ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ವಿದ್ಯುತ್‌ ಅವಿರತ ಪೂರೈಕೆ; ಮೆಸ್ಕಾಂ ಭರವಸೆ

ವೋಲ್ಟೇಜ್‌ ಸಮಸ್ಯೆ, ಪರಿವರ್ತಕಗಳ ಸಮಸ್ಯೆ ಆದ್ಯತೆ ಮೇರೆಗೆ ನಿವಾರಣೆ, ಬೇಸಿಗೆಯಲ್ಲೂ ವಿದ್ಯುತ್‌ ಕೊರತೆ ಇರದು– ವ್ಯವಸ್ಥಾಪಕ ನಿರ್ದೇಶಕಿ ಆಶ್ವಾಸನೆ
Published 15 ಮಾರ್ಚ್ 2024, 3:04 IST
Last Updated 15 ಮಾರ್ಚ್ 2024, 3:04 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಮೆಸ್ಕಾಂ) ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ದಿನದ 24 ಗಂಟೆಯೂ ಗುಣಮಟ್ಟದ ವಿದ್ಯುತ್‌ ಅನ್ನು ಅವಿರತವಾಗಿ ಪೂರೈಸಲು ಸದಾ ಬದ್ಧ. ಗುಣಮಟ್ಟದ ವಿದ್ಯುತ್ ಪೂರೈಕೆ ಸಲುವಾಗಿಯೇ ಮೆಸ್ಕಾಂ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಡಿ. ಅವರು ತಿಳಿಸಿದರು.

‘ಪ್ರಜಾವಾಣಿ’ ಮತ್ತು 'ಡೆಕ್ಕನ್‌ ಹೆರಾಲ್ಡ್‌' ಪತ್ರಿಕೆಗಳ ವತಿಯಿಂದ ಇಲ್ಲಿ ಗುರುವಾರ ಏರ್ಪಡಿಸಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಅವರು ತ್ವರಿತ ಪರಿಹಾರ ಒದಗಿಸುವ ಭರವಸೆ ನೀಡಿದರು. ತಕ್ಷಣವೇ ತಳ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿ ಅನೇಕ ಅಹವಾಲುಗಳು ಕೆಲವೇ ತಾಸುಗಳಲ್ಲಿ ಬಗೆಹರಿಸಲು ಕ್ರಮವಹಿಸಿದರು.

ಗುಣಮಟ್ಟದ ವಿದ್ಯುತ್‌ ಪೂರೈಕೆಗಾಗಿ 9 ಉಪಕೇಂದ್ರ ಹಾಗೂ ಎರಡು ವಿದ್ಯುತ್‌ ಮಾರ್ಗಗಳ ಕಾಮಗಾರಿ ಪ್ರಗತಿಯಲ್ಲಿವೆ. ಇದಲ್ಲದೇ ಮತ್ತೆರಡು ವಿದ್ಯುತ್‌ ಉಪಕೇಂದ್ರಗಳ ಸ್ಥಾಪನೆ ಹಾಗೂ ಎರಡು ವಿದ್ಯುತ್ ಮಾರ್ಗಗಳ ನಿರ್ಮಾಣ  ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ನಗರ ಪ್ರದೇಶದಲ್ಲಿ ನೆಲದಡಿ ಕೇಬಲ್‌ ಅಳವಡಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗುತ್ತಿದೆ. ಆದ್ಯತೆ ಮೇರೆಗೆ ಈ ಕಾಮಗಾರಿ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

ಬೇಸಿಗೆಯಲ್ಲೂ ವಿದ್ಯುತ್‌  ಕೊರತೆಯಾಗದು. ಮೆಸ್ಕಾಂ ವ್ಯಾಪ್ತಿಯಲ್ಲಿ ದಿನವೊಂದಕ್ಕೆ ಸರಾಸರಿ 311 ಲಕ್ಷ ಯೂನಿಟ್ ವಿದ್ಯುತ್‌ಗೆ ಬೇಡಿಕೆ ಇರುತ್ತದೆ. ಬೇಸಿಗೆಯಲ್ಲಿ ಈ ಪ್ರಮಾಣವು 330 ಲಕ್ಷ ಯೂನಿಟ್‌ವರೆಗೆ ತಲುಪುತ್ತದೆ. ಸದ್ಯಕ್ಕೆ ವಿದ್ಯುತ್ ಕೊರತೆ ಇಲ್ಲ. ಅನಿಯಮಿತ ಲೋಡ್‌ ಶೆಡ್ಡಿಂಗ್‌ ಕೂಡ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ವಿದ್ಯುತ್‌ ಮಾರ್ಗಗಳಿಗೆ ಅಡಚಣೆ ಉಂಟಾಗಿ ವಿದ್ಯುತ್‌ ಪೂರೈಕೆ ಸ್ಥಗಿತವಾದರೂ 24 ತಾಸುಗಳಲ್ಲಿ ಬಗೆಹರಿಸಲು ಶ್ರಮವಹಿಸುತ್ತೇವೆ. ವಿದ್ಯುತ್‌ ಪರಿವರ್ತಕಗಳಲ್ಲಿ ದೋಷ ಕಂಡುಬಂದರೆ 24 ಗಂಟೆಗಳ ಒಳಗೆ ದುರಸ್ತಿಗೆ ಕ್ರಮವಹಿಸುತ್ತೇವೆ. ಅನಿವಾರ್ಯವಾದರೆ 72 ತಾಸುಗಳ ಒಳಗೆ ಬದಲಿ ಪರಿವರ್ತಕ ಅಳವಡಿಸುತ್ತೇವೆ ಎಂದು ಅವರು ಭರವಸೆ ನೀಡಿದರು.

ಹಳೆಯ ತಂತಿಗಳನ್ನು ಬದಲಾಯಿಸುವುದಕ್ಕೆ ಅಗತ್ಯಗಳಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ನಾಲ್ಕು ಜಿಲ್ಲೆಗಳಲ್ಲಿ ₹150 ಕೋಟಿ ಮೊತ್ತದಲ್ಲಿ ತಂತಿ ಬದಲಾವಣೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಆರ್‌ಡಿ ಎಸ್‌ಎಸ್‌ ಯೊಜನೆಯಡಿಯೂ ಇದಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆಯುವಲ್ಲಿ ಎದುರಾಗಿರುವ ತೊಡಕುಗಳು, ವೋಲ್ಟೇಜ್‌ ಸಮಸ್ಯೆ, ವಿದ್ಯುತ್‌ ಕಂಬಗಳ ನಡುವಿನ ಅಂತರ ಹೆಚ್ಚು ಇರುವುದರಿಂದ ವಿದ್ಯುತ್ ತಂತಿಗಳು ಜೋತು ಬೀಳುವುದು, ವಿದ್ಯುತ್‌ ಪರಿವರ್ತಕಗಳಲ್ಲಿ ದೋಷ, ಗ್ರಾಮೀಣ ಪ್ರದೇಶಗಳಲ್ಲಿ ಪದೇ ಪದೇ ವಿದ್ಯುತ್‌ ಪೂರೈಕೆ ಸ್ಥಗಿತಗೊಳ್ಳುವುದು, ಗುಣಮಟ್ಟದ ವಿದ್ಯುತ್ ಪೂರೈಕೆಗೆ ಕೈಗೊಂಡಿರುವ ಹೊಸ  ಯೋಜನೆಗಳು ಸೇರಿದಂತೆ ಅನೇಕ ಅಹವಾಲುಗಳಿಗೆ ಸಂಬಂಧಿಸಿ ನಾಲ್ಕೂ ಜಿಲ್ಲೆಗಳ ಸಾರ್ವಜನಿಕರು ಕರೆ ಮಾಡಿದ್ದರು.

ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದ ಜನವಸತಿಗಳು ಇನ್ನೂ ಕೆಲವು ಇವೆ. ಅರಣ್ಯ ಇಲಾಖೆ ನಿರಾಕ್ಷೇಪಣಾ ಪತ್ರ ಸಿಗುವುದು ವಿಳಂಬವಾಗಿರುವ ಕಾರಣ ಕೆಲವು ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಈಗಲೂ ಸಾಧ್ಯವಾಗಿಲ್ಲ. ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಒಂದೆರಡು ಜನವಸತಿಗಳಿಗೆ ವಿದ್ಯುತ್ ಸಂಪರ್ಕ ಇನ್ನಷ್ಟೇ ನೀಡಬೇಕಾಗಿದೆ. ವಿದ್ಯುತ್ ಮಾರ್ಗ ಅಳವಡಿಸಲು ಸಾಧ್ಯವಾಗದ ಕಡೆ, ಮನೆಗಳಿಗೆ ಸೌರ ವಿದ್ಯುತ್‌ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದು ತಿಳಿಸಿದರು.

ಅಲಂಕಾರು – ನೆಲ್ಯಾಡಿ, ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಬೇಡಿಕೆ  ಜಾಸ್ತಿಯಾಗಿ ಉಪಕೇಂದ್ರಗಳಲ್ಲಿ ಮೇಲಿನ  ಒತ್ತಡ ಹೆಚ್ಚಾಗಿರುವ ಆಗಿರುವ ಕಾರಣ ಲೋ ವೋಲ್ಟೇಜ್ ಸಮಸ್ಯೆ ಎದುರಾಗಿದೆ. ಎರಡು ತಿಂಗಳೊಳಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಸಮಸ್ಯೆ ಪರಿಹರಿಸಲಾಗುವುದು ಎಂದರು.

ಮೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ಮೆಸ್ಕಾಂಗೆ ಒಟ್ಟು ₹182 ಕೋಟಿ ವಿದ್ಯುತ್‌ ಬಿಲ್ ಪಾವತಿ ಬಾಕಿ ಇದೆ. ನಗರ ಸ್ಥಳೀಯ ಸಂಸ್ಥೆಗಳು ₹18 ಕೋಟಿ, ವಿವಿಧ ಇಲಾಖೆಗಳು ₹52 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಡಿ. 
ಫೋನ್ ಇನ್ ಕಾರ್ಯಕ್ರಮದಲ್ಲಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಡಿ. 
ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೆಸ್ಕಾಂ ಅಧಿಕಾರಿಗಳ ತಂಡ
ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೆಸ್ಕಾಂ ಅಧಿಕಾರಿಗಳ ತಂಡ
ಫೋನ್ ಇನ್ ಕಾರ್ಯಕ್ರಮದಲ್ಲಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಡಿ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು– ಪ್ರಜಾವಾಣಿ ಚಿತ್ರ
ಫೋನ್ ಇನ್ ಕಾರ್ಯಕ್ರಮದಲ್ಲಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಡಿ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು– ಪ್ರಜಾವಾಣಿ ಚಿತ್ರ

ಗೃಹಜ್ಯೋತಿ:

ಯಾವ ಜಿಲ್ಲೆಯಲ್ಲಿ ಎಷ್ಟು ಪಾವತಿ?

ಜಿಲ್ಲೆ; ಗೃಹಸಂಪರ್ಕ; ಫಲಾನುಭವಿಗಳು; ಸಬ್ಸಿಡಿ ಮೊತ್ತ (₹ ಕೋಟಿ); ಶೂನ್ಯ ಬಿಲ್‌

ದಕ್ಷಿಣ ಕನ್ನಡ;656374; 505730;226.90;305895 ಉಡುಪಿ;370479;308348;135.48;192238 ಶಿವಮೊಗ್ಗ;532363;465585;123.57;342699 ಚಿಕ್ಕಮಗಳೂರು;350846;299406;66.84;231155 ಮೆಸ್ಕಾಂ: ವಿದ್ಯುತ್‌ ಬೇಡಿಕೆ  ಜಿಲ್ಲೆ; ಬೇಡಿಕೆ ದಕ್ಷಿಣ ಕನ್ನಡ; 110 ಲಕ್ಷ ಯೂನಿಟ್‌ ಉಡುಪಿ;50ಲಕ್ಷ ಯೂನಿಟ್‌ ಶಿವಮೊಗ್ಗ; 100ಲಕ್ಷ ಯೂನಿಟ್‌ ಚಿಕ್ಕಮಗಳೂರು: 550 ಲಕ್ಷ ಯೂನಿಟ್‌

Cut-off box - ಪ್ರತಿ ವರ್ಷ 7 ಸಾವಿರ ಟಿ.ಸಿ ಸೇರ್ಪಡೆ ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ವರ್ಷ 7 ಸಾವಿರಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕಗಳನ್ನು(ಟಿ.ಸಿ) ವಿತರಣಾ ಜಾಲಕ್ಕೆ ಹೊಸದಾಗಿ ಸೇರ್ಪಡೆ ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಬಿಇಇ 5 ಸ್ಟಾರ್‌ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಿಇಇ 4 ಸ್ಟಾರ್‌  ಟಿ.ಸಿಗಳನ್ನು ಅಳವಡಿಸಲಾಗುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದರು.

ಮೆಸ್ಕಾಂ: 75 ಕಡೆ ಇವಿ ಚಾರ್ಜಿಂಗ್ ಸ್ಟೇಷನ್‌ ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಮೆಸ್ಕಾಂ ಒಟ್ಟು 61 ಕಡೆ ಇ.ವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಿದೆ. 24 ಕಡೆ ಖಾಸಗಿಯವರು ಇ.ವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಿದ್ದಾರೆ.  ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಮಂಗಳೂರು ವಲಯದಲ್ಲಿ 75 ಶಿವಮೊಗ್ಗ ವಲಯದಲ್ಲಿ 75 ಚಿಕ್ಕಮಗಳೂರು ವಲಯದಲ್ಲಿ 20 ಇವಿ ಚಾರ್ಜಿಂಗ್ ಸ್ಟೇಷನ್ ಪ್ರಾರಂಭಿಸಲು ಕ್ರಮವಹಿಸಲಾಗಿದೆ.  ಉಡುಪಿ ಜಿಲ್ಲೆಯಲ್ಲಿ ಟೆಂಡರ್‌ ಕರೆದಾಗ ಯಾವ ಸಂಸ್ಥೆಯೂ ಆಸಕ್ತಿ ತೋರಿಸಿರಲಿಲ್ಲ. ಹಾಗಾಗಿ ಮರುಟೆಂಡರ್ ಕರೆಯಲಾಗಿದೆ ಎಂದು ಪದ್ಮಾವತಿ ಅವರು ಮಾಹಿತಿ ನೀಡಿದರು.

ಭಾಗವಹಿಸಿದ್ದ ಮೆಸ್ಕಾಂ ಅಧಿಕಾರಿಗಳು ತಾಂತ್ರಿಕ ನಿರ್ದೇಶಕ ಎಚ್‌.ಜಿ.ರಮೇಶ್ ಮುಖ್ಯ ಆರ್ಥಿಕ ಅಧಿಕಾರಿ ಮೌರಿಸ್ ಡಿಸೋಜ ಮಂಗಳೂರು ವಲಯದ ಮುಖ್ಯ ಎಂಜಿನಿಯರ್ ಪುಷ್ಪಾ ಎಸ್‌.ಎ. ಶಿವಮೊಗ್ಗ ವಲಯದ ಮುಖ್ಯ ಎಂಜಿನಿಯರ್ ಎಚ್‌. ಬಸಪ್ಪ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ (ವಾಣಿಜ್ಯ) ದಿನೇಶ್ ಎಚ್‌.ಆರ್ ಸೂಪರಿಂಟೆಂಡಿಂಗ್‌ ಎಂಜಿನಿಯರ್ (ತಾಂತ್ರಿಕ) ರಮೇಶ್ ಕಾರ್ಯನಿರ್ವಾಹಕ ಎಂಜಿನಿಯರ್ (ಯೋಜನೆ) ದೀಪಕ್ ಸಿ.ಆರ್ ಬಂಟ್ವಾಳ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ವೆಂಕಟೇಶ್ ಕಾರ್ಕಳ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ನರಸಿಂಹ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತ ಶೆಟ್ಟಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಚಂದ್ರಶೇಖರ ಪೂಜಾರಿ ನಂದಕುಮಾರ್ ಲೆಕ್ಕಾಧಿಕಾರಿ ಪಿಯೂಷ್ ಡಿಸೋಜ.

‘ಗೃಹಜ್ಯೋತಿ: ಆಧಾರ್ ಡಿಲಿಂಕ್‌ ಅವಕಾಶ‘ ಬಾಡಿಗೆ ಮನೆಯಲ್ಲಿರುವ ಗೃಹಜ್ಯೋತಿ ಫಲಾನುಭವಿಗಳು ವಾಸ್ತವ್ಯವನ್ನು ಬೇರೆಡೆಗೆ ಬದಲಿಸಿದರೆ ಹಿಂದಿನ ಆರ್‌ಆರ್.ನಂಬರ್‌ನ ಜೊತೆಗೆ ಸೇರ್ಪಡೆಯಾಗಿರುವ ಆಧಾರ್‌ ಸಮಖ್ಯೆಯನ್ನು ಡಿಲಿಂಕ್‌ ಮಾಡಲು ಸೇವಾಸಿಂಧು ಪೋರ್ಟಲ್‌ನಲ್ಲೇ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಅಗತ್ಯವಿರುವ ತಂತ್ರಾಂಶವನ್ನು   ಅಭಿವೃದ್ಧಿಪಡಿಸಲಾಗುತ್ತಿದೆ. ಈ ಸೌಲಭ್ಯ ಶೀಘ್ರವೇ ಲಭ್ಯವಾಗಲಿದೆ ಎಂದು ಪದ್ಮಾವತಿ ಅವರು ತಿಳಿಸಿದರು. 'ಗೃಹಜ್ಯೋತಿ ಸೌಲಭ್ಯ ಪಡೆಯಲು ಮನೆ ಮಾಲೀಕತ್ವದ ದಾಖಲೆ ಬೇಕಾಗುತ್ತದೆ. ಕುಟುಂಬದ ಉಳಿದ ಪಾಲುದಾರರಿಂದ ಎನ್‌ಒಸಿ ಪಡೆದು ದಾಖಲೆ ಬದಲಾಯಿಸಿಕೊಂಡು ನೋಂದಣಿ ಮಾಡಿಕೊಂಡರೆ ಗೃಹಜ್ಯೋತಿ ಸೌಲಭ್ಯ ಪಡೆದುಕೊಳ್ಳಬಹುದು. ಗೃಹಜ್ಯೋತಿ ಸೌಲಭ್ಯ ಪಡೆಯುವುದಕ್ಕೆ ತೊಡಕುಗಳಿದ್ದರೆ ಸಮೀಪದ ಮೆಸ್ಕಾಂ ಕಚೇರಿಯನ್ನು ಅಥವಾ ಸಹಾಯವಾಣಿ (1912) ಅನ್ನು ಸಂಪರ್ಕಿಸಬಹುದು' ಎಂದು ತಿಳಿಸಿದರು.    

ಗೃಹಜ್ಯೋತಿ: 7 ತಿಂಗಳಲ್ಲಿ ₹ 556 ಕೋಟಿ ಬಿಲ್‌ ಮನ್ನಾ ಮೆಸ್ಕಾಂ ವ್ಯಾಪ್ತಿಯಲ್ಲಿರುವ 1910062 ಗೃಹವಿದ್ಯುತ್ ಸಂಪರ್ಕಗಳಲ್ಲಿ 1579069 ಸಂಪರ್ಕಗಳು ಗೃಹಜ್ಯೋತಿ ಯೋಜನೆಯಿಂದ ಪ್ರಯೋಜನ ಪಡೆಯುತ್ತಿವೆ. ಇವುಗಳಲ್ಲಿ 1071987 ಸಂಪರ್ಕಗಳು ಪೂರ್ತಿ ವಿದ್ಯುತ್‌ ಶುಲ್ಕ ವಿನಾಯಿತಿ ಸೌಲಬ್ಯ ಪಡೆಯುತ್ತಿವೆ. ಈ ಯೋಜನೆಯಡಿ 2023ರ ಆಗಸ್ಟ್‌ನಿಂದ  2024ರ ಫೆಬ್ರುವರಿ ಅಂತ್ಯದವರೆಗೆ ₹ 552.79 ಕೋಟಿಗಳಷ್ಟು ಬಿಲ್‌ ಸರ್ಕಾರದಿಂದ ಭರಿಸಲಾಗಿದೆ. ಗೃಹಜ್ಯೋತಿ ಯೋಜನೆಗಾಗಿ ಸರ್ಕಾರ ಒಟ್ಟು ₹ 556 ಕೋಟಿ ಅನುದಾನವನ್ನು ಈಗಾಲೇ ಬಿಡುಗಡೆ ಮಾಡಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಡಿ. ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT