ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷದ್ವೀಪಕ್ಕೆ ಮಂಗಳೂರಿನಿಂದ ನೇರ ಪ್ರವಾಸಕ್ಕೆ ಕ್ರಮ

ವಿಧಾನ ಪರಿಷತ್ತಿನಲ್ಲಿ ಹರೀಶ್‌ ಕುಮಾರ್‌ ಒತ್ತಾಯ
Published 15 ಫೆಬ್ರುವರಿ 2024, 7:52 IST
Last Updated 15 ಫೆಬ್ರುವರಿ 2024, 7:52 IST
ಅಕ್ಷರ ಗಾತ್ರ

ಮಂಗಳೂರು: ಲಕ್ಷದ್ವೀಪಕ್ಕೆ ನಗರದ ಹಳೆಬಂದರಿನಿಂದ ಪ್ರವಾಸ ಕೈಗೊಳ್ಳುವವರಿಗೆ ಅನುಕೂಲ ಕಲ್ಪಿಸಲು  ನಿಯಮಗಳನ್ನು ಸರಳೀಕರಣಗೊಳಿಸುವ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು. ಇದಕ್ಕಾಗಿ ಪ್ರತ್ಯೇಕ ಜೆಟ್ಟಿ ನಿರ್ಮಿಸುವ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಿ ಪ್ರವಾಸೋದ್ಯಕ್ಕೆ ಶಕ್ತಿಯನ್ನು ತುಂಬಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಹರೀಶ್‌ ಕುಮಾರ್‌ ಅವರು ವಿಧಾನ ಮಂಡಲ ಅಧಿವೇಶನದಲ್ಲಿ ಬುಧವಾರ ಮೀನುಗಾರಿಕೆ ಮತ್ತು ಬಂದರು ಸಚಿವರನ್ನು ಒತ್ತಾಯಿಸಿದರು.

‘ಪ್ರಜಾವಾಣಿ’ ಪತ್ರಿಕೆಯ ಜ.29ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿದ್ದ ವಿಶೇಷ ವರದಿಯನ್ನು ಉಲ್ಲೇಖಿಸಿ ಶೂನ್ಯವೇಳೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದರು. 

‘ಮಾಲ್ಡೀವ್ಸ್‌ ಜೊತೆಗೆ ಭಾರತದ ಸಂಬಂಧವು ಈಚೆಗೆ ಹಳಸಿರುವುದರಿಂದ ಲಕ್ಷದ್ವೀಪವು ಪ್ರವಾಸೋದ್ಯಮಕ್ಕೆ ಪರ್ಯಾಯ ತಾಣವಾಗಿ ಪ್ರಸಿದ್ಧಿ ಪಡೆಯುತ್ತಿದೆ. ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ. ಅಲ್ಲಿಗೆ ಸಂಪರ್ಕ ವ್ಯವಸ್ಥೆಯನ್ನು ಬಲಗೊಳಿಸಬೇಕೆನ್ನುವ ಕೂಗು ಎದ್ದಿದೆ’ ಎಂದು ಗಮನ ಸೆಳೆದರು. 

‘ಕೆಲ ವರ್ಷಗಳ ಹಿಂದೆ, ನಗರದಿಂದ ಲಕ್ಷದ್ವೀಪಕ್ಕೆ ಪ್ರವಾಸಿ ಹಡಗಿನ ಸೌಲಭ್ಯವಿತ್ತು. ₹ 6ಸಾವಿರಕ್ಕೆ ಮೂರು ದಿನಗಳ  ಊಟೋಪಚಾರ, ವಸತಿ ಸಹಿತ ಪ್ಯಾಕೇಜ್ ವ್ಯವಸ್ಥೆಯೂ ಇತ್ತು. ಕಾರಣಾಂತರಗಳಿಂದ ಅದು ಸ್ಥಗಿತಗೊಂಡಿದೆ.  ಲಕ್ಷದ್ವೀಪಕ್ಕೆ ಈಗಲೂ ‘ಹಳೆ ಮಂಗಳೂರು ಬಂದರಿ’ನಿಂದ ಸರಕು, ಆಹಾರ ಸಾಮಗ್ರಿಗಳು, ತರಕಾರಿ, ಹಣ್ಣುಗಳು, ನಿರ್ಮಾಣ ಸಾಮಗ್ರಿಗಳು ಪೂರೈಕೆಯಾಗುತ್ತಿವೆ. ಆ ದ್ವೀಪಗಳ ನಿವಾಸಿಗಳು ಇಲ್ಲಿಗೆ ಬಂದು ಸರಕು ಕೊಂಡೊಯ್ಯಲು ಅವಕಾಶವಿದೆ. ಆದರೆ ಇಲ್ಲಿಂದ ಅಲ್ಲಿಗೆ ಪ್ರವಾಸಿಗರು ಹೋಗಲು ಅವಕಾಶವಿರುವುದಿಲ್ಲ. ಲಕ್ಷದ್ವೀಪಕ್ಕೆ ಹೋಗಲೆಂದೇ ಪ್ರತ್ಯೇಕ ಜೆಟ್ಟಿ ನಿರ್ಮಾಣಕ್ಕೆ ಆರೇಳು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಈ ಯೋಜನೆ  ನನೆಗುದಿಗೆ ಬಿದ್ದಿದೆ.’

‘ಪ್ರವಾಸಿಗರು ಲಕ್ಷದ್ವೀಪಕ್ಕೆ ಕೇರಳದ ಕೊಚ್ಚಿಯಿಂದ ತೆರಳಲು ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಅಲ್ಲಿಂದ ಲಕ್ಷದ್ವೀಪಕ್ಕೆ 391 ಕಿ.ಮೀ. ದೂರ ಇದ್ದರೆ, ಮಂಗಳೂರಿನಿಂದ 357 ಕಿ.ಮೀ. ದೂರ ಇದೆ. ಕೊಚ್ಚಿಗಿಂತ  ನಗರವು ಹತ್ತಿರದಲ್ಲಿದೆ. ಇಲ್ಲಿಂದ ಸಂಪರ್ಕ ವ್ಯವಸ್ಥೆ ಆರಂಭಿಸಿದರೆ ಪ್ರವಾಸೋದ್ಯಮಕ್ಕೆ, ತನ್ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲವಾಗಲಿದೆ’ ಎಂದು ವಿಧಾನ ಪರಿಷತ್ತಿನಲ್ಲಿ ಒತ್ತಾಯಿಸಿದ್ದೇನೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT