ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಯೋಜನೆ; ಹೊಸ ಕನಸಿಗೆ ಜೀವ

Published 25 ಮೇ 2023, 6:15 IST
Last Updated 25 ಮೇ 2023, 6:15 IST
ಅಕ್ಷರ ಗಾತ್ರ

ಮಂಗಳೂರು: ‘ಮಂಗಳೂರು ನಗರದಲ್ಲಿ ಮಲ್ಟಿ ಲೆವಲ್ ಪಾರ್ಕಿಂಗ್, ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌, ರಸ್ತೆ ನಿರ್ಮಾಣ ಮೊದಲಾದ ಹಿಂದಿನ ಅವಧಿಯಲ್ಲಿ ಕೈಗೆತ್ತಿಕೊಂಡಿರುವ ಹಲವಾರು ಮಹತ್ವದ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ನನ್ನ ಮೊದಲ ಆದ್ಯತೆಯಾಗಿದೆ’ ಎಂಬುದು ಮಂಗಳೂರು ನಗರ ದಕ್ಷಿಣ ಕ್ಷೇತ್ರದಿಂದ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಡಿ. ವೇದವ್ಯಾಸ ಕಾಮತ್ ಅವರ ಅಭಿಪ್ರಾಯ.

ಕ್ಷೇತ್ರದಲ್ಲಿ ಕೈಗೆತ್ತಿಕೊಂಡಿರುವ ಹಾಗೂ ಭವಿಷ್ಯದಲ್ಲಿ ಅನುಷ್ಠಾನಗೊಳಿಸಲಿರುವ ಯೋಜನೆಗಳ ಕುರಿತು ಅವರು ‘ಪ್ರಜಾವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡರು.

‘ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಹಲವಾರು ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದೆ. ಅವುಗಳಲ್ಲಿ ಕೆಲವು ಪೂರ್ಣಗೊಂಡಿದ್ದು, ಇನ್ನು ಕೆಲವು ಅರ್ಧದಷ್ಟಾಗಿವೆ. ಇವುಗಳನ್ನು ಪೂರ್ಣಗೊಳಿಸುವ ದೊಡ್ಡ ಜವಾಬ್ದಾರಿ ಇದೆ. ಎರಡು ಐಟಿಐ ಕಾಲೇಜುಗಳು, ಎರಡು ಪಿಯು ಕಾಲೇಜುಗಳ ಕಟ್ಟಡ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿ ಒದಗಿಸಬೇಕಾಗಿದೆ. ಶಕ್ತಿನಗರದಲ್ಲಿ ಬಡವರ ಮನೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದನ್ನು ಪೂರ್ಣಗೊಳಿಸಿ, ಬಡವರಿಗೆ ವಿತರಿಸುವ ಹೊಣೆಗಾರಿಕೆ ಇದೆ’ ಎಂದು ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ವಿವರ ನೀಡಿದರು.

‘ಮಂಗಳೂರು ನಗರ ಪ್ರದೇಶದಲ್ಲಿ ಜಾಗದ ಕೊರತೆ ಇದೆ. ಯಾವುದೇ ಯೋಜನೆ ಅನುಷ್ಠಾನಗೊಳಿಸುವ ಮುನ್ನ ಈ ಸಮಸ್ಯೆ ಎದುರಾಗುತ್ತದೆ. ಮಹಾನಗರ ಪಾಲಿಕೆಯಲ್ಲಿ ಟಿಡಿಆರ್ ಕೊಟ್ಟು ಜಾಗ ಪಡೆದುಕೊಳ್ಳಬೇಕಾಗಿದೆ. ಈ ವರ್ಷ ಬೇಸಿಗೆಯಲ್ಲಿ ನಗರಕ್ಕೆ ನೀರಿನ ಸಮಸ್ಯೆ ಎದುರಾಗಿದ್ದು, ಭವಿಷ್ಯದಲ್ಲಿ ಇಂತಹ ಸಮಸ್ಯೆ ಎದುರಾಗದಂತೆ, ತುಂಬೆ ಅಣೆಕಟ್ಟೆಯ ನೀರು ಸಂಗ್ರಹ ಮಟ್ಟವನ್ನು 6ರಿಂದ 7 ಮೀಟರ್ ಎತ್ತರಕ್ಕೆ ಏರಿಸಬೇಕಾಗಿದೆ. ನಗರದ ಜನರಿಗೆ ಅನುಕೂಲವಾಗುವ ಇಂತಹ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಸ್ಪಂದನೆ ಅಗತ್ಯವಾಗಿ ಬೇಕು. ಈ ಹಿಂದೆ ಮಂಜೂರು ಆಗಿರುವ ಎಲ್ಲ ಕಾಮಗಾರಿಗಳ ಅನುದಾನ ತಡೆಹಿಡಿಯುವಂತೆ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ಆದೇಶಿಸಿದೆ. ಸರ್ಕಾರ ತಾರತಮ್ಯ ಇಲ್ಲದೆ ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆ ಮಾಡಬೇಕು’ ಎಂಬುದು ಅವರ ಆಗ್ರಹ.

ಮಳೆಗಾಲದ ಕೃತಕ ನೆರೆ ನಿವಾರಿಸುವ ನಿಟ್ಟಿನಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಈ ಬಾರಿ ಮಳೆಗಾಲದಲ್ಲಿ ಈ ಬಗ್ಗೆ ಇನ್ನೊಮ್ಮೆ ಅಧ್ಯಯನ ನಡೆಸಿ, ಮುಂದಿನ ಯೋಜನೆ ರೂಪಿಸಲಾಗುತ್ತದೆ. ಕರಾವಳಿಯಲ್ಲಿ ತುಳು ಹಾಗೂ ಇತರ ಭಾಷೆಗಳ ಸಿನಿಮಾಗಳು ನಿರ್ಮಾಣಗೊಳ್ಳುತ್ತವೆ. ಆದರೆ, ಇಲ್ಲಿ ಫಿಲ್ಮ್ ಸಿಟಿ ಕೊರತೆ ಇದೆ. ಇದಕ್ಕೆ 10 ಎಕರೆ ಜಾಗ ಆಯ್ಕೆ ಮಾಡಿದ್ದು, ಮಾತುಕತೆ ನಡೆಸಲಾಗಿದೆ ಎಂದು ಮುಂದಿನ ಯೋಜನೆಯ ವಿವರ ನೀಡಿದರು.

ಐಟಿ ಪಾರ್ಕ್ ಕನಸು

ಬೆಳೆಯುತ್ತಿರುವ ವಾಣಿಜ್ಯ ನಗರದಲ್ಲಿ ಯುವಜನರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ನಗರದಲ್ಲಿ ಐಟಿ ಪಾರ್ಕ್ ನಿರ್ಮಿಸುವುದು ನನ್ನ ಕನಸು. ಇದಕ್ಕೆ ಜಾಗ ಗುರುತಿಸಬೇಕಾಗಿದೆ. ಇದಕ್ಕೆ ₹70 ಕೋಟಿ ಅಗತ್ಯವಿದ್ದು ನಿರಂತರ ಪ್ರಯತ್ನದಿಂದ ಹಿಂದಿನ ಸರ್ಕಾರದಲ್ಲಿ ₹ 30 ಕೋಟಿ ಮಂಜೂರು ಮಾಡಿಸುವಲ್ಲಿ ಸಫಲನಾಗಿದ್ದೆ. ಕೋವಿಡ್ ಕಾರಣಕ್ಕೆ ಪೂರ್ಣ ಪ್ರಮಾಣದ ಅನುದಾನ ತರಲು ಸಾಧ್ಯವಾಗಿಲ್ಲ. ಹೀಗಾಗಿ ಯೋಜನೆ ಬಾಕಿಯಾಯಿತು ಎಂದು ವೇದವ್ಯಾಸ ಕಾಮತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT