ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಹೆದ್ದಾರಿ ಅಭಿವೃದ್ಧಿಯಿಂದ ಬಂದರು ಬೆಳವಣಿಗೆ'

ಎನ್‌ಎಂಪಿಟಿ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ವಿಶ್ವಾಸ
Last Updated 29 ಡಿಸೆಂಬರ್ 2020, 13:34 IST
ಅಕ್ಷರ ಗಾತ್ರ

ಮಂಗಳೂರು: ‘ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈಚೆಗೆ ಚಾಲನೆ ನೀಡಿದ ರಾಷ್ಟ್ರೀಯ ಹೆದ್ದಾರಿಯ ಮಹತ್ವಾಕಾಂಕ್ಷಿ 33 ಕಾಮಗಾರಿಗಳು ಪೂರ್ಣಗೊಂಡರೆ, ನವ ಮಂಗಳೂರು ಬಂದರು ಮಂಡಳಿ (ಎನ್‌ಎಂಪಿಟಿ) ಸರಕು ನಿರ್ವಹಣಾ ಸಾಮರ್ಥ್ಯವು 2030ರ ವೇಳೆಗೆ 77 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ತಲುಪಲಿದೆ’ ಎಂದು ಎನ್‌ಎಂಪಿಟಿ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ವಿಶ್ವಾಸ ವ್ಯಕ್ತಪಡಿಸಿದರು.

‘ಪ್ರಸ್ತುತ ವಿತ್ತೀಯ ವರ್ಷದಲ್ಲಿ ಎನ್‌ಎಂಪಿಟಿ 68 ಎಂಎಂಟಿ ಸರಕು ನಿರ್ವಹಣೆಯ ಗುರಿ ಹೊಂದಿತ್ತು. ಕೋವಿಡ್ ಕಾರಣ ಈ ತನಕ 25.53 ಎಂಎಂಟಿ ಮಾತ್ರ ಸಾಧ್ಯವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 27.23 ಎಂಎಂಟಿ ನಿರ್ವಹಿಸಲಾಗಿತ್ತು. ಕಳೆದ ವರ್ಷದ (2019–20) ಈ ಅವಧಿಯಲ್ಲಿ ಸರಕು ನಿರ್ವಹಣೆಯಿಂದ ₹376.38 ಕೋಟಿ ಗಳಿಸಿದ್ದರೆ, ಈ ವರ್ಷ ₹371.10 ಕೋಟಿ ಮಾತ್ರ ಸಾಧ್ಯವಾಗಿದೆ. 2025ರ ವೇಳೆಗೆ 45 ಎಂಎಂಟಿ ನಿರ್ವಹಿಸುವ ಗುರಿ ಇದೆ. ಕೇಂದ್ರ ಮಹತ್ವಾಕಾಂಕ್ಷಿ ಹೆದ್ದಾರಿ ಯೋಜನೆಗಳಿಂದ ಎನ್‌ಎಂಪಿಟಿಯ ಸಂಪರ್ಕ ಗುಣಮಟ್ಟ ಹಾಗೂ ಸಾಮರ್ಥ್ಯ ವೃದ್ಧಿಸಲಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೇಂದ್ರ ಸರ್ಕಾರದ ಘೋಷಿತ ಕಾಮಗಾರಿಗಳ ಪೈಕಿ ಶಿರಾಡಿ ಸುರಂಗ ಮಾರ್ಗವು ಎನ್‌ಎಂಪಿಟಿ ಆದಾಯ ವೃದ್ಧಿಗೆ ಬಹುಮುಖ್ಯವಾಗಿದೆ. ಮಂಗಳೂರು ಸಂಪರ್ಕಿಸುವ ಶಿರಾಡಿ, ಚಾರ್ಮಾಡಿ, ಸಂಪಾಜೆ ಹೆದ್ದಾರಿಗಳನ್ನು ಮಳೆಗಾಲದ ಸಂದರ್ಭದಲ್ಲಿ ಭೂಕುಸಿತ ಮತ್ತಿತರ ಕಾರಣಗಳಿಂದ ಬಳಸಲಾಗುವುದಿಲ್ಲ. ಆದರೆ, ಶಿರಾಡಿ ಸುರಂಗ ಮಾರ್ಗವು ಸರ್ವಋತು ರಸ್ತೆಯಾಗಲಿರುವ ಕಾರಣ, ಸರಕು ಸಾಗಾಟ ನಿರಂತರವಾಗಲಿದೆ’ ಎಂದು ವಿವರಿಸಿದರು.

‘ಗೋವಾ ಗಡಿಯಿಂದ ಕೇರಳ ಗಡಿಯವರೆಗೆ ₹3,443 ಕೋಟಿ ವೆಚ್ಚದ 278 ಕಿ.ಮೀ. ಚತುಷ್ಪಥ ರಸ್ತೆ ಕಾಮಗಾರಿ ಆಗುವುದರಿಂದ ಬೇಲೇಕೇರಿ, ಕಾರವಾರ ಬಂದರುಗಳೊಂದಿಗೆ ಸುಲಭ ಸಂಪರ್ಕ ಸಾಧ್ಯವಾಗಲಿದೆ’ ಎಂದರು.

‘₹9 ಕೋಟಿ ವೆಚ್ಚದ ಆರು ಪಥಗಳ ಕೂಳೂರು ಸೇತುವೆ ನಿರ್ಮಾಣವು ಎನ್‌ಎಂಪಿಟಿಗೆ ಪೂರಕವಾಗಿದೆ. ಮುಂದಿನ ಹಂತದಲ್ಲಿ ಕೆಐಒಸಿಎಲ್ ವೃತ್ತದಿಂದ ಬೈಕಂಪಾಡಿ ವೃತ್ತದವರೆಗೆ ಮೇಲ್ಸೇತುವೆ ನಿರ್ಮಾಣ ಮಾಡಿ, ಕೈಗಾರಿಕಾ ಮತ್ತು ಇತರ ವಾಹನಗಳಿಗೆ ಪ್ರತ್ಯೇಕ ಸಂಚಾರ ವ್ಯವಸ್ಥೆ ಮಾಡಿದರೆ, ವಾಹನ ದಟ್ಟಣೆಯೊಂದಿಗೆ ಅಪಘಾತಗಳನ್ನೂ ತಪ್ಪಿಸಬಹುದು’ ಎಂದು ಸಲಹೆ ನೀಡಿದರು.

ಸಿಐಐ ಅಧ್ಯಕ್ಷ ಪ್ರಕಾಶ್ ಕಲ್ಬಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT