ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಗುಂಡಿ ಸಮಸ್ಯೆಗೆ ಜ.15ರೊಳಗೆ ಮುಕ್ತಿ: ರವಿಕುಮಾರ್‌

Last Updated 2 ಡಿಸೆಂಬರ್ 2022, 16:17 IST
ಅಕ್ಷರ ಗಾತ್ರ

ಮಂಗಳೂರು: ‘ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚತುಷ್ಫಥ ಕಾಮಗಾರಿ ನಡೆಯುತ್ತಿದ್ದು, ಇದರಲ್ಲಿರುವ ಗುಂಡಿಗಳನ್ನು 2023ರ ಜ.15ರ ಒಳಗೆ ಮುಚ್ಚುವಂತೆ ಗುತ್ತಿಗೆದಾರರಿಗೆ ಗಡುವು ನೀಡಿದ್ದೇನೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌.ತಿಳಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಚುರುಕುಗೊಳಿಸುವ ಕುರಿತು ಹಾಗೂ ಈ ಹೆದ್ದಾಯಲ್ಲಿರುವ ಗುಂಡಿಗಳಿಂದ ಜನರು ಅನುಭವಿಸುತ್ತಿರುವ ಸಮಸ್ಯೆ ನೀಗಿಸುವ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಎಚ್‌ಎಐ), ಲೋಕೋಪಯೋಗಿ ಇಲಾಖೆ, ಕೆಪಿಟಿಸಿಎಲ್‌ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಹೆದ್ದಾರಿ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಸೂಚನೆ ನೀಡಿದ್ದೇನೆ’ ಎಂದರು.

‘ಮೂಡುಬಿದಿರೆಯಲ್ಲಿ ಅಂತರರಾಷ್ಟ್ರೀಯ ಜಾಂಬೂರಿ ಡಿಸೆಂಬರ್‌ ಅಂತ್ಯದಲ್ಲಿ ನಡೆಯಲಿದೆ. ವರ್ಷಾಂತ್ಯದಲ್ಲಿ ಕರಾವಳಿ ಉತ್ಸವವೂ ನಡೆಯಲಿದ್ದು, ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಈ ವೇಳೆಗೆ ಹೆದ್ದಾರಿಯು ಗುಂಡಿಗಳಿಂದ ಮುಕ್ತವಾಗಿರಬೇಕು ಎಂಬ ಆಶಯ ಜಿಲ್ಲಾಡಳಿತದ್ದು. ಆದರೆ, ಅಷ್ಟರೊಳಗೆ ಗುಂಡಿ ಮುಚ್ಚುವುದು ಕಷ್ಟಸಾಧ್ಯ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ’ ಎಂದರು.

‘ಜಿಲ್ಲೆಯಲ್ಲಿ ಕರಾವಳಿ ನಿಯಂತ್ರಣ ವಲಯದಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ಮುಂದುವರಿಸಲು ಈಗಾಗಲೇ 142 ಮಂದಿಗೆ ಅನುಮತಿ ನೀಡಲಾಗಿದೆ. ಇನ್ನುಳಿದ 52 ಅರ್ಜಿಗಳನ್ನು ಎರಡು ದಿನಗಳಲ್ಲಿ ಇತ್ಯರ್ಥ ಮಾಡಲಾಗುತ್ತದೆ. ಜಿಲ್ಲೆಯ ಜನರು ಒಂದು ಲೋಡ್‌ ಮರಳಿಗೆ ₹ 8ಸಾವಿರಕ್ಕಿಂತ ಹೆಚ್ಚು ದರ ನೀಡುವ ಸ್ಥಿತಿ ಇರಬಾರದು. ಜಿಲ್ಲೆಯಿಂದ ಕೇರಳಕ್ಕೆ ಮರಳು ಸಾಗಣೆಗೆ ನಿಷೇಧವಿದ್ದರೂ ಕಳ್ಳಸಾಗಣೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಕ್ರಮಕೈಗೊಳ್ಳುತ್ತೇವೆ’ ಎಂದರು.

–0–

‘ಯಕ್ಷಗಾನಕ್ಕೆ ರಾತ್ರಿ 12ರವರೆಗೆ ಅವಕಾಶ’

‘ಕಟೀಲು ಮೇಳದ ಯಕ್ಷಗಾನವನ್ನು ರಾತ್ರಿ ಪೂರ್ತಿ ನಡೆಸಲು ಅವಕಾಶ ನೀಡಬೇಕು ಎಂದು ಶ್ರೀಕ್ಷೇತ್ರದ ಭಕ್ತರು ಬೇಡಿಕೆ ಸಲ್ಲಿಸಿದ್ದರು. ರಾತ್ರಿ 10 ಗಂಟೆ ನಂತರ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನವಿದೆ. ಹಾಗಾಗಿ ಸಾಂಪ್ರದಾಯಿಕ ಕಲೆಯನ್ನು ಬೆಳಿಗ್ಗೆವರೆಗೆ ಪ್ರದರ್ಶಿಸುವುದಕ್ಕೆ ಅವಕಾಶವಿಲ್ಲ. ನನ್ನ ಅಧಿಕಾರ ಬಳಸಿ ರಾತ್ರಿ 12ರವರೆಗೆ ಯಕ್ಷಗಾನ ನಡೆಸಲು ಅನುಮತಿ ನೀಡಿದ್ದೇನೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಭೂತಕೋಲವನ್ನೂ ರಾತ್ರಿ ಪೂರ್ತಿ ನಡೆಸಲು ಅನುಮತಿ ಕೋರಿ ಇದುವರೆಗೆ ಅರ್ಜಿ ಬಂದಿಲ್ಲ. ಬಂದರೆ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದರು.

–0–

ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷ ಅಭಿಯಾನ


‘ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಇದೇ 3 ಮತ್ತು 4ರಂದು ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದೇ 8ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶ ಇದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.


‘ಮತದಾರರು ಸಲ್ಲಿಸುವ ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ಇದೇ 26ರೊಳಗೆ ವಿಲೇ ಮಾಡಲಾಗುವುದು. 2023ರ ಜ.5ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ’ಎಂದರು.

‘ಈ ಮೊದಲು ಜನವರಿ 1ರೊಳಗೆ 18 ವರ್ಷ ಪೂರ್ಣಗೊಳಿಸಿದ್ದರೆ ಅಂತಹವರ ಹೆಸರನ್ನು ಮಾತ್ರ ಮತದಾರರ ಪಟ್ಟಿಗೆ ಸೇರಿಸಲು ಅವಕಾಶವಿತ್ತು. 17 ವರ್ಷ ತುಂಬಿದವರು ಒಂದು ವರ್ಷ ಮುಂಚಿತವಾಗಿನಮೂನೆ 6ರಲ್ಲಿ ಅರ್ಜಿ ಸಲ್ಲಿಸಲು ಈಗ ಅವಕಾಶವಿದೆ. ಚುನಾವಣಾ ಆಯೋಗ ನಿಗದಿಪಡಿಸಿದ ನಾಲ್ಕು ಅರ್ಹತಾ ದಿನಾಂಕಗಳಿಗೆ ಅನುಗುಣವಾಗಿ (ಜ.1, ಏ.1, ಜುಲೈ 1 ಹಾಗೂ ಅ.1) ದ ಮುಂಚಿತವಾಗಿ ಅವರನ್ನು ಮತದಾರರನ್ನು ಪಟ್ಟಿಗೆ ಸೇರಿಸಲಾಗುವುದು’ ಎಂದರು.

‘ಮತದಾರರ ಕರಡು ಪಟ್ಟಿಯಲ್ಲಿ ಹೆಸರು ಇರುವುದನ್ನು ಇದೇ 8ರೊಳಗೆ ಖಾತರಿಪಡಿಸಿಕೊಳ್ಳಬೇಕು. ಹೆಸರು ಬಿಟ್ಟುಹೋಗಿದ್ದರೆ, ತಿದ್ದುಪಡಿ, ಆಕ್ಷೇಪಣೆ ಇದ್ದಲ್ಲಿ ಮತಗಟ್ಟೆ ಅಧಿಕಾರಿಗಳ ಮೂಲಕ ಅರ್ಜಿ ಸಲ್ಲಿಸಬಹುದು. ವೆಬ್ ಪೋರ್ಟಲ್‌ (ceokarnataka.kar.nic.in) ಮೂಲಕವೂ ಪರಿಶೀಲಿಸಬಹುದು. ಮತದಾರರ ಜಿಲ್ಲಾ ಸಹಾಯವಾಣಿಗೆ (1950) ಕರೆ ಮಾಡಿ ಮಾಹಿತಿ ಪಡೆಯಬಹುದು’ ಎಂದರು.

‘ಮೃತಪಟ್ಟಿರುವವರ ಹಾಗೂ ವಿಳಾಸದಲ್ಲಿ ಬಹುಕಾಲದಿಂದ ವಾಸ್ತವ್ಯ ಇಲ್ಲದವರ ಹೆಸರನ್ನು ಮಾತ್ರ ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತದೆ. ಇದಕ್ಕೂ ಮುನ್ನ ಸ್ಥಳ ಪರಿಶೀಲನೆ ನಡೆಸಿ, ಅವರ ಮನೆಗೆ ನೋಟಿಸ್‌ ಅಂಟಿಸಿ ಪ್ರತಿಕ್ರಿಯೆ ಪಡೆಯಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಪರವೂರಿನಲ್ಲಿ ನೆಲೆಸಿದವರು ಚುನಾವಣೆ ಸಂದರ್ಭ ಊರಿಗೆ ಮರಳಿದಾಗ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ, ತಮ್ಮ ಹಕ್ಕಿನಿಂದ ವಂಚಿತರಾಗುವುದಿಲ್ಲವೇ ಎಂಬ ಪ್ರಶ್ನೆಗೆ, ‘ಮತದಾರರ ಪಟ್ಟಿ ಪರಿಷ್ಕರಣೆ ಸಲುವಾಗಿ ನೋಟಿಸ್‌ಗೆ ಸಂಬಂಧಪಟ್ಟವರಿಂದ ಪ್ರತಿಕ್ರಿಯೆ ಬಾರದಿದ್ದರೆ, ಅಂತಹವರ ಹೆಸರು ಕೈಬಿಡದಂತೆ ಸೂಚನೆ ನೀಡಿದ್ದೇನೆ’ ಎಂದರು.

ಅಡ್ಡಿಪಡಿಸಿದರೆ ಕ್ರಮ: ಮತದಾರರ ಪಟ್ಟಿ ಪರಿಷ್ಕರಣೆಗೆ ವಸತಿ ಸಮುಚ್ಚಯಗಳಿಗೆ ತೆರಳಿದಾಗ ಅಲ್ಲಿನ ನಿವಾಸಿಗಳು ಅಡ್ಡಿಪಡಿಸಿದ ಬಗ್ಗೆ ದೂರು ಬಂದಿದೆ. ಬಿಎಲ್‍ಒಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

–0–

ಕೋಟ್‌...

ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನ್ಯೂನತೆ ಆದ ಬಗ್ಗೆ ಯಾವುದೇ ದೂರು ಬಂದಿಲ್ಲ. ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರನ್ನಷ್ಟೇ ಬಿಎಲ್‌ಒಗಳನ್ನಾಗಿ ನೇಮಿಸಲಾಗಿದೆ
ರವಿಕುಮಾರ್‌ ಎಂ.ಆರ್‌, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT