ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಧುನಿಕ ಭಗೀರಥ’ ಮಹಾಲಿಂಗ ನಾಯ್ಕ: ಕೃಷಿ ಕ್ಷೇತ್ರದ ಸಾಧನೆಗೆ ಒಲಿದು ಬಂತು ಪದ್ಮ

Last Updated 25 ಜನವರಿ 2022, 16:28 IST
ಅಕ್ಷರ ಗಾತ್ರ

ಮಂಗಳೂರು: ‘ಕರಾವಳಿ ಭಾಗದ ಭಗೀರಥ’ ಎಂದೇ ಗುರುತಿಸಿಕೊಂಡ ಬಂಟ್ವಾಳ ತಾಲ್ಲೂಕಿನ ಅಡ್ಯನಡ್ಕ ಸಮೀಪದ ಅಮೈ ಮಹಾಲಿಂಗ ನಾಯ್ಕ (76) ಅವರು ಕೃಷಿ ಕ್ಷೇತ್ರದ ಸಾಧನೆಗಾಗಿ 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

‌ಕರಾವಳಿ ಜಿಲ್ಲೆಗಳಲ್ಲಿ ನಿಧಾನವಾಗಿ ಕೃಷಿಯು ಹಿನ್ನೆಲೆಗೆ ಸರಿಯುತ್ತಿರುವ ಸಂದರ್ಭದಲ್ಲಿ ಕೃಷಿಯೇ ಬದುಕಿಗೆ ಮೂಲಾಧಾರವೆಂಬ ಕಲ್ಪನೆಯನ್ನು ಬಿತ್ತುತ್ತಿರುವ ಸಾಧಕ ಅಮೈ ಮಹಾಲಿಂಗ ನಾಯ್ಕ. ಕೃಷಿ ಕಾಯಕದ ಮೂಲಕ ಸ್ವಾವಲಂಬಿ ಜೀವನ ಸಾಧ್ಯ ಎಂಬುದನ್ನು ಆಧುನಿಕ ತಲೆಮಾರಿಗೆ ತೋರಿಸಿಕೊಟ್ಟವರು.

ಕೃಷಿಗೆ ನೀರು ಹಾಯಿಸಲು ಪಂಪ್ ಸೆಟ್‌ಗಳ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಹಿಂದಿನ ತಲೆಮಾರಿನವರು ಅವಲಂಬಿಸಿದ್ದ ಸುರಂಗ ನೀರಿನ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು, ಇದೇ ವ್ಯವಸ್ಥೆಯಲ್ಲಿ ವಿದ್ಯುತ್‌ ರಹಿತವಾಗಿ ಗುರುತ್ವಾಕರ್ಷಣೆಯ ನೆರವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಹನಿ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿರುವ ಅವರು, ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದ ‘ಆಧುನಿಕ ಭಗೀರಥ’ ಕೂಡ ಹೌದು.

ಅಡಿಕೆ, ತೆಂಗಿನ ಮರ ಏರುವುದರಲ್ಲಿ ಪರಿಣತಿ ಹೊಂದಿದ್ದ ಕೃಷಿ ಕೂಲಿ ಕಾರ್ಮಿಕರಾಗಿದ್ದ ಮಹಾಲಿಂಗ ನಾಯ್ಕ 40 ವರ್ಷಗಳ ಹಿಂದೆ ಕೃಷಿಕರ ತೋಟಗಳಲ್ಲಿ ದುಡಿಯುವಾಗ ಸ್ವಂತ ತೋಟ ಮಾಡುವ ಸ್ವಾವಲಂಬಿ ಜೀವನದ ಕನಸು ಕಂಡಿದ್ದರು. ಆದರೆ, ಅದಕ್ಕಾಗಿ ಅವರಲ್ಲಿ ಜಮೀನು ಇರಲಿಲ್ಲ. ಭೂಮಾಲೀಕ ಅಮೈ ಮಹಾಬಲ ಭಟ್ಟರ ತೋಟಕ್ಕೆ ದಿನಾ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಈ ಆದಾಯದಲ್ಲಿ ಅವರ ಸಂಸಾರದ ರಥ ಸಾಗುತ್ತಿತ್ತು. ಅದೊಂದು ದಿನ ಮಹಾಬಲ ಭಟ್ ಅವರು ಮಹಾಲಿಂಗ ನಾಯ್ಕರಿಗೆ ಎರಡು ಎಕರೆ ಜಮೀನು ನೀಡಲು ಒಪ್ಪಿಕೊಂಡರು. 1978ರಲ್ಲಿ ಮಹಾಬಲ ಭಟ್ಟರ ಬೆಂಬಲದಿಂದಾಗಿ ಎರಡು ಎಕರೆ ಗುಡ್ಡ ‘ದರ್ಖಾಸ್ತು’ ರೂಪದಲ್ಲಿ ಮಹಾಲಿಂಗ ನಾಯ್ಕರಿಗೆ ಪ್ರಾಪ್ತವಾಯಿತು.

ಒಂದು ಎಕರೆಯಲ್ಲಿ ಅಡಿಕೆ, ತೆಂಗು, ಬಾಳೆ, ಕಾಳುಮೆಣಸಿನ ಕೃಷಿ ಕೈಗೊಂಡಿದ್ದಾರೆ. ಇನ್ನೊಂದು ಎಕರೆಯಲ್ಲಿ ಕಾಡು ಬೆಳೆಸಿದ್ದಾರೆ. ಗೇರು ಕೃಷಿಯೂ ಇದೆ. ಮಣ್ಣಿನ ಟ್ಯಾಂಕಿಯಿಂದ ವಿದ್ಯುತ್‌ನ ಖರ್ಚಿಲ್ಲದೆ ಗುರುತ್ವ ಶಕ್ತಿಯೊಂದಿಗೆ ಅಡಿಕೆ, ತೆಂಗು ಮತ್ತು ಬಾಳೆ ಗಿಡಗಳಿಗೆ ನೀರು ಉಣಿಸುತ್ತಾರೆ. ಅವರ ತೋಟದಲ್ಲಿ 300 ಅಡಿಕೆ, 75 ತೆಂಗು, 200 ಬಾಳೆ ಗಿಡಗಳಿವೆ. ಹಟ್ಟಿಗೊಬ್ಬರ, ಕಾಂಪೋಸ್ಟ್ ಹೊರತು ಬೇರೆ ಯಾವುದೇ ಗೊಬ್ಬರದ ಬಗ್ಗೆ ಅವರಿಗೆ ಗೊತ್ತಿಲ್ಲ. ಜಮೀನಿನಲ್ಲಿ ಇಂಗು ಗುಂಡಿಗಳ ಮೂಲಕ ನೀರು ಸಂಗ್ರಹ ಮಾಡುತ್ತಾರೆ.

ಸುರಂಗ ಕೊರೆದು ನೀರು ತರಿಸುವ ಅವರ ಐದು ಪ್ರಯತ್ನಗಳೂ ವಿಫಲವಾದಾಗ ಧೃತಿಗೆಡದೆ ಆರನೇ ಸುರಂಗ ಕೊರೆದು ನೀರು ಗಳಿಸಿದ ಭಗೀರಥ ಅವರು. ಸುರಂಗದ ನೀರನ್ನು ಸಂಗ್ರಹಿಸಲು ಮಣ್ಣಿನ ಟ್ಯಾಂಕ್ ನಿರ್ಮಿಸಿ, ಗುಡ್ಡವನ್ನು ಸಮತಟ್ಟು ಮಾಡಿ ಕೃಷಿ ಮಾಡಿದ ಸಾಹಸಿ. ಅವರಿಗೆ ಪತ್ನಿ ಲಲಿತಾ ಮತ್ತು ಮೂವರು ಮಕ್ಕಳಿದ್ದಾರೆ.

ಶಾಲಾ– ಕಾಲೇಜು ಮೆಟ್ಟಿಲು ಹತ್ತದ ಛಲಗಾರ ಮಹಾಲಿಂಗ ನಾಯ್ಕರಿಗೆ ದುಡಿಮೆ ಎಲ್ಲವನ್ನೂ ನೀಡಿದೆ. ಅವರ ಏಕಾಂಗಿ ಸಾಧನೆಯ ವರದಿಯನ್ನು ದೂರದರ್ಶನ ವಾಹಿನಿಯು ತನ್ನ ‘ವಾಟರ್ ವಾರಿಯರ್’ ಸರಣಿಯಲ್ಲಿ ಬಿತ್ತರಿಸಿದೆ. ಮಹಾಲಿಂಗ ನಾಯ್ಕರ ಸಾಧನೆಯನ್ನು ಗುರುತಿಸಿ ಮಂಗಳೂರು ಪ್ರೆಸ್ ಕ್ಲಬ್‍ನಿಂದ ‘ವರ್ಷದ ಪ್ರಶಸ್ತಿ’ಯನ್ನು 2018ರಲ್ಲಿ ನೀಡಲಾಗಿದೆ. ಅಲ್ಲದೆ, ಮರಾಠಿ ಸೇವಾ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿನಿಂದ ಸನ್ಮಾನಿಸಲಾಗಿದೆ. ವಾರಾಣಾಸಿ ಪ್ರತಿಷ್ಠಾನದ ವತಿಯಿಂದ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಬಂದಿದೆ. ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ‘ಕೃಷಿ ಪಂಡಿತ ಪ್ರಶಸ್ತಿ’ ಲಭಿಸಿದೆ.

‘ಸಾರ್ಥಕ ಭಾವನೆ’

‘ಮಧ್ಯಾಹ್ನ 1 ಗಂಟೆಗೆ ನನ್ನ ಮೊಬೈಲ್‌ಗೆ ಕರೆ ಬಂತು. ಯಾರೊ ಹಿಂದಿ– ಇಂಗ್ಲಿಷ್‌ನಲ್ಲಿ ಏನೋ ಮಾತನಾಡಿದ್ರು. ನನಗೆ ಅರ್ಥ ಆಗಲಿಲ್ಲ. ಸ್ವಲ್ಪ ಹೊತ್ತು ಬಿಟ್ಟು ವಿಟ್ಲದಿಂದ ಕೃಷಿ ಅಧಿಕಾರಿಯೊಬ್ಬರು ಕರೆ ಮಾಡಿ ನನಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ ಎಂದು ಹೇಳಿದಾಗ ಭಾರೀ ಖುಷಿಯಾಯಿತು’ ಎಂದು ಅಮೈ ಮಹಾಲಿಂಗ ನಾಯ್ಕ ಅವರು ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡರು.

‘ನನಗೆ ಅಕ್ಷರ ಜ್ಞಾನವಿಲ್ಲ. ಅಲ್ಲಿಯೇ ನಾನು ಸೋತಿದ್ದು. ಆದರೂ ನನ್ನ ಪ್ರಯತ್ನವನ್ನು ಸರ್ಕಾರ ಗುರುತಿಸಿದ್ದು ಖುಷಿ ತಂದಿದೆ. ಹಲವು ಮಂದಿ ಕರೆ ಮಾಡಿ ಅಭಿನಂದನೆ ಹೇಳುತ್ತಿದ್ದಾರೆ. ಮನೆಯಲ್ಲಿ ಪತ್ನಿ, ಮಕ್ಕಳು ಸಂತಸಗೊಂಡಿದ್ದಾರೆ. ಕೃಷಿಯಲ್ಲಿ ನನ್ನ ಪ್ರಯತ್ನ ಸಾರ್ಥಕವಾಯಿತು ಎಂಬ ಭಾವನೆ ಮೂಡಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT