ಭದ್ರತೆ ಒದಗಿಸುವಂತೆ ಪೊಲೀಸರಿಗೆ ಮನವಿ
‘ಬಾಹ್ಯ ಶಕ್ತಿಗಳು ಗ್ರೇಡ್–1 ಅಧಿಕಾರಿಗೇ ಧಮಕಿ ಹಾಕುತ್ತಾರೆ ಎಂದಾದ ಮೇಲೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಇತರರ ಪರಿಸ್ಥಿತಿ ಏನಾಗಬೇಕು? ದಲ್ಲಾಳಿಗಳು 180 ಮಂದಿ ಇದ್ದಾರೆ. ನಾವೆಲ್ಲರೂ ಸೇರಿದರೆ ಆಗುವುದು 11 ಮಂದಿ. ಎಲ್ಲರೂ ಹೆದರುತ್ತ ಕೆಲಸ ಮಾಡಬೇಕಾಗಿದೆ. ಆದ್ದರಿಂದ ಭದ್ರತೆ ಒದಗಿಸುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗಿದೆ. ಈ ಹಿಂದೆಯೂ ಒಮ್ಮೆ ಈ ಪ್ರಸ್ತಾವ ಇಟ್ಟಾಗ ಹೋಂ ಗಾರ್ಡ್ ಸಹಾಯ ಪಡೆದುಕೊಳ್ಳುವಂತೆ ಸೂಚಿಸಿದ್ದರು. ಆ ಬಗ್ಗೆಯೂ ಪ್ರಯತ್ನ ನಡೆದಿದೆ’ ಎಂದು ಮುಡಾ ಆಯುಕ್ತರು ತಿಳಿಸಿದರು. ‘ಗುತ್ತಿಗೆ ಆಧಾರದಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಇದ್ದರು. ಇಲ್ಲಿಯ ಪರಿಸ್ಥಿತಿಗೆ ಹೆದರಿ ಅವರು ಒಂದೂವರೆ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದಾರೆ. ಭದ್ರತೆಗೆ ಬಂದವರೆಲ್ಲರೂ ರಜೆ ಹಾಕಿ ಹೋಗುತ್ತಾರೆ. ಹೊಸಬರು ಬಂದಾಗ ಅವರಿಗೆ ಬ್ರೋಕರ್‌ಗಳು ಯಾರೆಂದು ತೋರಿಸಿಕೊಡಬೇಕಾಗುತ್ತದೆ. ಇಲ್ಲವಾದರೆ ಎಲ್ಲರೂ ನುಗ್ಗಿ ಬರುತ್ತಾರೆ’ ಎಂದು ಆಯುಕ್ತರು ಹೇಳಿದರು.