ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಈಗಿನ ಬಿಜೆಪಿಯದ್ದು ಬಕೆಟ್‌ ಸಂಸ್ಕೃತಿ: ರಘುಪತಿ ಭಟ್ ಆರೋಪ

Published 31 ಮೇ 2024, 14:21 IST
Last Updated 31 ಮೇ 2024, 14:21 IST
ಅಕ್ಷರ ಗಾತ್ರ

ಪುತ್ತೂರು: ‘ಬಿಜೆಪಿಯಲ್ಲಿ ಟಿಕೆಟ್ ನೀಡುವಾಗ ಕಾರ್ಯಕರ್ತರ ಅಭಿಪ್ರಾಯಕ್ಕೆ ಬೆಲೆ ನೀಡಲಾಗುತ್ತಿತ್ತು. ಆದರೆ, ಈಗ ಪಕ್ಷದಲ್ಲಿ ಹಿಂದಿನ ಪದ್ಧತಿ ಉಳಿದಿಲ್ಲ. ಹಿಂದೆ ಪಕ್ಷದಲ್ಲಿ ಅವಕಾಶ ವಂಚಿತರನ್ನು, ಹಿರಿಯರನ್ನು ಗುರುತಿಸಿ ವಿಧಾನಪರಿಷತ್ ಟಿಕೆಟ್‌ ನೀಡಲಾಗುತ್ತಿತ್ತು. ಆದರೆ, ಈಗ ಆ ರೀತಿ ಇಲ್ಲ’ ಎಂದು ವಿಧಾನಪರಿಷತ್ ಚುನಾವಣೆಯ ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಆರೋಪಿಸಿದರು.

ಶುಕ್ರವಾರ ಪುತ್ತೂರಿನ ವಿವಿಧ ಕಡೆ ಪ್ರಚಾರ ಮಾಡಿದ ಅವರು, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಬೆಂಗಳೂರಿನ ಕ್ಷೇತ್ರವೊಂದಕ್ಕೆ ಹೋಗಿದ್ದೆ. ಅಲ್ಲಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಕಾರ್ಯಕರ್ತರ ಅಭಿಪ್ರಾಯಗಳನ್ನು ಮತಗಳ ರೂಪದಲ್ಲಿ ಪಡೆದು ಪೆಟ್ಟಿಗೆಗೆ ಹಾಕಲಾಗಿತ್ತು. ದುರಂತವೆಂದರೆ ಅಭ್ಯರ್ಥಿ ಆಯ್ಕೆ ಸಂದರ್ಭ ಆ ಪೆಟ್ಟಿಗೆಯನ್ನೇ ತೆರೆಯಲಿಲ್ಲ. ಇದು ಬಿಜೆಪಿಯ ಈಗಿನ ಸ್ಥಿತಿ’ ಎಂದರು.

‘ಬಿಜೆಪಿಯಲ್ಲಿ ಇಂದು ಅಪ್ಪನಿಗೆ ಸಿಎಂ ಪಟ್ಟ, ಮಗನಿಗೆ ರಾಜ್ಯ ಘಟಕದ ಅಧ್ಯಕ್ಷತೆ, ಇನ್ನೊಬ್ಬ ಮಗನಿಗೆ ಸಂಸದ ಸ್ಥಾನ ಬೇಕು. ಆದರೆ, ಸಕ್ರಿಯವಾಗಿ ಕೆಲಸ ಮಾಡುವವರಿಗೆ ಅವಕಾಶವಿಲ್ಲ. ನಾನು ಉಡುಪಿ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನಾಗಿ, ಒಂದು ಬಾರಿ ನಗರಸಭೆ ಸದಸ್ಯನಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಎಂದೂ ಸೋಲು ಕಾಣದ ನಾನು ಸಕ್ರಿಯ ರಾಜಕಾರಣದಲ್ಲಿ ಇರಬೇಕೆಂದು ಬಯಸಿದವ. ಕರವಳಿ ಭಾಗದ, ಅಡಿಕೆ ಬೆಳೆಗಾರರ ಸಮಸ್ಯೆಗಳ ಅರಿವು ನನಗಿದೆ. ದೇಶದಲ್ಲಿ ಯಾವುದೇ ಶಾಸಕ ಮಾಡದಷ್ಟು ಕೆಲಸವನ್ನು ನಾನು ಮಾಡಿದ್ದೇನೆ. ಕ್ರಿಯಾಶೀಲವಾಗಿ ಕೆಲಸ ಮಾಡುವ ಹುಮ್ಮಸ್ಸು ಇರುವುದರಿಂದಾಗಿಯೇ ವಿಧಾನ ಪರಿಷತ್‌ನಲ್ಲಿ ಸ್ಪರ್ಧಿಸಿದ್ದೇನೆ’ ಎಂದರು.

‘ಬಿಜೆಪಿ ಹಿಂದುತ್ವದ ಪಕ್ಷವಾದರೂ ಇಲ್ಲಿ ಹಿಂದುತ್ವದ ನಾಯಕರನ್ನೇ ಕಡೆಗಣಿಸಲಾಗುತ್ತಿದೆ. ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ನನಗೂ ಗೊತ್ತಿಲ್ಲ. ಆದರೆ, ನನ್ನ ನಿಲುವು ಬಿಜೆಪಿಯದ್ದೆ. ಹಿಂದುತ್ವವೇ ನನ್ನ ನಿಲುವು. ಪಕ್ಷದಲ್ಲಿ ದುಡಿದ ಹಿರಿಯರೊಬ್ಬರಿಗೆ ಟಿಕೆಟ್‌ ಸಿಗುತ್ತಿದ್ದರೆ ಸ್ಪರ್ಧಿಸುತ್ತಿರಲಿಲ್ಲ’ ಎಂದರು.

‘ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಡಾ.ಧನಂಜಯ ಸರ್ಜಿ ಅವರಿಗೆ ಟಿಕೆಟ್ ನೀಡಿದೆ. ಶಿವಮೊಗ್ಗದಲ್ಲಿ ಹರ್ಷ ಕೊಲೆಯಾದ ಸಂದರ್ಭ ಅವರು ಸಂಘ ಪರಿವಾರ ಮತ್ತು ಬಿಜೆಪಿಯ ವಿರುದ್ಧವಾಗಿ ಪ್ರಗತಿಪರರೊಂದಿಗೆ ಸೇರಿಕೊಂಡು ಜಾಥಾ ನಡೆಸಿದ್ದರು. ಕಾಂಗ್ರೆಸ್ ಟಿಕೆಟ್‌ಗೆ ಯತ್ನಿಸಿದ ಅವರು ಒಂದು ವರ್ಷದಿಂದೀಚೆಗೆ ಬಿಜೆಪಿ ಜತೆ ಗುರುತಿಸಿಕೊಂಡವರು. ಪಕ್ಷದ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ಕೊಡುತ್ತಿದ್ದರೆ ನನಗೆ ಬೇಸರ ಇರುತ್ತಿರಲಿಲ್ಲ. ಪದವೀಧರ ಕ್ಷೇತ್ರದ ಟಿಕೆಟ್ ಸಹಜವಾಗಿ ಕರಾವಳಿಗೆ ಸಿಗಬೇಕಿತ್ತು. ಅದಕ್ಕಾಗಿ ನನಗೆ ಕೊಡಿ ಎಂದು ಕೇಳಿದ್ದೆ’ ಎಂದರು.

ರಾಜಾರಾಂ ಭಟ್, ನವೀನ್ ಕುಲಾಲ್, ಮಂಗಳೂರು ಮಹಾ ನಗರಪಾಲಿಕೆ ಮಾಜಿ ಸದಸ್ಯ ನವೀನಚಂದ್ರ ಕೆ., ಸಂತೋಷ್ ರಾವ್, ಸುವರ್ಧನ್ ನಾಯಕ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT