ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡೆಂಗಿ ನಿಯಂತ್ರಣಕ್ಕೆ ವಾರ್ಡ್‌ ಸಮಿತಿ

ಪಾಲಿಕೆಯಲ್ಲಿ ಮಾಹಿತಿ ಕೇಂದ್ರ, ಆ್ಯಪ್‌ ಮೊರೆ ಹೋಗಲು ನಿರ್ಧಾರ
Published 10 ಜುಲೈ 2024, 5:43 IST
Last Updated 10 ಜುಲೈ 2024, 5:43 IST
ಅಕ್ಷರ ಗಾತ್ರ

ಮಂಗಳೂರು: ‘ಡೆಂಗಿ ನಿಯಂತ್ರಣಕ್ಕೆ ‍ಪಾಲಿಕೆಯಲ್ಲಿ ಪ್ರತ್ಯೇಕ ಮಾಹಿತಿ ಕೇಂದ್ರವನ್ನು ಆರಂಭಿಸಬೇಕು. ಪ್ರತಿ ವಾರ್ಡ್‌ನಲ್ಲೂ ಪ್ರತ್ಯೇಕ ಸಮಿತಿ ರಚಿಸಬೇಕು. ಮಲೇರಿಯ ನಿಯಂತ್ರಣಕ್ಕೆ ಬಳಸುತ್ತಿದ್ದ ಆ್ಯಪ್‌ ಅನ್ನು ನವೀಕರಿಸಿ, ಡೆಂಗಿ ನಿಯಂತ್ರಣಕ್ಕೂ ಬಳಸಬೇಕು’ ಎಂದು ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಅವರು ಹೇಳಿದರು.

ನಗರದಲ್ಲಿ ಡೆಂಗಿ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಪಾಲಿಕೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶೇಷ ಸಭೆಯಲ್ಲಿ ಅವರು  ಮಾತನಾಡಿದರು.

ವಾರ್ಡ್‌ ಮಟ್ಟದ ಸಮಿತಿಯಲ್ಲಿ ಆಯಾ ವಾರ್ಡ್‌ನ ಪಾಲಿಕೆ ಸದಸ್ಯರು, ಆರೋಗ್ಯ ವಿಭಾಗದ ಸಿಬ್ಬಂದಿ, ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳಿರಬೇಕು. ಡೆಂಗಿ ವರದಿಯಾದ ತಕ್ಷಣವೇ ಈ ಸಮಿತಿ ವಾರ್ಡ್‌ ಮಟ್ಟದಲ್ಲಿ ರೋಗ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು. ಸ್ಮಾರ್ಟ್‌ ಸಿಟಿಯ ಕಮಾಂಡ್ ಕಂಟ್ರೋಲ್‌ ರೂಂ ಬಳಸಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಮೇಯರ್‌ ಸೂಚಿಸಿದರು.

‘ಡೆಂಗಿ ನಿಯಂತ್ರಣದ ಉಸ್ತುವಾರಿಗೆ ಪಾಲಿಕೆ ಮಟ್ಟದಲ್ಲಿ ತಜ್ಞರನ್ನೊಳಗೊಂಡ ಪ್ರತ್ಯೇಕ ಸಮಿತಿ ರಚಿಸಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನಚಂದ್ರ, ಪಾಲಿಕೆಯ ಆರೋಗ್ಯಾಧಿಕಾರಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಆಯ್ದ ಪಾಲಿಕೆ ಸದಸ್ಯರು ಸಮಿತಿಯಲ್ಲಿರಬೇಕು‘ ಎಂದು ನಿರ್ದೇಶನ ನೀಡಿದರು.

ಮಲೇರಿಯಾ ನಿಯಂತ್ರಣಕ್ಕೆ ಪಾಲಿಕೆ ಸೂಕ್ತ ಪೂರ್ವತಯಾರಿ ಮಾಡಿಕೊಂಡಿಲ್ಲ ಎಂದು ವಿರೋಧ ಪಕ್ಷಗಳ ಸದಸ್ಯರು ಆರೋಪಿಸಿದರು. ಇದು ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿಗೂ ಕಾರಣವಾಯಿತು

‘ಕಟ್ಟಡ ನಿರ್ಮಾಣ ಕಾರ್ಯ ನಡೆಯುವಲ್ಲಿ ಸೊಳ್ಳೆ ಕಾಟ ಜಾಸ್ತಿ. ಇಂತಹ ತಾಣಗಳ ಮಾಹಿತಿಯೇ ಪಾಲಿಕೆಯಲ್ಲಿಲ್ಲ. ಆರೋಗ್ಯ ಪರಿವೀಕ್ಷಕರ ಹಾಗೂ ಫಾಗಿಂಗ್‌  ಸಿಬ್ಬಂದಿಯ ಕೊರತೆ ಇದೆ’ ಎಂದು ನವೀನ್‌ ಡಿಸೋಜ ಟೀಕಿಸಿದರು. 

ಎ.ಸಿ.ವಿನಯರಾಜ್‌ ಹಾಗೂ ಶಶಿಧರ ಹೆಗ್ಡೆ, ‘ಮಲೇರಿಯ ಹತೋಟಿಗೆ ಬಳಸಿದ ಕ್ರಮವನ್ನೇ ಡೆಂಗೆ ನಿಯಂತ್ರಣಕ್ಕೂ ಬಳಸಬಹುದು. ಮಲೇರಿಯಾ ನಿಯಂತ್ರಣಕ್ಕೆ ರೂಪಿಸಿದ ಆ್ಯಪ್‌ ಅನ್ನು ಇದಕ್ಕೂ ಬಳಸಬಹುದು.  ವೈದ್ಯರು, ವಿವಿಧ ವೈದ್ಯಕೀಯ ಕಾಲೇಜು ಮತ್ತು ನರ್ಸಿಂಗ್‌ ಕಾಲೇಜು ವಿದ್ಯಾರ್ಥಿಗಳ ನೆರವು ಪಡೆಯಿರಿ’ ಎಂದು ಸಲಹೆ ನೀಡಿದರು. 

ಸಂಸದ ಕ್ಯಾ.ಬ್ರಿಜೇಶ್ ಚೌಟ, ‘ಆಡಳಿತಾತ್ಮಕ ವ್ಯವಸ್ಥೆಯಾಗಿ ಪಾಲಿಕೆಯು ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಡೆಂಗಿ ನಿಯಂತ್ರಣಕ್ಕೆ ಏನೇನು ಮಾಡಬೇಕೆಂಬ ಮಾಹಿತಿಯೇ ನಿಮ್ಮ ಬಳಿ ಇಲ್ಲ. ಇನ್ನು ರೋಗವನ್ನು ಹತೋಟಿಗೆ ತರುವುದಾದರೂ ಹೇಗೆ’ ಎಂದು ತರಾಟೆಗೆ ತೆಗೆದುಕೊಂಡರು.

‘ಲಭ್ಯ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಬಳಸಿ, ಸಾಂಸ್ಥಿಕ ವ್ಯವಸ್ಥೆ ರೂಪಿಸಿ ಡೆಂಗಿ ನಿಯಂತ್ರಣಕ್ಕೆ ಕಾರ್ಯಯೋಜನೆ ರೂಪಿಸಿ’ ಎಂದು ಸಲಹೆ ನೀಡಿದರು.  

ಶಾಸಕ ಡಿ.ವೇದವ್ಯಾಸ ಕಾಮತ್‌, ‘ಆ್ಯಪ್‌ ಬಳಕೆಯ ಜೊತೆಗೆ, ಸ್ಮಾರ್ಟ್‌ ಪೋನ್ ಬಳಸಲು ಬಾರದ ಸಾಮಾನ್ಯ ಜನರಿಂದಲೂ ಮಾಹಿತಿ ಪಡೆದು ಕ್ರಮ ಕೈಗೊಳ್ಳುವಂತಾಗಬೇಕು’ ಎಂದು ಸಲಹೆ ನೀಡಿದರು.

ಉಪಮೇಯರ್‌ ಸುನೀತಾ, ವಿರೋಧ ಪಕ್ಷದ ನಾಯಕ ಪ್ರವೀಣಚಂದ್ರ ಆಳ್ವ ಭಾಗವಹಿಸಿದ್ದರು.

 ‘10 ಸೂಕ್ಷ್ಮ ವಾರ್ಡ್‌ಗಳನ್ನು ಗುರುತಿಸಿ ಕ್ರಮ‘

‘ಸದ್ಯಕ್ಕೆ ಬಿಜೈ ಮತ್ತು ಬಂದರು ವಾರ್ಡ್‌ಗಳಲ್ಲಿ ಡೆಂಗಿ ಕಾಸ್ತಿ ಇದೆ. ಪಾಲಿಕೆಯಲ್ಲಿ ಡೆಂಗಿ ಪ್ರಕರಣಗಳು ಹೆಚ್ಚು ಇರುವ 10 ವಾರ್ಡ್‌ಗಳನ್ನು ಗುರುತಿಸಿ ನಿಯಂತ್ರಣಕ್ಕೆ ಕ್ರಮ ವಹಿಸುತ್ತೇವೆ.  60 ಎಂಪಿಡಬ್ಲ್ಯು ಕಾರ್ಮಿಕರು 10 ಮೇಲ್ವಿಚಾರಕರು ಹಾಗೂ ಆರೋಗ್ಯ ಪರಿವೀಕ್ಷಕರನ್ನು ಒಳಗೊಂಡ ತಂಡ ಡೆಂಗಿ ನಿಯಂತ್ರಣ ಕಾರ್ಯದಲ್ಲಿ ಸಕ್ರಿಯವಾಗಿದೆ’ ಎಂದು ಪಾಲಿಕೆ ಆಯುಕ್ತ ಡಾ.ಸಿ.ಎಲ್.ಆನಂದ್‌ ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ 113 ಪ್ರಕರಣ ‘

ಪಾಲಿಕೆ ವ್ಯಾಪ್ತಿಯಲ್ಲಿ 113 ಡೆಂಗಿ ಪ್ರಕರಣಗಳು ದೃಢಪಟ್ಟಿವೆ.  ಬಿಟ್ಟು ಬಿಟ್ಟು ಮಳೆಯಾದಾಗ ಪ್ರಕರಣ ಹೆಚ್ಚಳವಾಗುವ ಅಪಾಯವಿದೆ. ಟೆಮಿಫಾಸ್‌ ಔಷಧಿ ಸಿಂಪಡಿಸಿ ನಿಯಂತ್ರಿಸಲಾಗುತ್ತಿದೆ.  ಬಿಟಿಐ ಎಂಬ ಜೈವಿಕ ದ್ರಾವಣ ಸಿಂಪಡಿಸಿಯೂ ಸೊಳ್ಳೆಗಳನ್ನು ಹತೋಟಿಗೆ ತರಲಾಗುತ್ತಿದೆ’ ಎಂದು ಡಾ.ನವೀನಚಂದ್ರ ಕುಲಾಲ್‌ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT