ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಾಲಿಟಿ ಶೋನಲ್ಲಿ ಮೆಕ್ಯಾನಿಕ್‌ ಅವಹೇಳನ ಆರೋಪ: ಗ್ಯಾರೇಜ್ ಬಂದ್ ಎಚ್ಚರಿಕೆ

Published 8 ಮೇ 2024, 13:12 IST
Last Updated 8 ಮೇ 2024, 13:12 IST
ಅಕ್ಷರ ಗಾತ್ರ

ಮಂಗಳೂರು: ಟಿವಿ ವಾಹಿನಿಯೊಂದರಲ್ಲಿ ತಿಂಗಳ ಹಿಂದೆ ಪ್ರಸಾರವಾದ ಕಾರ್ಯಕ್ರಮದಲ್ಲಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುವವರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿರುವ ದಕ್ಷಿಣ ಕನ್ನಡ ಗ್ಯಾರೇಜ್ ಮಾಲೀಕರ ಸಂಘ ರಾಜ್ಯದಾದ್ಯಂತ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದೆ.

‘ನಟನೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಬಾಲಕಿ ಮೆಕ್ಯಾನಿಕ್ ಜೊತೆ ಮದುವೆಯಾದರೆ ಗ್ರೀಸ್ ತಿನ್ನಬೇಕಾಗುತ್ತದೆ, ಬದುಕು ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ಇದನ್ನು ಕೇಳಿ ತೀರ್ಪುಗಾರರಾಗಿದ್ದ ನಟ ಮತ್ತು ನಟಿ ಬಿದ್ದು ಬಿದ್ದು ನಗಾಡಿದ್ದಾರೆ. ನಟಿ ಶಿಳ್ಳೆ ಹೊಡೆದು ಪ್ರೋತ್ಸಾಹಿಸಿದ್ದಾರೆ. ಕಾರ್ಯಕ್ರಮ ನಿರೂಪಕಿಯೂ ಹಿಗ್ಗಿ ಕುಣಿದಿದ್ದಾರೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕನಿಲ ದೂರಿದರು.

‘ವೃತ್ತಿಯನ್ನು ಅವಹೇಳನ ಮಾಡುವುದು ಹಾಸ್ಯವಾಗಲು ಸಾಧ್ಯವಿಲ್ಲ. ಬಾಲಕಿ ಹೇಳಿದ ಮಾತಿಗೆ ತೀರ್ಪುಗಾರರು ಆಕ್ಷೇಪ ವ್ಯಕ್ತಪಡಿಸಿ ಆಕೆಗೆ ತಿಳಿಹೇಳಬೇಕಾಗಿತ್ತು. ಆದರೆ ಅವರು ತಮ್ಮ ಘನತೆಯನ್ನೇ ಮರೆತು ಬಾಲಕಿ ಆಡಿದ ಮಾತು ಮಹಾ ತಮಾಷೆ ಎಂಬಂತೆ ವರ್ತಿಸಿದ್ದಾರೆ. ಅವರೆಲ್ಲರೂ ಮೆಕ್ಯಾನಿಕ್‌ಗಳಿಲ್ಲದ ಜಗತ್ತನ್ನೊಮ್ಮೆ ಊಹಿಸಿ ನೋಡಬೇಕು. ಮೈಮುರಿದು ದುಡಿಯುವ ಮೆಕ್ಯಾನಿಕ್‌ಗಳು ಎಲ್ಲರಿಗೂ ಎಲ್ಲ ಸಂದರ್ಭದಲ್ಲೂ ಅಗತ್ಯ. ದೇಶದ ಆರ್ಥಿಕ ಸ್ಥಿತಿಗೂ ನಮ್ಮ ಕೊಡುಗೆ ದೊಡ್ಡದಿದೆ’ ಎಂದು ಅವರು ಹೇಳಿದರು.

‘ನಟನೆಯ ಹೆಸರಿನಲ್ಲಿ ಕೀಳು ಮಟ್ಟದ ಹೇಳಿಕೆ ನೀಡಿದ ಯುವತಿ, ಕಾರ್ಯಕ್ರಮ ಪ್ರಸಾರ ಮಾಡಿ ವಾಹಿನಿಯ ಮುಖ್ಯಸ್ಥರು, ಆಯೋಜಕರು, ತೀರ್ಪುಗಾರರು ಮತ್ತು ನಿರೂಪಕಿ ಮೆಕ್ಯಾನಿಕ್ ಮತ್ತು ಅವರ ಕುಟುಂಬದವರ ಬಳಿ ಬಹಿರಂಗ ಕ್ಷಮೆ ಕೋರಬೇಕು. ಕಾಯಕವನ್ನು ಹೀಯಾಳಿಸುವ ಕಾರ್ಯಕ್ರಮಗಳನ್ನು ಯಾರೂ ಪ್ರಸಾರ ಮಾಡುವುದು ಅಪರಾಧವಾಗಿರುವುದರಿಂದ ಕಾರ್ಮಿಕ ಇಲಾಖೆ ಟಿವಿ ವಾಹಿನಿಗೆ ನೋಟಿಸ್ ನೀಡಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.

‘ಮೈಸೂರು, ಕುಶಾಲನಗರ ಮತ್ತು ಹಾಸನದಲ್ಲಿ ಈಗಾಗಲೇ ಪ್ರತಿಭಟನೆ ನಡೆದಿದ್ದು ಯಾರೂ ಸ್ಪಂದಿಸಿಲ್ಲ. ಇದೇ ಧೋರಣೆ ಮುಂದುವರಿದರೆ ರಾಜ್ಯದಾದ್ಯಂತ ಗ್ಯಾರೇಜ್ ಬಂದ್ ಮಾಡಲಾಗುವುದು’ ಎಂದು ಸಂಘದ ನಿರ್ದೇಶಕ ಪುಂಡಲೀಕ ಸುವರ್ಣ ತಿಳಿಸಿದರು.

ಕೇಶವ, ದಿವಾಕರ ಎಂ ಪಗಂಬಿಲ, ರಾಜಗೋಪಾಲ, ದಿನಕರ್ ಕುಲಾಲ್ ಮತ್ತು ಕಿರಣ್ ರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT