ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ನಗರಕ್ಕೆ ನಯಾಪೈಸೆ ಅನುದಾನವಿಲ್ಲ: ಶಾಸಕ ಕಾಮತ್‌ ಆರೋಪ

Published 24 ಡಿಸೆಂಬರ್ 2023, 7:17 IST
Last Updated 24 ಡಿಸೆಂಬರ್ 2023, 7:17 IST
ಅಕ್ಷರ ಗಾತ್ರ

ಮಂಗಳೂರು: ‘ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ  ನಗರದ ಅಭಿವೃದ್ಧಿಗೆ ನಯಾ ಪೈಸೆ ಅನುದಾನವೂ ಬಿಡುಗಡೆಯಾಗಿಲ್ಲ. ಇದರಿಂದ ಅಭಿವೃದ್ಧಿಗೆ ಹಿನ್ನಡೆ ಆಗಿದೆ’ ಎಂದು ಶಾಸಕ ವೇದವ್ಯಾಸ ಕಾಮತ್‌ ಆರೋಪಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ₹ 175 ಕೋಟಿ ಮಂಜೂರಾಗಿತ್ತು. ಈ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ’ ಎಂದರು.  

‘ರಾಜ್ಯದಲ್ಲಿ ಕೊರೋನಾದ ಉಪತಳಿ ಜೆಎನ್.1 ಹರಡುತ್ತಿದೆ. ರೋಗಿಗಳ ಸಾವು ಸಂಭವಿಸುತ್ತಿದೆ. ನಮ್ಮ ಜಿಲ್ಲೆಯಲ್ಲೂ ರೋಗಿಯೊಬ್ಬರು ಮೃತ ಪಟ್ಟಿದ್ದಾರೆ.  ಆದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ‌ಆರೋಗ್ಯ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ಕೊಟ್ಟಿಲ್ಲ.ಯಾವುದೇ ನಿಯಂತ್ರಣ ಕ್ರಮಗಳನ್ನು ಕೈಗೊಂಡಿಲ್ಲ. ಪರಿಸ್ಥಿತಿ ಕೈಮೀರಿ ಹೋಗುವವರೆಗೆ ಕಾಯದೇ ಜಿಲ್ಲಾಡಳಿತ ಈಗಿಂದಲೇ ಜಾಗೃತವಾಗಬೇಕು’ ಎಂದರು. 

‘ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ನಗರದ ಅಭಿವೃದ್ಧಿಗೆ ₹ 25 ಕೋಟಿ ಕೊಡುತ್ತೇವೆ ಎಂದು ಘೋಷಿಸಿ ತಿಂಗಳು ಕಳೆದಿದೆ. ಈ ಬಗ್ಗೆ ಯಾವ ಆದೇಶವೂ ಆಗಿಲ್ಲ. ಅನುದಾನವಿಲ್ಲದೇ  ಒಳಚರಂಡಿ ಕಾಮಗಾರಿಗಳಲ್ಲೂ ಪ್ರಗತಿಯಾಗುತ್ತಿಲ್ಲ. ಸ್ಮಾರ್ಟ್ ಸಿಟಿಯ ರಿವರ್ ಫ್ರಂಟ್  ಕಾಮಗಾರಿ ಪೂರ್ಣಗೊಳಿಸುವ ಇಚ್ಛಾಶಕ್ತಿ ಸರ್ಕಾರಕ್ಕಿಲ್ಲ’ ಎಂದರು.

‘ಸ್ಟೇಟ್‌ಬ್ಯಾಂಕ್‌ ಬಸ್‌ನಿಲ್ದಾಣ ಸ್ಥಳಾಂತರ ಹಾಗೂ ಅಲ್ಲಿನ ಬೀದಿ ವ್ಯಾಪಾರಿಗಳಿಗೆ ವ್ಯವಸ್ಥೆ  ಕಲ್ಪಿಸಬೇಕೆಂದು ಕಾಂಗ್ರೆಸ್‌ ಮುಖಂಡ ಐವನ್‌ ಡಿಸೋಜಾ ಪ್ರತಿಭಟನೆ ನಡೆಸಿದ್ದು ಹಾಸ್ಯಾಸ್ಪದ. ಜನಸ್ಪಂದನ ಸಭೆಯಲ್ಲ ಅವರು ಈ ವಿಚಾರ ಪ್ರಸ್ತಾಪಿಸುವ ಔಚಿತ್ಯವಾದರೂ ಏನು. ಅವರ ಪಕ್ಷದ  ಸರ್ಕಾರವಿದ್ದರೂ ಕೆಲಸಗಳನ್ನು ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಎಂದಾದರೆ ಜಿಲ್ಲೆಯಲ್ಲಿ ಅವರ ಮಾತಿಗೆ ಇರುವ ಬೆಲೆಯಾದರೂ ಏನು’ ಎಂದು ಪ್ರಶ್ನಿಸಿದರು.

‘ಹಿಂದೂ ಕಾರ್ಯಕರ್ತರ ಮೇಲೆ ಸರ್ಕಾರ ಗಡಿಪಾರು ಅಸ್ತ್ರ ಪ್ರಯೋಗಿಸಿ ತಾಳ್ಮೆಯನ್ನು ಪರೀಕ್ಷಿಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ’ ಎಂದು ಎಚ್ಚರಿಕೆ ನೀಡಿದರು.

ಪಾಲಿಕೆ ಸದಸ್ಯ ದಿವಾಕರ್ ಪಾಂಡೇಶ್ವರ, ಪಕ್ಷದ ದಕ್ಷಿಣ ಮಂಡಲದ ಬಿಜೆಪಿ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರೂಪಾ ಡಿ. ಬಂಗೇರ, ಮುಖಂಡ ರವಿಶಂಕರ ಮಿಜಾರ್ ಹಾಗೂ ಸುರೇಂದ್ರ ಜೆ. ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT