ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುತ್ತೂರು: ಪಡುಮಲೆ ಪ್ರವಾಸೋದ್ಯಮ ಯೋಜನೆಗೆ ಗ್ರಹಣ

ತುಳುನಾಡಿನ ಐತಿಹಾಸಿಕ ಹಿನ್ನೆಲೆಯ ಕೋಟಿ-ಚೆನ್ನಯರ ಜನ್ಮಭೂಮಿ
Published : 19 ಸೆಪ್ಟೆಂಬರ್ 2024, 5:38 IST
Last Updated : 19 ಸೆಪ್ಟೆಂಬರ್ 2024, 5:38 IST
ಫಾಲೋ ಮಾಡಿ
Comments

ಪುತ್ತೂರು: ತುಳುನಾಡಿನ ಐತಿಹಾಸಿಕ ಹಿನ್ನೆಲೆಯ, ಕೋಟಿ-ಚೆನ್ನಯರ ಜನ್ಮಭೂಮಿಯಾದ ಪಡುಮಲೆಯನ್ನು ಪ್ರವಾಸೋದ್ಯಮ ತಾಣವಾಗಿಸುವ ನಿಟ್ಟಿನಲ್ಲಿ 10 ವರ್ಷಗಳ  ಹಿಂದೆ ಮಂಜೂರಾಗಿದ್ದ ₹5 ಕೋಟಿ ಮೊತ್ತದ ಯೋಜನೆ ನೆನೆಗುದಿಗೆ ಬಿದ್ದಿದೆ.

ಯೋಜನೆ ಅನುಷ್ಠಾನದಲ್ಲಿ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ವಹಿಸಿದ ನಿರ್ಲಕ್ಷ್ಯದಿಂದ ಯೋಜನೆಗೆ ಮಂಜೂರಾಗಿದ್ದ ಮೊದಲ ಹಂತದ ಅನುದಾನ ಬ್ಯಾಂಕಿನಲ್ಲಿ ಉಳಿದುಕೊಂಡು ಬಡ್ಡಿಗಷ್ಟೇ ಸೀಮಿತವಾಗಿದೆ. ಮೊದಲ ಹಂತದ ₹1.50 ಕೋಟಿ ಅನುದಾನದಲ್ಲಿ ಕೊಳವೆ ಬಾವಿ ಮತ್ತು ನೀರಿನ ಟ್ಯಾಂಕ್‌ ನಿರ್ಮಿಸಿದ್ದು ಬಿಟ್ಟರೆ ಬೇರೆ ಯಾವುದೇ ಕಾಮಗಾರಿ ನಡೆದಿಲ್ಲ. ಆರಂಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಕೈಯಲ್ಲಿದ್ದ ಈ ಯೋಜನೆಯು ನಂತರ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಆಗಿದೆ.

ಕೋಟಿ-ಚೆನ್ನಯರ ಹಾಗೂ ಅವರ ತಾಯಿ ದೇಯಿ ಬೈದ್ಯೆತಿಯ ಜನ್ಮಭೂಮಿಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಪಡುಮಲೆಯನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು ಎನ್ನುವುದು ಈ  ಭಾಗದ ಜನರ ಬಹುವರ್ಷಗಳ ಬೇಡಿಕೆಯಾಗಿತ್ತು. ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆಗೆ ₹25 ಲಕ್ಷ ಅನುದಾನ ಮಂಜೂರು ಮಾಡಿದ್ದರು. ಬಳಿಕ ಅಧಿಕಾರಕ್ಕೆ ಬಂದಿದ್ದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಸಚಿವ ವಿನಯಕುಮಾರ್ ಸೊರಕೆ ಅವರ ಪ್ರಯತ್ನದಿಂದ, ₹5 ಕೋಟಿ ಅನುದಾನ ಮಂಜೂರು ಮಾಡಿತ್ತು.

ಶಂಖಪಾಲ ಬೆಟ್ಟದಲ್ಲಿ ಮೊದಲ ಹಂತದ ಕಾಮಗಾರಿ ಭಾಗವಾಗಿ ಸಭಾಭವನ ನಿರ್ಮಾಣ,  ಪ್ರಾಜ್ಯ ವಸ್ತು ಸಂಗ್ರಹಾಲಯ, ಗ್ರಂಥಾಲಯ, ಶೌಚಾಲಯ, ಬೆಟ್ಟಕ್ಕೆ ಏರಲು ಎರಡು ಬದಿಗಳಿಂದ ಮೆಟ್ಟಿಲು ಹಾಗೂ ಹಸಿರು ಪಾರ್ಕ್‌ ವ್ಯವಸ್ಥೆ, ನೀರಿನ ವ್ಯವಸ್ಥೆ, ಮಾಹಿತಿ ಫಲಕಗಳ ಅಳವಡಿಕೆ ಮತ್ತಿತರರ ಕಾಮಗಾರಿಗಳನ್ನು ಉದ್ದೇಶಿಸಲಾಗಿತ್ತು. ಇದಕ್ಕಾಗಿ ಅಂದಾಜು ₹2.75 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿತ್ತು. ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ಇದಕ್ಕಾಗಿ ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿತ್ತು. ಆದರೆ, ಕಳೆದೊಂದು ದಶಕದಲ್ಲಿ ಪ್ರವಾಸಿ ತಾಣ ಅಭಿವೃದ್ಧಿ ನಿಟ್ಟಿನಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ.

‘ಸ್ಥಳ ಪರಿಶೀಲಿಸಿ ಕ್ರಮ’

ಪಡುಮಲೆ ಪ್ರವಾಸೋದ್ಯಮ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಎರಡು ಬಾರಿ ಸಂಬಂಧಪಟ್ಟ ಇಲಾಖೆಗೆ ಪುತ್ತೂರು ಉಪ ವಿಭಾಗಾಧಿಕಾರಿ ಕಚೇರಿಯಿಂದ ಪತ್ರ ಬರೆಯಲಾಗಿದೆ. ಬಿಡುಗಡೆ ಮಾಡಲಾದ ಅನುದಾನದ ಬಳಕೆಯ ವಿಚಾರದಲ್ಲಿ ಇನ್ನೊಮ್ಮೆ ಪತ್ರ ಬರೆದು ಸೂಚಿಸಲಾಗುವುದು. ಸ್ಥಳ ಪರಿಶೀಲನೆ ಮಾಡಿ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಪುತ್ತೂರು ಉಪ ವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ ಪತ್ರಿಕೆಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT