ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಂತೂರು: ಕತ್ತು ಹಿಚುಕಿ ಕಾರ್ಮಿಕನ ಕೊಲೆ

Published 14 ಜನವರಿ 2024, 3:29 IST
Last Updated 14 ಜನವರಿ 2024, 3:29 IST
ಅಕ್ಷರ ಗಾತ್ರ

ಮಂಗಳೂರು: ಕಟ್ಟಡ ನಿರ್ಮಾಣ ಸಹಾಯಕ ಕಾರ್ಮಿಕರೊಬ್ಬರನ್ನು ಕತ್ತು ಹಿಚುಕಿ ಕೊಲೆ ಮಾಡಿದ ಬಗ್ಗೆ ನಗರದ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ನಂತೂರು ವಿವೇಕಾನಂದ ನಗರದ ಬಾಡಿಗೆ ಮನೆಯಲ್ಲಿ 10 ವರ್ಷಗಳಿಂದ ವಾಸವಿದ್ದ, ಗದಗ ಜಿಲ್ಲೆ ರೋಣ ತಾಲ್ಲೂಕು ಇಟಗಿ ಗ್ರಾಮದ ಹನುಮಂತಪ್ಪ ಪೂಜಾರಿ (39 ವರ್ಷ) ಮೃತರು. ಅವರು ಇಲ್ಲಿ ಕಟ್ಟಡ ನಿರ್ಮಾಣ ಸಹಾಯಕ ಕಾರ್ಮಿಕನಾಗಿ ದುಡಿಯುತ್ತಿದ್ದರು.

‘ನನ್ನ ಗಂಡ ಜ.10 ರಂದು ಬೆಳಿಗ್ಗೆ ಹೆಲ್ಪರ್‌ ಕೆಲಸಕ್ಕೆ ಹೋಗಿದ್ದು, ಸಂಜೆ 5ಗಂಟೆ ಸುಮಾರಿಗೆ ವಿಪರೀತ ಕುಡಿದುಕೊಂಡು ಮನೆಗೆ ಬಂದಿದ್ದರು. ಮನೆಯಲ್ಲಿ ಮತ್ತೆ ಕುಡಿದಿದ್ದರು. ರಾತ್ರಿ ಊಟವಾದ ಬಳಿಕ ಮನೆಯಲ್ಲೇ ಮಲಗಿದ್ದರು. ಮಲಗಿದ್ದಲ್ಲಿಂದ ಮಧ್ಯ ರಾತ್ರಿ ಎದ್ದು ಮನೆಯಿಂದ ಹೊರಗೆ ಹೋಗಿದ್ದರು. ಮುಂಜಾನೆ 2 ಗಂಟೆ ವೇಳೆ ಎದ್ದು ನೋಡಿದಾಗ ಗಂಡ ಮನೆಯಲ್ಲಿ ಇರಲಿಲ್ಲ. ಹೊರಗಡೆ ಹುಡುಕಿದಾಗ ಗೇಟಿನ ಬಳಿ ವಾಂತಿ ಮಾಡಿಕೊಂಡು ಬಿದ್ದಿದ್ದರು. ಗಂಡನ ಅಣ್ಣ ವಿನಾಯಕ ಎಂಬುವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದೆ. ಮಾತನಾಡದ ಸ್ಥಿತಿಯಲ್ಲಿದ್ದ ಗಂಡನನ್ನು ಬಾವ ಮತ್ತು ನಾನು ಸೇರಿ ವೆನ್ಲಾಕ್‌ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ದಿದ್ದೆವು. ಅಲ್ಲಿ ನನ್ನ ಗಂಡನನ್ನು ಪರೀಕ್ಷೆ ಮಾಡಿದ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ’ ಎಂದು ಹನುಮಂತ ಪೂಜಾರಿ ಅವರ ಪತ್ನಿ ಗೀತಾ ಅವರು ನಗರ ಪೂರ್ವ ಠಾಣೆಗೆ ಜ.11ರಂದು ಬೆಳಿಗ್ಗೆ ದೂರು ನೀಡಿದ್ದರು. ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿತ್ತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ಹನುಮಂತಪ್ಪ ಅವರ ಕುತ್ತಿಗೆಯನ್ನು ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ವರದಿ ನೀಡಿದ್ದಾರೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT