ಶುಕ್ರವಾರ, ಮಾರ್ಚ್ 5, 2021
23 °C
ತವರಿಗೆ ಮರಳಲು ಅವಕಾಶ ಕಲ್ಪಿಸುವಂತೆ ಆಗ್ರಹ

ತವರು ರಾಜ್ಯಗಳಿಗೆ ಕಳಿಸುವಂತೆ ಆಗ್ರಹ: ವಲಸೆ ಕಾರ್ಮಿಕರಿಂದ ಮಂಗಳೂರಿನಲ್ಲಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ತವರಿಗೆ ಮರಳಲು ಅವಕಾಶ ದೊರಕದೇ ಹತಾಶರಾಗಿರುವ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳ ವಲಸೆ ಕಾರ್ಮಿಕರು ಬುಧವಾರ ನಗರದ ವಿವಿಧೆಡೆ ಪ್ರತಿಭಟನೆ ನಡೆಸಿದರು. ಜಾರ್ಖಂಡ್‌, ಬಿಹಾರ, ಉತ್ತರ ಪ್ರದೇಶಗಳ ಕಾರ್ಮಿಕರು ರೈಲು ಸಂಚಾರಕ್ಕೆ ತಡೆಯೊಡ್ಡುವ ಬೆದರಿಕೆಯನ್ನೂ ಒಡ್ಡಿದರು.

ಊರಿಗೆ ಮರಳಲು ‘ಸೇವಾ ಸಿಂಧು’ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿಕೊಳ್ಳಲು ಬುಧವಾರ ಬೆಳಿಗ್ಗೆಯೇ ನೂರಾರು ಕಾರ್ಮಿಕರು ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಆವರಣಕ್ಕೆ ಬಂದಿದ್ದರು. ಆದರೆ, ಸರ್ವರ್‌ ಡೌನ್‌ ಆದ ಕಾರಣ ನೋಂದಣಿಯೇ ಆಗಲಿಲ್ಲ. ಗಂಟೆಗಟ್ಟಲೆ ಕಾದರೂ ನೋಂದಣಿ ಆಗಲಿಲ್ಲ. ಇದರಿಂದ ಬೇಸತ್ತ ಕಾರ್ಮಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜೋಕಟ್ಟೆಯಲ್ಲಿ ಪ್ರತಿಭಟನೆ: ಎಂಆರ್‌ಪಿಎಲ್‌ ಸೇರಿದಂತೆ ದೊಡ್ಡ ಉದ್ದಿಮೆಗಳಲ್ಲಿ ದುಡಿಯುವ ಸಾವಿರಾರು ಕಾರ್ಮಿಕರು ನೋಂದಣಿಗಾಗಿ ಹೊರಟಿದ್ದರು. ಸರ್ವರ್‌ ಸ್ಥಗಿತಗೊಂಡ ವಿಷಯ ತಿಳಿದು ಜೋಕಟ್ಟೆಯಲ್ಲೇ ಪ್ರತಿಭಟನೆ ಆರಂಭಿಸಿದರು. ಜಾರ್ಖಂಡ್‌, ಉತ್ತರ ಪ್ರದೇಶ, ಬಿಹಾರ ರಾಜ್ಯಗಳ ಈ ಜನರು ರೈಲು ಹಳಿಯ ಮೇಲೆ ಕಲ್ಲು ಇರಿಸಿ ಸಂಚಾರಕ್ಕೆ ಅಡ್ಡಿಪಡಿಸಲು ಮುಂದಾದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ, ಎರಡು ದಿನಗಳೊಳಗೆ ತವರಿಗೆ ಮರಳು ಅವಕಾಶ ಕೊಡಿಸುವ ಭರವಸೆ ನೀಡಿ ಕಾರ್ಮಿಕರನ್ನು ಮನವೊಲಿಸಿದರು. ಬಳಿಕ ಅವರು ಪ್ರತಿಭಟನೆ ಕೈಬಿಟ್ಟರು.

ಹೊರ ಜಿಲ್ಲೆ ಕಾರ್ಮಿಕರಿಗೆ ಬಸ್‌ ವ್ಯವಸ್ಥೆ: ತವರಿಗೆ ಹೊರಟಿದ್ದ ಹೊರ ಜಿಲ್ಲೆಗಳ ನೂರಾರು ಕಾರ್ಮಿಕರು ಬಂಗ್ರಕೂಳೂರಿನ ಗೋಲ್ಡ್‌ ಫಿಂಚ್‌ ಸಿಟಿಗೆ ಬಂದಿದ್ದರು. ಬಸ್‌ ವ್ಯವಸ್ಥೆ ಇಲ್ಲ ಎಂಬುದನ್ನು ತಿಳಿದು ಪ್ರತಿಭಟನೆಗೆ ಮುಂದಾದರು. ಅಲ್ಲಿಗೆ ಬಂದ ಐವನ್‌ ಡಿಸೋಜ, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಬಸ್‌ ವ್ಯವಸ್ಥೆ ಕಲ್ಪಿಸಿದರು. ನೂರಾರು ಕಾರ್ಮಿಕರು ತಮ್ಮ ಜಿಲ್ಲೆಗಳತ್ತ ತೆರಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು