ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಸ್ಕಾಂ: ನಿತ್ಯ ವಿದ್ಯುತ್ ಬಳಕೆ ಸರಾಸರಿ 14.4 ಲಕ್ಷ ಯೂನಿಟ್‌ ಹೆಚ್ಚಳ

ಬೇಸಿಗೆಯಲ್ಲಿ ದೈನಂದಿನ ವಿದ್ಯುತ್‌ ಬಳಕೆ ಗಣನೀಯ ಏರಿಕೆ
Published 6 ಮೇ 2024, 4:51 IST
Last Updated 6 ಮೇ 2024, 4:51 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಈ ಬೇಸಿಗೆಯಲ್ಲಿ ಉಷ್ಣಾಂಶವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೆ, ವಿದ್ಯುತ್‌ ಬಳಕೆಯ ಪ್ರಮಾಣವೂ ಗಣನೀಯವಾಗಿ ಜಾಸ್ತಿಯಾಗಿದೆ.

ಈ ವರ್ಷದ ಬೇಸಿಗೆಯಲ್ಲಿ ಮೆಸ್ಕಾಂ ವ್ಯಾಪ್ತಿಯ ಅನೇಕ ಪ್ರದೇಶಗಳಲ್ಲಿ ದಿನದ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಸೂರ್ಯನ ತಾಪ ಜಾಸ್ತಿಯಾದಂತೆ ವಿದ್ಯುತ್‌ ಬಳಕೆಯೂ ಗಣನಿಯವಾಗಿ ಹೆಚ್ಚಳವಾಗಿದೆ. ಮಳೆಯಾದ ದಿನಗಳಲ್ಲಿ ವಿದ್ಯುತ್ ಬಳಕೆ ಕಡಿಮೆಯಾಗಿದ್ದು ಕಂಡುಬಂದಿದೆ. ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ 2024ರ ಜನವರಿಯಲ್ಲಿ 2.372 ಕೋಟಿ ಯೂನಿಟ್‌ಗಳಷ್ಟಿದ್ದ ಸರಾಸರಿ ದೈನಂದಿನ ವಿದ್ಯುತ್ ಬಳಕೆ ಪ್ರಮಾಣವು ಮಾರ್ಚ್‌ನಲ್ಲಿ 3.056 ಕೋಟಿ ಯೂನಿಟ್‌ವರೆಗೆ ತಲುಪಿತ್ತು.

ಈ ವರ್ಷ ಫೆಬ್ರುವರಿ, ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳುಗಳಲ್ಲಿ ದೈನಂದಿನ ಸರಾಸರಿ ವಿದ್ಯುತ್ ಬಳಕೆ 2.940 ಕೋಟಿ ಯೂನಿಟ್‌ಗಳಷ್ಟಿದೆ. 2023ರಲ್ಲಿ ಈ ಮೂರು ತಿಂಗಳ ದೈನಂದಿನ ಸರಾಸರಿ ವಿದ್ಯುತ್ ಬಳಕೆ ಪ್ರಮಾಣ 2.796 ಕೋಟಿ ಯೂನಿಟ್‌ಗಳಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಬೇಸಿಗೆಯ ಮೊದಲ ಮೂರು ತಿಂಗಳುಗಳಲ್ಲಿ ನಿತ್ಯ 14.4 ಲಕ್ಷ ಯೂನಿಟ್‌ಗಳಷ್ಟು ವಿದ್ಯುತ್‌ ಬಳಕೆ ಹೆಚ್ಚಳವಾಗಿದೆ.

ಆಯಾ ತಿಂಗಳಲ್ಲಿ ದಾಖಲಾದ ಗರಿಷ್ಠ ಲೋಡ್‌ ಕೂಡಾ ಈ ವರ್ಷ ಜಾಸ್ತಿ ಆಗಿದೆ. 2023ರ ಏಪ್ರಿಲ್‌ನಲ್ಲಿ ದಿನವೊಂದರಲ್ಲಿ ದಾಖಲಾಗಿದ್ದ ಗರಿಷ್ಠ ಲೋಡ್‌ 1,501 ಮೆಗಾವಾಟ್‌. ಈ ಸಲ ಏಪ್ರಿಲ್‌ನಲ್ಲಿ ದಿನವೊಂದರ ವಿದ್ಯುತ್ ಹೊರೆ 1,564 ಮೆಗಾವಾಟ್‌ವರೆಗೂ ತಲುಪಿತ್ತು. 

ಈ ವರ್ಷ ದೈನಂದಿನ ಸರಾಸರಿ ವಿದ್ಯುತ್‌ ಬಳಕೆ ಪ್ರಮಾಣ ಏಪ್ರಿಲ್ ತಿಂಗಳಿಗಿಂತಲೂ ಮಾರ್ಚ್‌ನಲ್ಲೇ ಜಾಸ್ತಿ ಇತ್ತು. ಮಾರ್ಚ್‌ನಲ್ಲಿ ನಿತ್ಯ ಸರಾಸರಿ 3.056 ಕೋಟಿ ಯೂನಿಟ್‌ಗಳು ಬಳಕೆಯಾಗಿದ್ದರೆ, ಏಪ್ರಿಲ್‌ನಲ್ಲಿ ಈ ಪ್ರಮಾಣ ವು 2.906 ಕೋಟಿ ಯೂನಿಟ್‌ಗಳಷ್ಟಿತ್ತು. 2023ರ ಮಾರ್ಚ್‌ನಲ್ಲಿ ನಿತ್ಯ ಸರಾಸರಿ 2.841 ಕೋಟಿ ಯೂನಿಟ್‌ ಹಾಗೂ 2023ರ ಏಪ್ರಿಲ್‌ನಲ್ಲಿ ನಿತ್ಯವೂ ಸರಾಸರಿ 2.859 ಕೋಟಿ ಯೂನಿಟ್‌ ವಿದ್ಯುತ್ ಬಳಕೆಯಾಗಿತ್ತು. ಏಪ್ರಿಲ್‌ನಲ್ಲಿ ಕೆಲವು ಕಡೆ ಮಳೆಯಾಗಿದ್ದರಿಂದ ವಿದ್ಯುತ್‌ ಬಳಕೆ ತುಸು ಕಡಿಮೆಯಾಗಿತ್ತು ಎನ್ನುತ್ತಾರೆ ಮೆಸ್ಕಾಂ ಅಧಿಕಾರಿಗಳು.

‘ಮೆಸ್ಕಾಂ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಪ್ರತಿವರ್ಷವೂ ವಿದ್ಯುತ್‌ ಬಳಕೆ ಸ್ವಲ್ಪ ಪ್ರಮಾಣದಲ್ಲಿ ಜಾಸ್ತಿಯಾಗುತ್ತದೆ.  ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯುತ್‌ ಬೇಡಿಕೆ  ಹೆಚ್ಚಳದ ಪ್ರಮಾಣ ತುಸು ಜಾಸ್ತಿಯೇ ಇದೆ’ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಡಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಬೇಸಿಗೆಯಲ್ಲಿ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್‌ ಬೇಡಿಕೆ ಗಣನೀಯವಾಗಿ ಹೆಚ್ಚಳವಾಗಿದೆ. ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗೃಹ ಬಳಕೆ ವಿದ್ಯುತ್‌ ಬೇಡಿಕೆ ಹೆಚ್ಚಳವಾಗಿದೆ. ಕರವಳಿ ಜಿಲ್ಲೆಗಳಲ್ಲಿ ಸೆಕೆ ಜಾಸ್ತಿ ಇರುವುದರಿಂದ ಹವಾ ನಿಯಂತ್ರಣ ಉಪಕರಣಗಳಿಗೆ ಹಾಗೂ ಫ್ಯಾನ್‌ಗೆ ವಿದ್ಯುತ್‌ ಬಳಕೆ ಜಾಸ್ತಿಯಾಗುತ್ತದೆ’ ಎಂದು ಅವರು ವಿವರಿಸಿದರು.

‘ಈ ಸಲ ಬೇಸಿಗೆಯಲ್ಲಿ ವಿದ್ಯುತ್ ಬಳಕೆಯ ಪ್ರಮಾಣವು ಕಳೆದ ವರ್ಷಕ್ಕಿಂತಲೂ ಜಾಸ್ತಿಯಾಗಲು ‌ಗೃಹಜ್ಯೋತಿ ಯೋಜನೆಯೂ ಕಾರಣವಾಗಿರುವ ಸಾಧ್ಯತೆ ಇದೆ. ಈ ಯೋಜನೆಯಡಿ  ಉಚಿತವಾಗಿ ವಿದ್ಯುತ್‌ ಸಿಗುತ್ತಿದೆ. ಹಾಗಾಗಿ ಕೆಲವು ಗ್ರಾಹಕರು ವಿದ್ಯುತ್‌ ಮಿತಬಳಕೆ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ’ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

‘ಹೆಚ್ಚುವರಿ ಬೇಡಿಕೆ ಪೂರೈಸಲು ವಿದ್ಯುತ್‌ ಲಭ್ಯ’

‘ವಿದ್ಯುತ್‌ ಬೇಡಿಕೆ ಹೆಚ್ಚಳವಾದರೂ ಅದನ್ನು ಪೂರೈಸುವಷ್ಟು ವಿದ್ಯುತ್‌ ಮೆಸ್ಕಾಂ ಬಳಿ ಲಭ್ಯ ಇದೆ. ಹಾಗಾಗಿ ಬೇಸಿಗೆಯಲ್ಲಿ ಅನಿಯಮಿತ ಲೋಡ್‌ಶೆಡ್ಡಿಂಗ್‌ ಮಾಡುವ ಪ್ರಮೇಯ ಉದ್ಭವಿಸಿಲ್ಲ’ ಎಂದು ಪದ್ಮಾವತಿ ಡಿ. ತಿಳಿಸಿದರು. ‘ಮೆಸ್ಕಾಂಗೆ  ಸೌರ ವಿದ್ಯುತ್‌ ಪವನ ವಿದ್ಯುತ್‌ ಕೂಡಾ ಲಭ್ಯವಿದೆ. ಅಲ್ಲದೇ ಕೇಂದ್ರದ ಗ್ರಿಡ್‌ನಿಂದ ನಮ್ಮ ಬೇಡಿಕೆಯ ಶೇ 7ರಷ್ಟು ವಿದ್ಯುತ್‌ ಸಿಗುತ್ತಿದೆ. ಕೈಗಾದಿಂದ ಇದು ಪೂರೈಕೆಯಾಗುತ್ತಿದೆ. ಹಾಗಾಗಿ ಬೇಸಿಗೆಯ ಹೆಚ್ಚುವರಿ ಬೇಡಿಕೆಯನ್ನು ನಿಭಾಯಿಸುವುದು ಕಷ್ಟವಾಗಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT