ ಶುಚಿತ್ವ ಕಾಪಾಡಲು ಪಾಲಿಕೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ. ಈ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರುತ್ತೇವೆ’ ಎಂದು ಅವರು ತಿಳಿಸಿದರು.

‘ಜಾತ್ರೆಗಳ ಸಂದರ್ಭದಲ್ಲಿ ತಾತ್ಕಾಲಿಕ ಮಳಿಗೆಗಳಿಗೆ ನಮ್ಮಿಂದ ಪರವಾನಗಿ ಪಡೆಯದಿದ್ದರೂ, ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಮಳಿಗೆಗಳ ಶುಚಿತ್ವದ ವ್ಯವಸ್ಥೆಯನ್ನು ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳ ತಂಡ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಪರಿಶೀಲಿಸಲಿದೆ. ಶುಚಿತ್ವ ಕಾಪಾಡುವುದಕ್ಕೆ ಸೂಕ್ತ ವ್ಯವಸ್ಥೆ ಹೊಂದಿರದ ಮಳಿಗೆಗಳನ್ನು ಮುಚ್ಚಿಸಲಿದ್ದೇವೆ. ಇದಕ್ಕಾಗಿಯೇ ವಿಶೇಷ ತಂಡವನ್ನು ರಚಿಸಲಿದ್ದೇವೆ’ ಎಂದು ಮಂಜಯ್ಯ ಶೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT