ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಭಾರತ ವೃತ್ತಕ್ಕೆ ಹೊಸ ರೂಪ

ಹಳೆಯ ಕಾಲದ ಬಾವಿ ಪತ್ತೆ: ಮೇಯರ್ ಪರಿಶೀಲನೆ
Last Updated 13 ಜೂನ್ 2021, 3:36 IST
ಅಕ್ಷರ ಗಾತ್ರ

ಮಂಗಳೂರು: ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದ ರಾಷ್ಟ್ರಕವಿ ಗೋವಿಂದ ಪೈ (ನವಭಾರತ) ವೃತ್ತವನ್ನು ಶುಕ್ರವಾರ ರಾತ್ರಿ ತೆರವುಗೊಳಿಸಿದ್ದು, ವೃತ್ತಕ್ಕೆ ಹೊಸ ರೂಪ ನೀಡಲು ನಿರ್ಧರಿಸಲಾಗಿದೆ.

ಹಿಂದೆ ಇಲ್ಲಿ ನವಭಾರತ ಪತ್ರಿಕೆಯ ಮುದ್ರಣಾಲಯ ಇದ್ದಿದ್ದರಿಂದ ಈ ವೃತ್ತಕ್ಕೆ ನವಭಾರತ ವೃತ್ತ ಎಂದು ಕರೆಯಲಾಗುತ್ತಿತ್ತು. ಬಳಿಕ ಹಿರಿಯ ಸಾಹಿತಿ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಹೆಸರನ್ನು ಇಡಲಾಗಿತ್ತು.

ಇದೀಗ ಸ್ಮಾರ್ಟ್‌ ಸಿಟಿ ಯೋಜನೆಯಡಿ ಈ ವೃತ್ತದ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ. ಬಸ್‌, ವಾಹನಗಳ ಸಂಚಾರಕ್ಕೆ ತೊಂದರೆ ಆಗದಂತೆ ಹಾಗೂ ಇನ್ನಷ್ಟು ಸುಂದರಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಮಾರ್ಟ್‌ ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ.

ಹಳೆಯ ಬಾವಿ ಪತ್ತೆ: ನಗರದ ರಾಷ್ಟ್ರಕವಿ ಗೋವಿಂದ ಪೈ ವೃತ್ತದಲ್ಲಿ (ನವಭಾರತ್ ವೃತ್ತ) ಶನಿವಾರ ಪುರಾತನ ಬಾವಿ ಪತ್ತೆಯಾಗಿದ್ದು, ಸುಮಾರು 100 ವರ್ಷಗಳಿಗೂ ಹಿಂದಿನ ಬಾವಿ ಇದೆಂದು ಹೇಳಲಾಗಿದೆ.

ಇತ್ತೀಚೆಗೆ ಹಂಪನಕಟ್ಟೆ ಬಳಿ ಪತ್ತೆಯಾಗಿದ್ದ ಬಾವಿಯ ಅವಧಿಯಲ್ಲೇ ಈ ಬಾವಿಯೂ ನಿರ್ಮಾಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ಬಾವಿಯಲ್ಲಿ ಸುಮಾರು 20 ಅಡಿ ಆಳದಲ್ಲಿ ನೀರು ಕಂಡು ಬರುತ್ತಿದ್ದು, ಬಾವಿಯ ನಿಖರವಾದ ಆಳವನ್ನು ಅಂದಾಜಿಸಲಾಗಿಲ್ಲ.

‘35 ವರ್ಷಗಳ ಹಿಂದೆ ನವಭಾರತ್ ವೃತ್ತವನ್ನು ಅಭಿವೃದ್ಧಿ ಪಡಿಸಲಾಗಿತ್ತು. ಆ ಬಳಿಕ ವೃತ್ತದ ಮೇಲ್ಭಾಗವನ್ನಷ್ಟೇ ಸೌಂದರ್ಯೀಕರಣ ಮಾಡಲಾಗಿತ್ತು. ಹಿಂದೆ ವೃತ್ತದ ಅಭಿವೃದ್ಧಿಯ ಸಂದರ್ಭದಲ್ಲಿ ಕಾಂಕ್ರೀಟ್‌ ಸ್ಲ್ಯಾಬ್ ಅಳವಡಿಸಿರುವ ಸಾಧ್ಯತೆ ಇದೆ. ಆದರೆ ಈ ಬಾವಿ ಎಷ್ಟು ಹಳೆಯದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಬಾವಿಯ ಅಸ್ತಿತ್ವವನ್ನು ಉಳಿಸಲು ಪ್ರಯತ್ನಿಸಲಾಗುವುದು’ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ.

ಹಿಂದೆಲ್ಲಾ ಕೈಯಿಂದ ಮಾಡಿದ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿತ್ತು. ಹೀಗಾಗಿ ಬಾಳ್ವಿಕೆ ಹೆಚ್ಚಾಗಿದ್ದು, ಕಾಂಕ್ರಿಟೀಕರಣದ ಸಂದರ್ಭದಲ್ಲಿ ಹುದುಗಿರುವ ಈ ಬಾವಿಗಳು ಅತ್ಯಂತ ಸುರಕ್ಷಿತವಾಗಿರುವುದು ಕಂಡು ಬರುತ್ತಿದೆ ಎಂದರು.

ಸದ್ಯ ವೃತ್ತದ ಅಭಿವೃದ್ಧಿಗೆ ಯೋಜನೆ ಸಿದ್ಧವಾಗಿದ್ದು, ಕಾಮಗಾರಿ ಆರಂಭವಾಗಿದೆ. ಮುಂದೆ ಈ ವೃತ್ತವನ್ನು ಮಂಗಳೂರಿನ ಸೇವಾಂಜಲಿ ಚಾರಿಟಬಲ್ ಟ್ರಸ್ಟ್‌ನವರು ನಿರ್ವಹಣೆ ಮಾಡುವ ಬಗ್ಗೆ ಈಗಾಗಲೇ ಪಾಲಿಕೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT