ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಭಾರತ ರಾತ್ರಿ ಪ್ರೌಢಶಾಲೆ: 80ನೇ ವರ್ಧಂತ್ಯುತ್ಸವ

Last Updated 17 ಮಾರ್ಚ್ 2023, 6:03 IST
ಅಕ್ಷರ ಗಾತ್ರ

ಮಂಗಳೂರು: ‘ಎಲ್ಲರೂ ಒಂದಾಗಿ ಬದುಕಬೇಕು, ಜನರ ಕಣ್ಣಿರು ಒರೆಸಿ ಸಮಾಜಸೇವೆ ಮಾಡಬೇಕು, ಮಾನವ ಧರ್ಮವೇ ಮುಖ್ಯವಾಗಬೇಕು ಎಂಬುದು ನವಭಾರತ ಎಜುಕೇಷನ್ ಸೊಸೈಟಿಯ ಸಂಸ್ಥಾಪಕ ಖಾಲಿದ್ ಮಹಮ್ಮದ್‍ ಅವರ ಆಶಯವಾಗಿತ್ತು’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.

ನಗರದ ರಥಬೀದಿಯ ನವಭಾರತ ಎಜುಕೇಷನ್ ಸೊಸೈಟಿ, ನವಭಾರತ ರಾತ್ರಿ ಪ್ರೌಢಶಾಲೆಯ 80ನೇ ವರ್ಧಂತ್ಯುತ್ಸವ ಮತ್ತು ನವಭಾರತ ಯಕ್ಷಗಾನ ಅಕಾಡಮಿಯ ಒಂಬತ್ತನೆಯ ವಾರ್ಷಿಕೋತ್ಸವ ಅಂಗವಾಗಿ ಇಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿಕ್ಷಣದ ಮಹತ್ವವನ್ನು 80 ವರ್ಷದ ಹಿಂದೆಯೇ ಮನಗಂಡಿದ್ದ ಶಿಕ್ಷಕ ಖಾಲಿದ್ ಮುಹಮ್ಮದ್ ರಾತ್ರಿ ಶಾಲೆಯನ್ನು ಆರಂಭಿಸಿದ್ದು ದೊಡ್ಡ ಸಾಧನೆಯೇ ಸರಿ. ಕರ್ತವ್ಯದ ಜೊತೆ ಸೇವೆ ಮತ್ತು ಸೇವೆಯ ಜೊತೆ ಪ್ರೀತಿ–ವಿಶ್ವಾಸ ಮುಖ್ಯ ಎಂಬುದನ್ನು ಅವರು ಅರಿತಿದ್ದರು’ ಎಂದರು.

ಖಾಲಿದ್ ಮುಹಮ್ಮದ್‍ ಅವರ ಒಡನಾಡಿ ಮತ್ತು‌ ಸೊಸೈಟಿಯ ಕಾರ್ಯದರ್ಶಿ ಎಂ. ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು.

ಖಾಲಿದ್ ಮುಹಮ್ಮದ್‍ರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ ರಾಮಚಂದ್ರ, ‘ಈ ಪ್ರೌಢಶಾಲೆಯ ವಿದ್ಯಾರ್ಥಿಯಾಗಿ, ಹಳೆ ವಿದ್ಯಾರ್ಥಿಯಾಗಿ, ಶಿಕ್ಷಕನಾಗಿ ಕರ್ತವ್ಯ ನಿಭಾಯಿಸಿದ್ದೇನೆ. ಗುರುಗಳಾದ ಖಾಲಿದ್ ಮುಹಮ್ಮದ್ ಮತ್ತು ಅವರ ಕುಟುಂಬದವರ ಪ್ರೀತಿ, ವಿಶ್ವಾಸವೇ ನನ್ನ ಎಲ್ಲಾ ಸತ್ಕಾರ್ಯಗಳಿಗೆ ಪ್ರೇರಣೆ’ ಎಂದರು.

ಸೊಸೈಟಿಯ ಅಧ್ಯಕ್ಷ ಡಾ.ಪಿ.ವಿ.ಶೆಣೈ ಅಧ್ಯಕ್ಷತೆ ವಹಿಸಿದ್ದರು. ಜೊತೆ ಕಾರ್ಯದರ್ಶಿ ಆನಂದ ಕೆ. ಸುವರ್ಣ, ಲಕ್ಷ್ಮಿ ಕೆ. ನಾಯರ್ ಹಾಗೂ ಖಾಲಿದ್ ಮುಹಮ್ಮದ್‍ ಅವರಮಗ ಫಕ್ರುದ್ದೀನ್ ಅಲಿ ಇದ್ದರು. ಪ್ರೌಢಶಾಲೆಯ ಮುಖ್ಯಶಿಕ್ಷಕ ವರ್ಕಾಡಿ ರವಿ ಅಲೆವೂರಾಯ ಸ್ವಾಗತಿಸಿದರು.

ವರ್ಧಂತ್ಯುತ್ಸವದ ಅಂಗವಾಗಿ `ಏಕ್ ಶ್ಯಾಮ್ ರಫಿ ಕೆ ನಾಮ್` ಸಂಗೀತ ರಸಮಂಜರಿ ಹಾಗೂ `ಶ್ರೀ ಕೃಷ್ಣ ಕಾರುಣ್ಯ' ಯಕ್ಷಗಾನ ಬಯಲಾಟ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT