ಮಂಗಳೂರು: ‘ರಾಜ್ಯಪಾಲರ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ನಾನು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಪ್ರಚಾರ ಮಾಡಲಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಶುಕ್ರವಾರ ಇಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆ ವೇಳೆ ಅವರು, ‘ಶ್ರೀಲಂಕಾ, ಉಗಾಂಡ ಹಾಗೂ ಬಾಂಗ್ಲಾದೇಶದಲ್ಲಿ ಏಕಚಕ್ರಾಧಿಪತ್ಯದ ವಿರುದ್ಧ ಜನರು ದಂಗೆ ಎದ್ದಿದ್ದರು ಎಂದು ಹೇಳಿದ್ದೆ. ಅದೇ ಮಾದರಿ ನಮ್ಮಲ್ಲೂ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿಲ್ಲ. ಬಿಜೆಪಿಗೆ ಬಾಂಗ್ಲಾದೇಶ ಎಂದರೆ ಮುಸ್ಲಿಂ ರಾಷ್ಟ್ರ; ಆದ್ದರಿಂದ ಆ ದೇಶದ ಹೆಸರು ಪ್ರಸ್ತಾಪ ಆಗಿದ್ದಕ್ಕೆ ಅವರು ಕೋಪಗೊಂಡಿದ್ದಾರೆ’ ಎಂದರು.
ಸಿ.ಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ಕ್ರಮ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಈಚೆಗೆ ಇಲ್ಲಿ ಪ್ರತಿಭಟಿಸಿದ್ದರು. ಆಗ ಐವನ್ ಡಿಸೋಜ, 'ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿ ಕೊಳ್ಳದಿದ್ದರೆ ಬಾಂಗ್ಲಾದಲ್ಲಾದ ಸ್ಥಿತಿ ರಾಜ್ಯಪಾಲರಿಗೂ ಆಗಲಿದೆ' ಎಂದಿದ್ದರು. ಬಿಜೆಪಿ ಇದನ್ನು ವಿರೋಧಿಸುತ್ತಿದೆ.
ಐವನ್ ಡಿಸೋಜ ಮನೆಗೆ ಬುಧವಾರ ರಾತ್ರಿ ಕೆಲವರು ಕಲ್ಲು ತೂರಿದ್ದರು. ಇದನ್ನು ಖಂಡಿಸಿ ಕಾಂಗ್ರೆಸ್ ಶುಕ್ರವಾರ ಐವನ್ ಮನೆಯಿಂದಬಿಜೆಪಿ ಕಚೇರಿವರೆಗೆ ಪ್ರತಿಭಟನೆ ಹಮ್ಮಿಕೊಂಡಿತ್ತು.