ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಗಿನಿಂದ ತೈಲ ಹೊರತೆಗೆಯಲು ಕ್ರಮ: ಜಿಲ್ಲಾಧಿಕಾರಿ

Last Updated 29 ಜೂನ್ 2022, 15:16 IST
ಅಕ್ಷರ ಗಾತ್ರ

ಮಂಗಳೂರು: ಉಳ್ಳಾಲ ಬಟ್ಟಪ್ಪಾಡಿಸಮೀಪ ಅರಬ್ಬೀ ಸಮುದ್ರದಲ್ಲಿ ಮುಳುಗಡೆಯಾಗಿರುವ ‘ಎಂ.ವಿ. ಪ್ರಿನ್ಸೆಸ್‌ ಮಿರಾಲ್‌’ ಹಡಗಿನಿಂದ ತೈಲ ಹೊರಗೆ ತೆಗೆಯುವುದಕ್ಕೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ಮುಳುಗಡೆಯಾದ ಹಡಗಿನ ತೆರವಿಗೆ ಏಜೆನ್ಸಿಗಳನ್ನು ನಿಯೋಜಿಸುವ ಬಗ್ಗೆ ನೌಕಾಯಾನ ಇಲಾಖೆಯ ಮಹಾನಿರ್ದೇಶಕರು ಕ್ರಮವಹಿಸಲಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

‘ಹಡಗು ಮುಳುಗಡೆಯಿಂದ ಎದುರಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ನೌಕಾಯಾನ ಇಲಾಖೆಯ ಮಹಾನಿರ್ದೇಶಕರು, ಕರಾವಳಿ ರಕ್ಷಣಾ ಪಡೆ, ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ), ಮಂಗಳೂರು ರಿಫೈನರೀಸ್‌ ಆ್ಯಂಡ್‌ ಪೆಟ್ರೊ ಕೆಮಿಕಲ್ಸ್‌ (ಎಂಆರ್‌ಪಿಎಲ್) ಸೇರಿದಂತೆ ವಿವಿಧ ಇಲಾಖೆಗಳ ಜೊತೆ ಜಿಲ್ಲಾಡಳಿತ ಪ್ರತಿದಿನ ಸಂಜೆ 5 ಗಂಟೆಗೆ ವರ್ಚುವಲ್ ರೂಪದಲ್ಲಿ ಸಭೆ ನಡೆಸುತ್ತಿದೆ. ಪರಿಸ್ಥಿತಿಗೆ ತಕ್ಕಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

‘ಮುಳುಗಡೆಯಾದ ಹಡಗಿನಿಂದ ಇದುವರೆಗೆ ಯಾವುದೇ ರೀತಿಯ ತೈಲ ಸೋರಿಕೆ ಕಂಡು ಬಂದಿಲ್ಲ. ಕರಾವಳಿ ರಕ್ಷಣಾ ಪಡೆಗೆ ಸೇರಿದ ಮೂರು ವಿಶೇಷ ಹಡಗುಗಳು, ಡಾರ್ನಿಯರ್ ವಿಮಾನಗಳ ಮೂಲಕ ಸಮುದ್ರದಲ್ಲಿ ನಿರಂತರವಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಸಮುದ್ರದಲ್ಲಿ ತೈಲ ಸೋರಿಕೆಯಾದಲ್ಲಿ ಅದನ್ನು ನಿವಾರಿಸುವ ಕ್ರಮಗಳು, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು ಹಾಗೂ ಸುರಕ್ಷತೆಗಳ ಬಗ್ಗೆ ಈಗಾಗಲೇ ಜಿಲ್ಲಾಡಳಿತದ ವತಿಯಿಂದ ಅಣಕು ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಅಗತ್ಯ ಪರಿಕರಗಳನ್ನು ಸನ್ನದ್ಧವಾಗಿ ಇಟ್ಟುಕೊಳ್ಳಲಾಗಿದೆ’ ಎಂದು ಅವರು ವಿವರಿಸಿದ್ದಾರೆ.

‘ತುರ್ತು ಸಂದರ್ಭದಲ್ಲಿ ವಹಿಸಬೇಕಾದ ವಿಶೇಷ ಕ್ರಮಗಳ ಬಗ್ಗೆ ತಾಂತ್ರಿಕ ಪರಿಣಿತರು ಜಿಲ್ಲಾಡಳಿತಕ್ಕೆ ಮಾರ್ಗದರ್ಶನ ನೀಡುತ್ತಿದ್ದು, ಅದರಂತೆಯೂ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ನೌಕಾಯಾನ ಇಲಾಖೆಯ ಮಹಾನಿರ್ದೇಶಕರ ಕಚೇರಿ, ಕರಾವಳಿ ರಕ್ಷಣಾ ಪಡೆಯ ಕೇಂದ್ರ ಕಚೇರಿ ಹಾಗೂ ಪಶ್ಚಿಮ ಕಚೇರಿಗಳು, ಹವಾಮಾನ ಇಲಾಖೆಯ ಅಧಿಕಾರಿಗಳು, ನವಮಂಗಳೂರು ಬಂದರು ಪ್ರಾಧಿಕಾರಗಳ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT