ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಮ್ಮೆಕೆರೆ ಈಜುಕೊಳಕ್ಕೆ ಇನ್ನಷ್ಟು ಸೌಕರ್ಯ: ಮೇಯರ್‌ ಸುಧೀರ್ ಶೆಟ್ಟಿ

77ನೇ ರಾಷ್ಟ್ರೀಯ ಸೀನಿಯರ್‌ ಈಜು ಚಾಂಪಿಯನ್‌ಷಿಪ್‌ ಉದ್ಘಾಟನೆ
Published : 11 ಸೆಪ್ಟೆಂಬರ್ 2024, 5:54 IST
Last Updated : 11 ಸೆಪ್ಟೆಂಬರ್ 2024, 5:54 IST
ಫಾಲೋ ಮಾಡಿ
Comments

ಮಂಗಳೂರು: ‘ಎಮ್ಮೆಕರೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿರುವ ಅಂತರರಾಷ್ಟ್ರೀಯ ಈಜುಕೊಳದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸಲು ಅಗತ್ಯ ಇರುವ  ಸೌಕರ್ಯಗಳನ್ನು ಒದಗಿಸಲು ಸಿದ್ಧ’ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.

ಎಮ್ಮೆಕರೆಯ ಅಂತರರಾಷ್ಟ್ರೀಯ ಈಜುಕೊಳದಲ್ಲಿ ಮಂಗಳವಾರ ಆರಂಭವಾದ 77ನೇ  ರಾಷ್ಟ್ರೀಯ ಸೀನಿಯರ್‌ ಈಜು ಚಾಂಪಿಯನ್‌ಷಿಪ್‌ನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸ್ಮಾರ್ಟ್‌ಸಿಟಿ ಯೋಜನೆಯಡಿ ಇಲ್ಲಿ ಅಂತರರಾಷ್ಟ್ರೀಯ ಈಜುಕೊಳ ನಿರ್ಮಿಸಿದ್ದರಿಂದ ಇವತ್ತು ನಮ್ಮ ನಗರಕ್ಕೂ ದೇಶದ ವಿವಿಧ ರಾಜ್ಯಗಳ ಈಜುಪಟುಗಳು  ಬರುವಂತಾಗಿದೆ.  ದೇಶಕ್ಕೆ ಅನೇಕ‌ ಕ್ರೀಡಾಪಟುಗಳನ್ನು ನೀಡಿದ  ನಮ್ಮ ನಗರವು, ಈಜು ಕ್ರೀಡೆಯಲ್ಲೂ ಇನ್ನಷ್ಟು ಉನ್ನತಿ ಸಾಧಿಸುವಂತಾಗಲಿ’ ಎಂದು ಹಾರೈಸಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ‘ಬೆಂಗಳೂರು ಹೊರತಾಗಿ ರಾಜ್ಯದಲ್ಲಿ ಇಷ್ಟು ದೊಡ್ಡ ಈಜು ಸ್ಪರ್ಧೆಗೆ ಆತಿಥ್ಯ ವಹಿಸಿದ ರಾಜ್ಯ ಏಕೈಕ ನಗರ ಮಂಗಳೂರು ಎಂಬ ಖುಷಿ ನಮ್ಮದು.  ಈ ಈಜುಕೊಳವನ್ನು ನಿರ್ಮಿಸಿದ ಆಶಯ ಈಡೇರಿದೆ. ಬೆಂಗಳೂರಿನಂತೆ  ಮಂಗಳೂರನ್ನು ಈಜು ಸ್ಪರ್ಧೆಯ  ಅಂತರರಾಷ್ಟ್ರೀಯ ತಾಣವಾಗಿ ಅಭಿವೃದ್ದಿಪಡಿಸಲಿದ್ದೇವೆ.  ಶಿಕ್ಷಣ ಕೇಂದ್ರವೆಂದು ಗುರುತಿಸಿಕೊಂಡ ಈ ನಗರವನ್ನು ಕ್ರೀಡಾ ಸಾಧನೆ ಮಾಡುವ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡುವಂತಾಗಬೇಕು’ ಎಂದರು. 

ಕರ್ನಾಟಕ ಈಜು ಸಂಸ್ಥೆಯ (ಕೆಎಸ್‌ಎ) ಅಧ್ಯಕ್ಷ ಗೊಪಾಲ್ ಬಿ.ಹೊಸೂರು, ‘ಈ ಚಾಂಪಿಯನ್ ಷಿಪ್ ಪದಕ ಗೆಲ್ಲಲಷ್ಟೇ ಸೀಮಿತವಾಗಿಲ್ಲ. ಮುಂದಿನ ತಲೆಮಾರುಗಳ ಕ್ರೀಡಾಳುಗಳಿಗೂ ಪ್ರೇರಣೆ ನೀಡುವುದು ನಮ್ಮ ಉದ್ದೇಶ. ಒಲಿಂಪಿಕ್ಸ್‌ನಂತಹ ಕ್ರೀಡಾಕೂಟದ ಈಜುಸ್ಪರ್ಧೆಗಳಲ್ಲೂ ಭಾರತದ ಧ್ವ‌ಜ ಹಾರಾಡುವುದಕ್ಕೆ ಈ ಕೂಟ ಪ್ರೇರಣೆ ಆಗಲಿ’ ಎಂದು ಆಶಿಸಿದರು. 

ಪಾಲಿಕೆ ಸದಸ್ಯರಾದ ದಿವಾಕರ, ರೇವತಿ ಶ್ಯಾಮಸುಂದರ್‌, ಭಾರತೀಯ ಈಜು ಒಕ್ಕೂಟ (ಎಸ್‌ಎಫ್‌ಯ) ಹಿರಿಯ ಉಪಾಧ್ಯಕ್ಷ ವೀರೇಂದ್ರ ನಾನಾವತಿ, ಕೆಎಸ್‌ಎ ಗೌರವ ಕಾರ್ಯದರ್ಶಿ ಎಂ.ಸತೀಶ್‌ ಕುಮಾರ್‌, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ. ನಗರ ಪೊಲೀಸ್‌ ಕಮಿಷನರ್ ಅನುಪಮ್ ಅಗರ್ವಾಲ್,  ಪಾಲಿಕೆಯ ಉಪಯುಕ್ತ (ಕಂದಾಯ) ಗಿರೀಶ್ ನಂದನ್, ಮಂಗಳೂರು ಸ್ಮಾರ್ಟ್‌ ಸಿಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ರಾಜು, ಪ್ರಧಾನ ವ್ಯವಸ್ಥಾಪಕ ಅರುಣ್ ಪ್ರಭಾ, ಯುವಜನ ಸಬಲೀಕರಣ ಇಲಾಖೆಯ ಉಪನಿರ್ದೇಶಕ ಪ್ರದೀಪ್‌ ಡಿಸೋಜ ಭಾಗವಹಿಸಿದ್ದರು. ಒಲಿಂಪಿಯನ್ ಶ್ರೀಹರಿ ನಟರಾಜ್‌ ಕ್ರೀಡಾ ಪ್ರತಿಜ್ಞೆ ಬೋಧಿಸಿದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT