ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದಿ ದೀಪ ಸಂಪರ್ಕಗಳಿಗೆ ಇಎಲ್‌ಸಿಬಿ ಅಳವಡಿಕೆ

ಇಬ್ಬರ ಸಾವಿನ ಬಳಿಕ ಎಚ್ಚೆತ್ತ ಪಾಲಿಕೆ
Published 28 ಜೂನ್ 2024, 3:17 IST
Last Updated 28 ಜೂನ್ 2024, 3:17 IST
ಅಕ್ಷರ ಗಾತ್ರ

ಮಂಗಳೂರು: ರೊಸಾರಿಯೊದಲ್ಲಿ ಆಟೊರಿಕ್ಷಾ ಚಾಲಕರಿಬ್ಬರು ವಿದ್ಯುತ್‌ ಸ್ಪರ್ಶದಿಂದ ಸಾವಿಗೀಡಾಗುವುದಕ್ಕೆ ಎಲ್‌ಟಿ ವಿದ್ಯುತ್‌ ಮಾರ್ಗದಲ್ಲಿ ಬೀದಿ ದೀಪಕ್ಕೆ ಸಂಪರ್ಕಿಸಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದೇ ಕಾರಣ ಎಂದು ಗೊತ್ತಾಗಿದೆ. ಈ  ದುರ್ಘಟನೆಯಿಂದ ಎಚ್ಚೆತ್ತ ಪಾಲಿಕೆ, ಬೀದಿ ದೀಪಗಳ ಸಂಪರ್ಕಕ್ಕೆ ಅರ್ಥಿಂಗ್‌ ಲೀಕೇಜ್‌ ಸರ್ಕೀಟ್‌ ಬ್ರೇಕರ್‌ (ಇಎಲ್‌ಸಿಬಿ) ಸಾಧನಗಳನ್ನು  ಅಳವಡಿಸಲು ಮುಂದಾಗಿದೆ. 

ನಗರದ ಬಹುತೇಕ ಕಡೆ ಬೀದಿ ದೀಪಗಳನ್ನು ಹೊತ್ತಿಸುವುದಕ್ಕೆ ಸ್ವಿಚ್‌ ಕೂಡ ಇಲ್ಲ. ವೈರ್‌ಗಳ ತುದಿಗಳನ್ನು ಸಿಕ್ಕಿಸಿ ಬೀದಿದೀಪಗಳನ್ನು ಹೊತ್ತಿಸುವ ಪರಿಪಾಠವಿದೆ. ಕೈಗೆಟಕುವಂತಿರುವ ಈ ವೈರ್‌ಗಳು ಅಪಾಯವನ್ನು ಆಹ್ವಾನಿಸುವಂತಿವೆ. ಇಂತಹ ಕಡೆ ಇಎಲ್‌ಸಿಬಿ ಅಳವಡಿಸಿದರೆ ಸಂಭಾವ್ಯ ಅಪಾಯಗಳನ್ನು ತಪ್ಪಿಸಬಹುದು ಎಂಬ ಮೆಸ್ಕಾಂ ಸಲಹೆ ಮೇರೆಗೆ ಪಾಲಿಕೆ ಈ ಕ್ರಮಕ್ಕೆ ಮುಂದಾಗಿದೆ.

ಏನಿದು ಇಎಲ್‌ಸಿಬಿ: ‘ಸರ್ಕೀಟ್‌ನಲ್ಲಿ ಎಲ್ಲಾದರೂ ವಿದ್ಯುತ್‌ ನೆಲದ ಸಂಪರ್ಕಕ್ಕೆ (ಅರ್ಥಿಂ‌ಗ್‌) ಬಂದರೆ ತಕ್ಷಣ ಆ ಜಾಲದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳ್ಳುವಂತೆ (ಟ್ರಿಪ್‌) ಇಎಲ್‌ಸಿಬಿ ಮಾಡುತ್ತದೆ.  ಮನೆಗಳಲ್ಲೂ ಈ ಸಾಧನವನ್ನು ಅಳವಡಿಸಲಾಗುತ್ತದೆ.  ಪಾಲಿಕೆವ್ಯಾಪ್ತಿಯ ಬೀದಿ ದೀಪ ನಿರ್ವಹಣೆ ವ್ಯವಸ್ಥೆಯಲ್ಲಿ ಈ ಸಾಧನ ಅಳವಡಿಸುವ ಅಗತ್ಯವಿದೆ’ ಎಂದು ಮೆಸ್ಕಾಂನ ಅಧಿಕಾರಿಯೊಬ್ಬರು ತಿಳಿಸಿದರು.

‘ರೊಸಾರಿಯೊದಲ್ಲಿ ಇಬ್ಬರು ರಿಕ್ಷಾ ಚಾಲಕರು ವಿದ್ಯುತ್‌ ಸ್ಪರ್ಶದಿಂದ ಸತ್ತಿದ್ದು ನಿಜಕ್ಕೂ ದುರಂತ. ಇಂತಹ ಅವಘಡ ತಪ್ಪಿಸಲು ಬೀದಿ ದೀಪಗಳ ನಿರ್ವಹಣೆಯನ್ನು ಇನ್ನಷ್ಟು ಸಮರ್ಪಕವಾಗಿ ಮಾಡಬೇಕಿದೆ. ಇದಕ್ಕಾಗಿ ಬೀದಿ ದೀಪ ಸಂಪರ್ಕಕ್ಕೆ ಇಎಲ್‌ಸಿಬಿ ಸಾಧನ ಅಳವಡಿಸುವ ಚಿಂತನೆ ಇದೆ’ ಎಂದು ಪಾಲಿಕೆ ಆಯುಕ್ತ ಆನಂದ ಸಿ.ಎಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

Quote - ವಿದ್ಯುತ್‌ ಸ್ಪರ್ಶದಿಂದಾಗುವ ಸಾವುಗಳನ್ನು ತಡೆಯಲು ಕಠಿಣ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಮಳೆಗಾಲದಲ್ಲಿ ಇಂತಹ ಅವಘಡ ತಡೆಗೆ ಮೆಸ್ಕಾಂ ಇನ್ನಷ್ಟು ಕಟ್ಟೆಚ್ಚರಿಂದ ಕಾರ್ಯನಿರ್ವಹಿಸಲಿದೆ ಪದ್ಮಾವತಿ ವ್ಯವಸ್ಥಾಪಕ ನಿರ್ದೇಶಕಿ ಮೆಸ್ಕಾಂ

- ವರ್ಷದಿಂದ ಬಾಡಿಗೆ ಮನೆಯಲ್ಲಿದ ಚಾಲಕರು

ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾದ ರಿಕ್ಷಾ ಚಾಲಕರಾದ  ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿಯ ರಾಜು ಹಾಗೂ ರಾಮಕುಂಜದ ದೇವರಾಜ್‌ ಒಂದು ವರ್ಷದಿಂದ ರೊಸಾರಿಯೊದಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರೇ ವಾಸವಿದ್ದರು. ಅವರಿಬ್ಬರು ಚಲಾಯಿಸುತ್ತಿದ್ದ ರಿಕ್ಷಾ ಅವರದ್ದಲ್ಲ. ಆ ಎರಡೂ ರಿಕ್ಷಾಗಳ ಮಾಲೀಕರು ಒಬ್ಬರೇ ಆಗಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ‘ರಿಕ್ಷಾ ತೊಳೆಯಲು ಬುಧವಾರ ರಾತ್ರಿ 9.15ರ ಸುಮಾರಿಗೆ ಮನೆಯಿಂದ ಹೊರಬಂದ ರಾಜುವಿಗೆ ವಿದ್ಯುತ್ ಆಘಾತವಾಗಿದೆ. ಇದು ಗೊತ್ತಾದ ತಕ್ಷಣವೇ ದೇವರಾಜ್  ಕೈಯಲ್ಲಿ ಗೋಣಿಚೀಲವನ್ನು ಹಿಡಿದು ರಾಜುವನ್ನು ರಕ್ಷಿಸಲು ಧಾವಿಸಿದ್ದಾರೆ. ಆದರೆ ಅಷ್ಟರಲ್ಲೇ ಅವರಿಗೂ ವಿದ್ಯುದಾಘಾತವಾಗಿದೆ. ಈ ರಸ್ತೆಯಲ್ಲಿ ಜನ ಸಂಚಾರ ವಿರಳ. ಜೊತೆಗೆ ಜೋರಾಗಿ ಮಳೆಯೂ ಆಗುತ್ತಿತ್ತು. ಹಾಗಾಗಿ ಅವರಿಬ್ಬರ ಮೃತದೇಹ ರಸ್ತೆ ಪಕ್ಕವೇ ನಸುಕಿನವರೆಗೆ ಬಿದ್ದಿದ್ದರೂ ಯಾರೂ ಗಮನಿಸಿರಲಿಲ್ಲ’ ಎಂದರು. ಬೀದಿ ದೀಪಗಳನ್ನು ಆರಿಸುವವ್ಯಕ್ತಿ ಸ್ಥಳಕ್ಕೆ ನಸುಕಿನಲ್ಲಿ ಬಂದ ಬಳಿಕವೇ ಈ ಅವಘಡ ಸಂಭವಿಸಿದ್ದು ಗೊತ್ತಾಗಿದೆ. ತುಂಡಾದ ವೈರ್‌ ಅಲ್ಲೇ ಪಕ್ಕದ ಮರವೊಂದಕ್ಕೂ ತಾಗುತ್ತಿತ್ತು. ಆ ಮರದ ಕೊಂಬೆಗಳನ್ನು ಬಳಿಕ ಕತ್ತರಿಸಲಾಗಿದೆ. ಈ ಪ್ರದೇಶದಲ್ಲಿ ಬಹುತೇಕ ವಿದ್ಯುತ್‌ ಕಂಬಗಳಲ್ಲಿ ಕೇಬಲ್‌ಗಳು ಜೋತಾಡುತ್ತಿರುವುದು ಕಂಡುಬಂತು. ‘ಮೃತ ರಾಜುವಿಗೆ ವಿವಾಹವಾಗಿದ್ದು ಇಬ್ಬರು ಮಕ್ಕಳೂ ಇದ್ದಾರೆ. ದೇವರಾಜ್‌ ಅವರಿಗೆ ಮದುವೆ ಆಗಿರಲಿಲ್ಲ. ಅವರಿಬ್ಬರೂ ಕಷ್ಟ ಜೀವಿಗಳು. ನಸುಕಿನಲ್ಲೇ ಎದ್ದು ರೈಲ್ವೆ ನಿಲ್ದಾಣಕ್ಕೆ ಬಾಡಿಗೆಗೆ ತೆರಳುವವರಿದ್ದರು’ ಎಂದು ಸ್ಥಳೀಯ ರಿಕ್ಷಾ ಚಾಲಕರೊಬ್ಬರು ಮಾಹಿತಿ ನೀಡಿದರು. 

‘ತಂತಿ ತುಂಡಾಗಿದ್ದರೆ 1912 ಕರೆ ಮಾಡಿ’

‘ತುಂಡಾಗಿ ಬಿದ್ದ ವಿದ್ಯುತ್‌ ತಂತಿಯನ್ನು ಅಥವಾ ಉಪಕರಣಗಳನ್ನು ಸಾರ್ವಜನಿಕರು ಮುಟ್ಟಬಾರದು. ಈ ಬಗ್ಗೆ ಸಹಾಯವಾಣಿಗೆ ( 1912) ಅಥವಾ ಹತ್ತಿರದ ಮೆಸ್ಕಾಂ ಕಚೇರಿಗೆ ಮಾಹಿತಿ ನೀಡಬೇಕು’ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ. ‘ಬುಧವಾರ ರಾತ್ರಿ ಸುರಿದ ಜೋರಾದ ಗಾಳಿ- ಮಳೆಯಿಂದಾಗಿ ರೊಸಾರಿಯೊ ಶಾಲೆಯ ಹಿಂಭಾಗದ ನಿರೇಶ್ವಾಲ್ಯ ಪರಿವರ್ತಕದಿಂದ ಹೊರಡುವ ದಾರಿದೀಪದ ಲೈನ್‌ ಮೇಲೆ ಹತ್ತಿರದಲ್ಲಿದ್ದ ಮರದ ಕೊಂಬೆ ಬಿದ್ದು ತಂತಿ ತುಂಡಾಗಿತ್ತು. ಇದರಿಂದಾಗಿ ಇಬ್ಬರ ಪ್ರಾಣಹಾನಿಯಾಗಿರುವುದು ವಿಷಾಧನೀಯ. ಮೃತರ ಅವಲಂಬಿತರಿಗೆ ಸಾಂತ್ವನಧನವನ್ನು ಮಂಜೂರು ಮಾಡಲಾಗಿದೆ’ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಡಿ.ಪದ್ಮಾವತಿ ತಿಳಿಸಿದ್ದಾರೆ. ‘ಪ್ರಕೃತಿ ವಿಕೋಪದಿಂದಾಗುವ ಅವಘಡ ತಡೆಯಲು ಸಂಸ್ಥೆಯ ಎಲ್ಲಾ ಅಧಿಕಾರಿಗಳು ಮತ್ತು ಕ್ಷೇತ್ರ ಸಿಬ್ಬಂದಿ ವಿದ್ಯುತ್‌ ಮಾರ್ಗಗಳನ್ನು ಪರಿಶೀಲಿಸಿ ಅಪಾಯಕಾರಿ ಸ್ಥಳಗಳನ್ನು ತ್ವರಿತವಾಗಿ ಗುರುತಿಸಿ ಮುಂಜಾಗ್ರತಾ ಕ್ರಮ ವಹಿಸಬೇಕು‘ ಎಂದು ಅವರು ಸೂಚನೆ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT