ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಕರ್ಫ್ಯೂಗೆ ಐಎಂಎ ಸ್ವಾಗತ: ಕಾರ್ಮಿಕರ ಮುಖಂಡರ ವಿರೋಧ

ನಗರದಲ್ಲಿ ರಾತ್ರಿ ಕರ್ಫ್ಯೂ ಇಂದಿನಿಂದ; ತುರ್ತು ಸಂದರ್ಭಕ್ಕೆ ವಿನಾಯಿತಿ
Last Updated 9 ಏಪ್ರಿಲ್ 2021, 16:24 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯ ಸರ್ಕಾರ ಆದೇಶದಂತೆ ಶನಿವಾರದಿಂದ ರಾಜ್ಯದ ಎಂಟು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಯಾಗಲಿದ್ದು, ಇವುಗಳಲ್ಲಿ ಮಂಗಳೂರು ನಗರ ಕೂಡ ಒಂದಾಗಿದೆ.

ಸರ್ಕಾರದ ಆದೇಶದನ್ವಯ ನಗರ ಪ್ರದೇಶಗಳಲ್ಲಿ ಅನಿವಾರ್ಯ ಸಂದರ್ಭ ಹೊರತುಪಡಿಸಿ, ಜನರು ರಾತ್ರಿ 10ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ಅನಗತ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವಂತಿಲ್ಲ. ಇದಕ್ಕೆ ಸಾರ್ವಜನಿಕ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ರಾತ್ರಿ ಕರ್ಫ್ಯೂ ವಿಧಿಸುವ ಮೂಲಕ ಸರ್ಕಾರ ಸಾಮಾನ ಜನರಿಗೆ ಹೊರೆಯಾಗುವ ಸ್ಥಿತಿ ನಿರ್ಮಾಣ ಮಾಡಿದೆ. ಕೋವಿಡ್–19 ಮಾನದಂಡಗಳನ್ನು ಜನರಿಗಷ್ಟೇ ಅನ್ವಯ ಮಾಡಲಾಗುತ್ತಿದೆ. ಕಾರ್ಮಿಕನೊಬ್ಬ ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲಾಗುತ್ತದೆ. ಜನಪ್ರತಿನಿಧಿಗಳು, ರಾಜಕೀಯ ಕಾರ್ಯಕ್ರಮಗಳಿಗೆ ಈ ನಿಯಮ ಅನ್ವಯವಾಗುತ್ತಿಲ್ಲ.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರ ಧರ್ಮ ನೇಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ಆದರೆ, ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ’ ಎಂದು ಕಾರ್ಮಿಕ ಮುಖಂಡ ಸಂತೋಷ ಬಜಾಲ್ ಆಕ್ಷೇಪಿಸಿದರು.

‘ಹಲವರು ಉದ್ಯೋಗ ಕಳೆದುಕೊಂಡು, ನಿರುದ್ಯೋಗಿಗಳಾಗಿದ್ದಾರೆ. ಕೋವಿಡ್ ಲಾಕ್‌ಡೌನ್‌ನಿಂದ ಸಣ್ಣಪುಟ್ಟ ವ್ಯಾಪಾರಿಗಳು ನಿಧಾನಕ್ಕೆ ಚೇತರಿಸಿಕೊಳ್ಳುವ ವೇಳೆಗೆ ಮತ್ತೆ ರಾತ್ರಿ ಕರ್ಫ್ಯೂ ಹೇರುವ ಮೂಲಕ ಸಾಮಾನ್ಯ ಜನರು ಸಂಕಷ್ಟದಿಂದ ಮೇಲೇಳದ ಸ್ಥಿತಿಯನ್ನು ಸರ್ಕಾರ ಸೃಷ್ಟಿಸುತ್ತಿದೆ’ ಎಂದು ಅವರು ಆರೋಪಿಸಿದರು.

‘ಇದೇ 20ರವರೆಗೆ ಪ್ರತಿದಿನ ನೇಮ ನಿಗದಿಯಾಗಿದೆ. ಕಳೆದ ವರ್ಷ ಲಾಕ್‌ಡೌನ್ ಕಾರಣಕ್ಕೆ ವರ್ಷಾವಧಿ ಕೋಲ ನಡೆದಿಲ್ಲ. ಈ ವರ್ಷ ಮತ್ತೆ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಸರ್ಕಾರ ಏಕಾಏಕಿ ರಾತ್ರಿ ಕರ್ಫ್ಯೂ ವಿಧಿಸಿರುವುದರಿಂದ ಏನು ಮಾಡಬೇಕೆಂದು ತೋಚುತ್ತಿಲ್ಲ’ ಎಂದು ದೈವ ಪಾತ್ರಿ ಸುರೇಶ ಪರವ ಪ್ರತಿಕ್ರಿಯಿಸಿದರು.

‘ಉದ್ದಿಮೆಗಳನ್ನು ಮೂಲಭೂತ ಅಗತ್ಯಗಳಲ್ಲಿ ಒಂದಾಗಿ ಪರಿಗಣಿಸಿದರೆ, ರಾತ್ರಿ ಶಿಫ್ಟ್‌ನಲ್ಲಿ ಕಾರ್ಯನಿರ್ವಹಿಸುವ ಉದ್ದಿಮೆಗಳಿಗೆ ತೊಂದರೆಯಾಗದು. ರಾತ್ರಿ ಕರ್ಫ್ಯೂ ಇದ್ದರೂ ಕಾರ್ಮಿಕರಿಗೆ ಕೆಲಸಕ್ಕೆ ತೆರಳಲು ವಿನಾಯಿತಿ ಸಿಗಬೇಕು. ಯಾಕೆಂದರೆ, ಕೆಲವು ಉದ್ದಿಮೆಗಳಲ್ಲಿ ನಿರಂತರ ಕಾರ್ಯ ಚಟುವಟಿಕೆ ಅಗತ್ಯವಾಗಿರುತ್ತದೆ’ ಎಂದು ಕೆನರಾ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ಮಾಲೀಕ ಅಜಿತ್ ಕಾಮತ್ ಅಭಿಪ್ರಾಯಪಟ್ಟರು.

‘ಕಳೆದ ವರ್ಷ ಕೋವಿಡ್ ಕಾರಣಕ್ಕೆ ಧಾರ್ಮಿಕ ಕಾರ್ಯಕ್ರಮ ನಡೆದಿಲ್ಲ. ಈ ವರ್ಷವೂ ನಿಂತುಹೋದರೆ, ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಕೋಲ, ನೇಮ, ಯಕ್ಷಗಾನ, ನಾಗಾರಾಧನೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಲು ಅನುಮತಿ ನೀಡಬೇಕು’ ಎಂದು ಶಾಸಕ ವೇದವ್ಯಾಸ ಕಾಮತ್ ಒತ್ತಾಯಿಸಿದ್ದಾರೆ.

‘ಸರ್ಕಾರದಿಂದ ಉತ್ತಮ ಕ್ರಮ’

ಬೆಳಗಿನಿಂದ ಸಂಜೆಯವರೆಗೆ ಜನರು ತಮ್ಮ ಉದ್ಯೋಗದಲ್ಲಿ ತೊಡಗಿರುತ್ತಾರೆ. ಸಂಜೆಯ ವೇಳೆ ಅನವಶ್ಯಕ ತಿರುಗಾಟ, ಮೋಜು–ಮಸ್ತಿಗಾಗಿ ಜನರು ಗುಂಪು ಸೇರುವುದನ್ನು ನಿಯಂತ್ರಿಸಲು ರಾತ್ರಿ ಕರ್ಫ್ಯೂ ಪರಿಣಾಮಕಾರಿ. ರಾತ್ರಿ ಕರ್ಫ್ಯೂ ಜಾರಿಯಿಂದ ಹೆಚ್ಚು ಜನರು ಸೇರುವ ಧಾರ್ಮಿಕ ಕಾರ್ಯಗಳು, ಜಾತ್ರೆಗಳಿಗೆ ಕಡಿವಾಣ ಬೀಳುತ್ತದೆ’ ಎನ್ನುತ್ತಾರೆ ಐಎಂಎ ಘಟಕದ ಅಧ್ಯಕ್ಷ ಡಾ. ಎಂ.ಆರ್. ಕುಡ್ವ.

‘ಅಂಗಡಿ ಮುಂಗಟ್ಟುಗಳ ಬಾಗಿಲು ಹಾಕಲು ಸಮಯ ನಿಗದಿಯಾದರೆ, ಜನರು ಬೇಗ ಸಾಮಗ್ರಿಗಳನ್ನು ಖರೀದಿ, ಮನೆ ಸೇರುತ್ತಾರೆ. ಸಂಪೂರ್ಣ ಲಾಕ್‌ಡೌನ್ ಹೇರುವುದಕ್ಕಿಂತ ರಾತ್ರಿ ಕರ್ಫ್ಯೂ ಕ್ರಮ ಉತ್ತಮ. ಇದೇ ಮಾದರಿಯ ಕ್ರಮದಿಂದ ಮುಂಬೈ, ಪುಣೆಯಲ್ಲಿ ಕೋವಿಡ್ ಶೇ 50ರಷ್ಟು ನಿಯಂತ್ರಣಕ್ಕೆ ಬಂದಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ರಾತ್ರಿ ಕರ್ಫ್ಯೂ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏ.10 ರಿಂದ 20 ರವರೆಗೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5ಗಂಟೆಯವರೆಗೆ ಮುಂದಿನ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಸರ್ಕಾರ ಆದೇಶಿಸಿದ್ದು, ಅತ್ಯವಶ್ಯಕ ಸೇವೆಗಳಿಗೆ ಹೊರತುಪಡಿಸಿ ಉಳಿದೆಲ್ಲ ಸೇವೆ, ಸಂಚಾರಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.

ಮೇಲಿನ ಆದೇಶಗಳನ್ನು ಪಾಲಿಸದೇ ಇದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಯಾವುದಕ್ಕೆ ಅನುಮತಿ

ವೈದ್ಯಕೀಯ ಸೇವೆ, ತುರ್ತು ಚಟುವಟಿಕೆಗೆ ಅನುಮತಿ

ಅತ್ಯವಶ್ಯಕ ಸೇವೆಯ ಒದಗಿಸುವ ವಾಹನ, ಸರಕು ಸಾಗಣೆ ವಾಹನ

ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿ, ಅವರ ಸಹಾಯಕರಿಗೆ

ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವ ಕಾರ್ಖಾನೆಗಳು

ಹೋಮ್‌ಡೆಲಿವರಿ, ಇ-ಕಾಮರ್ಸ್ ಮತ್ತು ಖಾಲಿ ವಾಹನಗಳಗಳು

ಬಸ್ಸು, ರೈಲು ಹಾಗೂ ವಿಮಾನದಲ್ಲಿ ದೂರ ಪ್ರಯಾಣ

ಅಧಿಕೃತ ಟಿಕೆಟ್‌ಗಳ ಆಧಾರದ ಮೇಲೆ ಆಟೋ, ಕ್ಯಾಬ್‌ಗಳಲ್ಲಿ ಸಂಚಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT