ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ಕ: ಭತ್ತದ ಬೆಳೆ ಪ್ರದೇಶ 10 ವರ್ಷದಲ್ಲಿ ಶೇ 30ರಷ್ಟು ಕುಸಿತ

ಭತ್ತ ಬೆಳೆಗೆ ಎಂಎನ್‌ಆರ್‌ಇಜಿ ಅಡಿ ಉತ್ತೇಜನ ನೀಡಲು ರೈತರ ಒತ್ತಾಯ
ಪ್ರವೀಣ್‌ ಕುಮಾರ್‌ ಪಿ.ವಿ.
Published 12 ಜನವರಿ 2024, 7:15 IST
Last Updated 12 ಜನವರಿ 2024, 7:15 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತದ ಕೃಷಿ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕುಸಿಯುತ್ತಿದೆ. ಹತ್ತು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಸರಿಸುಮಾರು 30 ಸಾವಿರ ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಅದೀಗ 9 ಸಾವಿರ ಹೆಕ್ಟೇರ್‌ ಆಜುಬಾಜಿಗೆ ಇಳಿದಿದ್ದು, ಹತ್ತೇ ವರ್ಷಗಳಲ್ಲಿ ಶೇ 30ರಷ್ಟು ಕಡಿಮೆ ಆಗಿದೆ.

ಭತ್ತದ ಕೃಷಿಗೆ ಹಾಕಿದ ಬಂಡವಾಳ ಹಿಂಪಡೆಯುವಷ್ಟೂ ಇಳುವರಿ ಬರುತ್ತಿಲ್ಲ. ಸಾಂಪ್ರದಾಯಿಕ ವಿಧಾನದಲ್ಲಿ ಭತ್ತ ಬೆಳೆದರೆ ಇಲ್ಲಿ  ಎಕರೆಗೆ ₹ 25 ಸಾವಿರದಷ್ಟು ವೆಚ್ಚವಾಗುತ್ತದೆ. ಅಷ್ಟು ವರಮಾನ ಈ ಬೆಳೆಯಿಂದ ಬರುವುದಿಲ್ಲ. ಯಾಂತ್ರೀಕೃತ ವಿಧಾನ ಅನುಸರಿಸಿದರೆ  ಭತ್ತ ಬೆಳೆಯಲು ಎಕರೆಗೆ ₹ 15ರಿಂದ ₹18 ಸಾವಿರ ವೆಚ್ಚವಾಗುತ್ತದೆ. ಆದರೆ, ಎಲ್ಲ ಕಡೆ ಯಾಂತ್ರೀಕೃತ ವಿಧಾನ ಅನುಸರಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಭತ್ತದ ಬೆಳೆಗೆ ಸರ್ಕಾರದಿಂದಲೂ ಯಾವುದೇ ಉತ್ತೇಜನ ಸಿಗುತ್ತಿಲ್ಲ. ಇನ್ನೊಂದೆಡೆ, ಅಡಿಕೆಯಂತಹ ವಾಣಿಜ್ಯ ಬೆಳೆ ಬೆಳೆಯುವವರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ಎಂಎನ್‌ಆರ್‌ಇಜಿ) ಯೋಜನೆಯಡಿ ಉತ್ತೇಜನ ನೀಡಲಾಗುತ್ತಿದೆ. ಇದರಿಂದಾಗಿ ಕೃಷಿಕರು ಭತ್ತದ ಬೆಳೆಯ ಬದಲು ಅನ್ಯ ಕೃಷಿಗಳತ್ತ ಮುಖಮಾಡುತ್ತಿದ್ದಾರೆ. ನೂರಾರು ವರ್ಷಗಳಿಂದ ಭತ್ತ ಬೆಳೆಯುತ್ತಿದ್ದ ಗದ್ದೆಗಳಲ್ಲಿ ಅಡಿಕೆ ಸಸಿಗಳನ್ನು ನೆಡುತ್ತಿದ್ದಾರೆ. ಸರ್ಕಾರದಿಂದ ನೆರವು ಸಿಕ್ಕರಷ್ಟೇ ಇಲ್ಲಿ ಭತ್ತ ಬೆಳೆಯಲು ಸಾಧ್ಯ. ಭತ್ತದ ಬೆಳೆಯುವವರಿಗೂ ಎಂಎನ್‌ಆರ್‌ಇಜಿ ಯೋಜನೆಯಡಿ ಉತ್ತೇಜನ ನೀಡಬೇಕು ಎಂದು ಭತ್ತ ಬೆಳೆಯುವ ಆಸಕ್ತಿ ಹೊಂದಿರುವ ಕೃಷಿಕರು ಆಗ್ರಹಿಸಿದ್ದಾರೆ.
‘ಭತ್ತದ ಬೆಳೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದರಿಂದ ಜಿಲ್ಲೆಯ ಅಂತರ್ಜಲ ಮಟ್ಟದ ಮೇಲೂ ಪರಿಣಾಮ ಬೀರುತ್ತಿದೆ. ಹಾಗಾಗಿ ಅಳಿದುಳಿದ ಭತ್ತದ ಗದ್ದೆಗಳಲ್ಲಿ ಮತ್ತೆ ಭತ್ತ ಬೆಳೆಯುವುದಕ್ಕೆ ಕ್ರಮ ಕೈಗೊಳ್ಳುವ ತುರ್ತು ಅಗತ್ಯ ಇದೆ. ಎಂಎನ್‌ಆರಇಜಿ ವ್ಯಾಪ್ತಿಗೆ  ಭತ್ತವನ್ನು ಸೇರಿಸಿದ್ರೆ ಈ ಬೆಳೆಗೆ ಜಿಲ್ಲೆಯಲ್ಲಿ ಪುನಃಶ್ಚೇತನ ಸಿಗಲಿದೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲಿನ ಕೃಷಿಕ ಪುರುಷೋತ್ತಮ ರಾವ್‌ ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಭತ್ತದ ಕೃಷಿಗೆ ಕಾರ್ಮಿಕರೇ ಸಿಗುತ್ತಿಲ್ಲ. ಈ ಕಾರ್ಮಿಕರಿಗೆ ಯಾವುದೇ ಜೀವನ ಭದ್ರತೆ ಇಲ್ಲ. ಅವರಿಗೂ ಗುರುತಿನ ಚೀಟಿ ನೀಡಿ, ಕನಿಷ್ಠ ವೇತನ, ಪಿಂಚಣಿ, ಇಎಸ್‌ಐನಂತಹ ಸವಲತ್ತು ಒದಗಿಸಿದರೆ ಭತ್ತದ ಕೃಷಿಗೆ ಕಾರ್ಮಿಕರ ಕೊರತೆ ನೀಗಲಿದೆ’ ಎನ್ನುತ್ತಾರೆ ಕುಪ್ಪೆಪದವಿನ ಕೃಷಿಕ ಮನೋಹರ ಶೆಟ್ಟಿ ನಡಿಕಂಬಳಗುತ್ತು. 

‘ಕೇರಳದಲ್ಲಿ ಭತ್ತದ ಕೃಷಿ ಕಾರ್ಮಿಕರಿಗೆ ಇಂತಹ ಸೌಕರ್ಯ ಇದೆ. ಇಂತಹ ದಿನ ಇಷ್ಟು ಕಾರ್ಮಿಕರು ಬೇಕು ಎಂದು ಗ್ರಾಮ ಪಂಚಾಯಿತಿಯವರಿಗೆ ತಿಳಿಸಿದರೆ ಅವರೇ ಕಾರ್ಮಿಕರನ್ನು ವ್ಯವಸ್ಥೆಗೊಳಿಸುತ್ತಾರೆ. ಅವರ ಅರ್ಧ ಸಂಬಳವನ್ನು ರೈತ, ಉಳಿದರ್ಧ ಸಂಬಳವನ್ನು ಸರ್ಕಾರವೇ ನೀಡುತ್ತದೆ. ಕೃಷಿ ಕಾರ್ಮಿಕರಿಗೆ ನರೇಗಾದಡಿ ಕೂಲಿ ನೀಡಿ ಕೇರಳದ ವ್ಯವಸ್ಥೆಯನ್ನು ನಮ್ಮಲ್ಲೂ ಜಾರಿಗೆ ತರಬಹುದು’ ಎಂದು ಅವರು ಸಲಹೆ ನೀಡಿದರು. 

‘ಎಂಎನ್‌ಆರ್‌ಇಜಿ ಯೋಜನೆಯಡಿ ಭತ್ತ ಬೆಳೆಯುವುದಕ್ಕೆ ಉತ್ತೇಜನ ನೀಡಲು ಸದ್ಯಕ್ಕಂತೂ ಅವಕಾಶ ಇಲ್ಲ. ಈ ಯೋಜನೆಯಡಿ ಕೈಗೆತ್ತಿಕೊಳ್ಳಬಹುದಾದ ಕಾಮಗಾರಿಗಳ ಪಟ್ಟಿಯಲ್ಲಿ ಮೊದಲು ಭತ್ತವನ್ನು ಸೇರ್ಪಡೆ ಮಾಡಬೇಕಾಗುತ್ತದೆ. ಅದರ ಕೂಲಿ ಹಂಚಿಕೆ ಬಗ್ಗೆ ವೈಜ್ಞಾನಿಕವಾಗಿ ವಿಶ್ಲೇಷಣೆ ನಡೆಸಿ ಈ ಕುರಿತು ಸರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬಹುದು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಆನಂದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯ ಸರ್ಕಾರ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ, ಅವರು ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳುವ ಕೆಲಸಗಳ ಪಟ್ಟಿಯಲ್ಲಿ ಭತ್ತವನ್ನು ಸೇರ್ಪಡೆಗೊಳಿಸಬಹುದು. ಈ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ, ಜಿಲ್ಲೆಯಲ್ಲಿ ಭತ್ತ ಬೆಳೆಯ ಸ್ಥಿತಿಗತಿಯ ವಿವರ ಪಡೆದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT