ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ರಸ್ತೆಯಲ್ಲಿ ನಮಾಜ್: ಪ್ರಕರಣ ದಾಖಲಿಸಿದ್ದ ಪಿಐಗೆ ಕಡ್ಡಾಯ ರಜೆ

Published 30 ಮೇ 2024, 23:50 IST
Last Updated 30 ಮೇ 2024, 23:50 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಕಂಕನಾಡಿಯ ಮಸೀದಿಯೊಂದರ ಮುಂಭಾಗದ ರಸ್ತೆಯಲ್ಲಿ ಮೇ 24ರಂದು ನಮಾಜ್ ಮಾಡಿದ್ದರ ಸಂಬಂಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಕೊಂಡಿದ್ದ ಕದ್ರಿಯ ನಗರ ಪೂರ್ವ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಸೋಮಶೇಖರ್‌ ಅವರಿಗೆ ಕಡ್ಡಾಯ ರಜೆ ನೀಡಲಾಗಿದೆ.

ಸಂಚಾರಕ್ಕೆ ಅಡೆತಡೆ ಮಾಡುವ ಉದ್ದೇಶ ಇಲ್ಲದೆ ನಮಾಜ್ ಮಾಡಿರುವುದರಿಂದ ಈ ಪ್ರಕರಣ ದಲ್ಲಿ ನ್ಯಾಯಾಲಯಕ್ಕೆ ‘ಬಿ ರಿಪೋರ್ಟ್’ ಸಲ್ಲಿಸಲಾಗಿದೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಪ್ರಕರಣ ದಾಖಲಿಸಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿ, ಎಸಿಪಿ ದರ್ಜೆಯ ಅಧಿಕಾರಿಯನ್ನು ವಿಚಾರಣೆಗೆ ನೇಮಕ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ರಸ್ತೆಯಲ್ಲಿ ನಮಾಜ್‌ ಮಾಡಿದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ (ಐಪಿಸಿ ಸೆಕ್ಷನ್ 341,283,143,149) ದಾಖಲಿಸಿಕೊಂಡಿದ್ದರು. ಇದಕ್ಕೆ ಮುಸ್ಲಿಂ ಸಂಘಟನೆಗಳವರು, ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದವರು ಆಕ್ರೋಶ ವ್ಯಕ್ತಪಡಿಸಿ, ಪ್ರಕರಣ ವಾಪಸ್‌ಗೆ ಕ್ರಮ ಕೈಗೊಳ್ಳುವಂತೆ ಕೋರಿದ್ದರು.

‘ಮುಸ್ಲಿಂ ಸಂಘಟನೆಯ ಒತ್ತಡಕ್ಕೆ ಮಣಿದು, ಬಿ ವರದಿ ಸಲ್ಲಿಸಿದ್ದು ಸರಿಯಲ್ಲ’ ಎಂದು ವಿಎಚ್‌ಪಿ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ. ರಾಜ್ಯದಾದ್ಯಂತ ಹೋರಾಟಕ್ಕೆ ಕರೆ ನೀಡುವುದಾಗಿ ಹೇಳಿದ್ದಾರೆ.

ಶರಣ್ ಪಂಪ್‌ವೆಲ್ ವಿರುದ್ಧ ಪ್ರಕರಣ

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ ಆರೋಪದ ಮೇರೆಗೆ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘ಮಂಗಳೂರಿನ ಕಂಕನಾಡಿ ಬಳಿ ಸಾರ್ವಜನಿಕರಿಗೆ ಉದ್ದೇಶಪೂರ್ವಕವಾಗಿ ತೊಂದರೆ ನೀಡಲು ನಡೆಸಿರುವ ನಮಾಜ್‌ ಬಗ್ಗೆ ಸಂಬಂಧಪಟ್ಟ ವರಗೆ ಈಗಾಗಲೇ ತಿಳಿಸಲಾಗಿದೆ. ಶುಕ್ರವಾರ ಮತ್ತೆ ಅದೇ ಜಾಗದಲ್ಲಿ ನಮಾಜ್ ನಡೆದರೆ ಬಜರಂಗದಳವು ನೇರ ಕಾರ್ಯಾಚರಣೆ ನಡೆಸಿ ನಿಲ್ಲಿಸುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಪೋಸ್ಟ್‌ ಮಾಡಲಾಗಿದೆ. ಇದು ಜನರಲ್ಲಿ ದ್ವೇಷ ಭಾವನೆ ಬಿತ್ತುವ ಮತ್ತು ಕಾನೂನು ಕೈಗೆತ್ತಿಗೊಳ್ಳುವ ಬೆದರಿಕೆ ಹಾಗೂ ಸಮಾಜದಲ್ಲಿ ಭಯ ಉಂಟುಮಾಡುವ ಪೋಸ್ಟ್ ಆಗಿದ್ದು, ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಈ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT