ವಿಟ್ಲ (ದಕ್ಷಿಣ ಕನ್ನಡ): ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಲು ದಕ್ಷಿಣ ಕನ್ನಡ ಜಿಲ್ಲೆಯ ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಫೀಸಾ ಅವರನ್ನು ಆಹ್ವಾನಿಸಲಾಗಿದ್ದು, ವಿಶೇಷ ಅತಿಥಿಯಾಗಿ ಅವರು ಭಾಗವಹಿಸಲಿದ್ದಾರೆ.
ಈ ಬಾರಿ ರಾಜ್ಯದ 6 ಗ್ರಾಮ ಪಂಚಾಯಿತಿಗಳ ಅಧ್ಯಕ್ಷೆಯರನ್ನು ಆಹ್ವಾನಿಸಲಾಗಿದೆ. ಒಂದು ವರ್ಷದಿಂದ ಪೆರುವಾಯಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿರುವ ನಫೀಸಾ ಅವರು ಹಿಂದಿನ ಅವಧಿಯಲ್ಲಿ ಎರಡೂವರೆ ವರ್ಷ ಉಪಾಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ತ್ಯಾಜ್ಯ ವಿಲೇವಾರಿ ವಾಹನವನ್ನು ಸ್ವತಃ ಚಲಾಯಿಸಿ ತ್ಯಾಜ್ಯ ಸಂಗ್ರಹಿಸಿ ಗಮನ ಸೆಳೆದಿದ್ದು, ಅವರನ್ನು ಹಲವರು ಗೌರವಿಸಿದ್ದರು. ಅವರ ಆ ಸೇವೆಯನ್ನು ಗುರುತಿಸಿ ‘ವರ್ಲ್ಡ್ ಯೂತ್ ಸ್ಕಿಲ್ ಡೇ’ ಅಂಗವಾಗಿ ಬೆಂಗಳೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೌರವಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಫೀಸಾ, ‘ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನನಗೆ ಹೆಮ್ಮೆ. ಗ್ರಾಮದ ಜನರ, ಅಧಿಕಾರಿಗಳ, ಜನಪ್ರತಿನಿಧಿಗಳ ಸಹಕಾರದಿಂದ ಗ್ರಾಮದಲ್ಲಿ ಉತ್ತಮ ಅಭಿವೃದ್ಧಿ ಮಾಡಲು ಸಾಧ್ಯವಾಗಿದ್ದು, ಇದರ ಪ್ರತಿಫಲವಾಗಿ ಈ ಅವಕಾಶ ಸಿಕ್ಕಿದೆ’ ಎಂದರು.
ರೈತ ದಂಪತಿ ಆಯ್ಕೆ
ಕಂಪ್ಲಿ (ಬಳ್ಳಾರಿ ಜಿಲ್ಲೆ): ನವದೆಹಲಿಯ ಕೆಂಪುಕೋಟೆ ಬಳಿ ನಡೆಯುವ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ವೀಕ್ಷಿಸಲು ವಿಶೇಷ ಅತಿಥಿಗಳಾಗಿ ಕಂಪ್ಲಿ ತಾಲ್ಲೂಕಿನ (ಎಬಿಪಿ) ದೇವಲಾಪುರ ಗ್ರಾಮದ ರೈತ ದಂಪತಿ ಗೌಡ್ರು ಮಲ್ಲಿಕಾರ್ಜುನ ಮತ್ತು ಮೀನಾಕ್ಷಿ ಆಯ್ಕೆಯಾಗಿದ್ದಾರೆ. ‘ಮಣ್ಣಿನ ಆರೋಗ್ಯ, ಗುಣಮಟ್ಟ ಕಾಪಾಡಿಕೊಳ್ಳುವ ಜೊತೆಗೆ ‘ಮಣ್ಣಿನ ಆರೋಗ್ಯ ಕಾರ್ಡ್’ ಕುರಿತು ರೈತರಿಗೆ ಅರಿವು ಮೂಡಿಸುವಲ್ಲಿ ದಂಪತಿ ಮುಂಚೂಣಿಯಲ್ಲಿದ್ದಾರೆ’ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಧರ ತಿಳಿಸಿದ್ದಾರೆ.