ಸೋಮವಾರ, ಸೆಪ್ಟೆಂಬರ್ 28, 2020
28 °C

ರಾಜ್ಯದಲ್ಲಿ ಕುಸಿದುಬಿದ್ದ ಶಿಕ್ಷಣ ವ್ಯವಸ್ಥೆ: ಶಾಸಕ ಯು.ಟಿ.ಖಾದರ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ರಾಜ್ಯ ಸರ್ಕಾರ ಶೈಕ್ಷಣಿಕ ವರ್ಷ ಪ್ರಾರಂಭದ ದಿನಾಂಕವನ್ನು ಸ್ಪಷ್ಟಪಡಿಸಬೇಕು. ಶಿಕ್ಷಣ ಸಚಿವರು ನೀಡುವ ಗೊಂದಲದ ಹೇಳಿಕೆ ನೋಡಿದರೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಲಾಭ ಮಾಡಿಕೊಡಲು ಹೊರಟಿದೆಯೇ ಎಂಬ ಅನುಮಾನ ಮೂಡುತ್ತದೆ’ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್–19 ಲಾಕ್‌ಡೌನ್‌ನಿಂದ ಶಿಕ್ಷಕರು ತೀವ್ರ ತೊಂದರೆಗೊಳಗಾಗಿದ್ದಾರೆ. ಶಾಲೆಯಲ್ಲಿ ಪಾಠ ಮಾಡಬೇಕಾಗಿದ್ದ ಶಿಕ್ಷಕರು ಜೀವನಕ್ಕಾಗಿ ತರಕಾರಿ ಮಾರಾಟ, ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದಾರೆ. ವ್ಯಕ್ತಿತ್ವ ರೂಪಿಸುವ ಶಿಕ್ಷಕರನ್ನು ಕಡೆಗಣಿಸಿ, ಶಿಕ್ಷಕ ದಿನಾಚರಣೆ ಆಚರಿಸಿದರೆ ಪ್ರಯೋಜನವಿಲ್ಲ. ಹೀಗಾಗಿ, ಸರ್ಕಾರ ಆಚರಿಸಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ’ ಎಂದರು.

‘ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸುತ್ತಿವೆ. ಆದರೆ, ಅದೇ ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಸಂಬಳ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಲು ಸರ್ಕಾರ, ಪ್ರತ್ಯೇಕ ಸಮಿತಿ ರಚನೆ ಮಾಡಿಲ್ಲ. ಶಾಲೆ ಪ್ರಾರಂಭ ದಿನಾಂಕದ ಬಗ್ಗೆ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದಾರೆ. ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಕುಸಿದು ಬಿದ್ದಿದೆ’ ಎಂದು ದೂರಿದರು.

‘ಸ್ಮಾರ್ಟ್ ಫೋನ್ ಇದ್ದವರು ಮಾತ್ರ ಆಲ್‌ಲೈನ್ ಶಿಕ್ಷಣ ಪಡೆಯುತ್ತಿದ್ದು, ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅನೇಕ ವಿದ್ಯಾರ್ಥಿಗಳು ಶಾಲೆ ಬಿಡುವ ಹಂತದಲ್ಲಿದ್ದಾರೆ. ಸರ್ಕಾರ ತಕ್ಷಣ ಸಮೀಕ್ಷೆ ನಡೆಸಿ, ಮಕ್ಕಳು ಶಾಲೆ ಬಿಡದ ರೀತಿಯಲ್ಲಿ ಕ್ರಮವಹಿಸಬೇಕು. ಎಲ್ಲ ತರಗತಿಗಳ ಈ ವರ್ಷದ ಪಠ್ಯಕ್ರಮ ಸ್ಪಷ್ಟಗೊಳಿಸಿ, ಮಕ್ಕಳಿಗೆ ಪುಸ್ತಕ ತಲುಪಿಸಬೇಕು. ಶೈಕ್ಷಣಿಕ ವ್ಯವಸ್ಥೆ ಸರಿಯಾಗಿ ನಡೆಯಲು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಡ್ಡಿರಹಿತ ಸಾಲ ಒದಗಿಸಬೇಕು’ ಎಂದು ಆಗ್ರಹಿಸಿದರು.

ಕಚೇರಿ ಸ್ಥಳಾಂತರಕ್ಕೆ ವಿರೋಧ

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ. ಲಾಭದಲ್ಲಿದ್ದ ಬ್ಯಾಂಕ್‌ಗಳನ್ನು ನಷ್ಟದಲ್ಲಿರುವ ಬ್ಯಾಂಕ್‌ಗಳ ಜತೆ ವಿಲೀನಗೊಳಿಸಲಾಗಿದೆ. ಮೂರು ಜಿಲ್ಲೆಗಳನ್ನೊಳಗೊಂಡ ಮಂಗಳೂರಿನಲ್ಲಿದ್ದ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತರಿಸಲಾಗುತ್ತಿದೆ. ಸ್ಥಳೀಯ ಶಾಸಕರ ನಿಯೋಗ ಕೊಂಡೊಯ್ದು ಪ್ರಧಾನ ಮಂತ್ರಿಗೆ ಮನವರಿಕೆ ಮಾಡಿಕೊಡಬೇಕಾಗಿದ್ದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿರುವ ಆಡಳಿತ ಪಕ್ಷದ ಸಂಸದರು ಮೌನವಾಗಿದ್ದಾರೆ. ಕಚೇರಿ ಸ್ಥಳಾಂತರ ವಿಚಾರ ಬಂದಾಗ, ಒಗ್ಗಟ್ಟಾಗಿ ಹೋರಾಡಿದ ಹುಬ್ಬಳ್ಳಿ ಭಾಗದ ಜನಪ್ರತಿನಿಧಿಗಳನ್ನು ನೋಡಿ ಇವರು ಪಾಠ ಕಲಿಯಲಿ’ ಎಂದು ಸಲಹೆ ಮಾಡಿದರು. ಪಕ್ಷದ ಪ್ರಮುಖರಾದ ಐವನ್ ಡಿಸೋಜಾ, ವಿನಯರಾಜ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.