ಶುಕ್ರವಾರ, ಡಿಸೆಂಬರ್ 2, 2022
19 °C
*ಗಡಿಗಳಲ್ಲಿ ಚೆಕ್‌ಪೋಸ್ಟ್ ಬಿಗಿ * ಕೆಎಸ್‌ಆರ್‌ಪಿ, ಸಿವಿಲ್ ಪೊಲೀಸ್ ನಿಯೋಜನೆ * ದಿನದ 24 ಗಂಟೆ ಕಾರ್ಯನಿರ್ವಹಣೆ

ದ.ಕ. ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್‌ ವ್ಯವಸ್ಥೆ: ಎಸ್ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಪೊಲೀಸ್ ಇಲಾಖೆಯ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಿಸಿ, ಜನಸ್ನೇಹಿ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸುಮಾರು 145 ಪೊಲೀಸ್ ಬೀಟ್‌ಗಳು ಜಾರಿಯಲ್ಲಿವೆ. ಒಂದೊಂದು ಬೀಟ್ ನಾಲ್ಕೈದು ಹಳ್ಳಿಗಳನ್ನು ಒಳಗೊಂಡಿದ್ದು, ಪ್ರತಿ ಬೀಟ್‌ಗೆ ಒಬ್ಬರು ಕಾನ್‌ಸ್ಟೆಬಲ್‌ ಅಥವಾ ಹೆಡ್‌ ಕಾನ್‌ಸ್ಟೆಬಲ್‌ ಅನ್ನು ನಿಯೋಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವೆಬ್‌ಸೈಟ್‌ನಲ್ಲಿ ಪ್ರತಿ ಬೀಟ್‌, ಸಂಬಂಧಪಟ್ಟ ಸಿಬ್ಬಂದಿ ಹೆಸರು, ಮೊಬೈಲ್‌ ಸಂಖ್ಯೆ ಸಹಿತ ಮಾಹಿತಿ ಲಭ್ಯವಿದೆ. ಜನರು ಸಮಸ್ಯೆ ಎದುರಾದಾಗ ನೇರವಾಗಿ ಪೋಲಿಸರನ್ನು ಸಂಪರ್ಕಿಸಿದರೆ, ತುರ್ತು ಸ್ಪಂದನೆ ಸಿಗುತ್ತದೆ..’

ಹೀಗೆಂದು ಜಿಲ್ಲೆಯ ಪೊಲೀಸ್ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ. ‌

ಬುಧವಾರ ಮಂಗಳೂರಿನ ಪ್ರಜಾವಾಣಿ ಕಚೇರಿಯಲ್ಲಿ ಆಯೋಜಿಸಿದ್ದ ‘ಪ್ರಜಾವಾಣಿ’ ಫೋನ್‌ –ಇನ್ ಕಾರ್ಯಕ್ರಮದಲ್ಲಿ ಓದುಗರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

‘ಇತ್ತೀಚೆಗೆ ನಡೆದ ಬೆಳ್ಳಾರೆಯ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ನಂತರ ಹಾಗೂ ಅಕ್ರಮ ಚಟುವಟಿಕೆ, ಗೋವುಗಳ ಕಳ್ಳ ಸಾಗಣೆ ನಿಯಂತ್ರಣದ ದೃಷ್ಟಿಯಿಂದ ಗಡಿಭಾಗದ ಚೆಕ್‌ಪೋಸ್ಟ್‌ಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಕರ್ನಾಟಕ– ಕೇರಳ ಗಡಿಯಲ್ಲಿ ಒಟ್ಟು ಒಂಬತ್ತು ಚೆಕ್‌ಪೋಸ್ಟ್‌ಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 19 ಚೆಕ್‌ಪೋಸ್ಟ್‌ಗಳು ಕಾಯಂ ಆಗಿ ಕಾರ್ಯನಿರ್ವಹಿಸುತ್ತಿದ್ದು, ಗಡಿಯಲ್ಲಿ ಸಿವಿಲ್ ಪೊಲೀಸ್ ಮತ್ತು ಎರಡು ಕೆಎಸ್‌ಆರ್‌ಪಿ ಪ್ಲಾಟೂನ್‌ಗಳು ಸರದಿಯಲ್ಲಿ ದಿನದ 24 ಗಂಟೆಯೂ ನಿಗಾವಹಿಸುತ್ತವೆ. ಜಿಲ್ಲೆಯ ಒಳಗೆ ಗುಂಡ್ಯ, ಚಾರ್ಮಾಡಿ, ಸಂಪಾಜೆಯಲ್ಲಿ ಕಾಯಂ ಚೆಕ್‌ಪೋಸ್ಟ್‌ಗಳು ಇವೆ’ ಎಂದರು.

112ಕ್ಕೆ ಕರೆ ಮಾಡಿ: ಕರ್ನಾಟಕ ಪೊಲೀಸ್ ಇಲಾಖೆಯು ಜನರ ಸಹಾಯಕ್ಕಾಗಿ 112 ಸಂಖ್ಯೆಯನ್ನು ಒದಗಿಸಿದೆ. ಈ ಸಂಖ್ಯೆಗೆ ಕರೆ ಮಾಡಿದರೆ, ನೇರವಾಗಿ ಇದು ಬೆಂಗಳೂರು ಕಚೇರಿಯಲ್ಲಿ ದಾಖಲಾಗಿ, ತಕ್ಷಣ ಅಲ್ಲಿಂದ ಜಿಲ್ಲಾ ಕಂಟ್ರೋಲ್‌ ರೂಮ್‌ಗೆ ಮಾಹಿತಿ ರವಾನೆಯಾಗುತ್ತದೆ. 15–20 ನಿಮಿಷಗಳಲ್ಲಿ ಸಮೀಪದಲ್ಲಿರುವ ನಮ್ಮ ತುರ್ತು ಸ್ಪಂದನ ವಾಹನವು (ಇಆರ್‌ಎಸ್‌ಎಸ್) ಸ್ಥಳಕ್ಕೆ ಬಂದು, ಪೊಲೀಸರು ಸಮಸ್ಯೆ ಆಲಿಸುತ್ತಾರೆ. ಜಿಲ್ಲೆಯಲ್ಲಿ ಇದಕ್ಕಾಗಿ 10 ವಾಹನಗಳನ್ನು ನಿಗದಿಪಡಿಸಲಾಗಿದೆ. ದಿನಕ್ಕೆ ಸರಾಸರಿ 11ರಷ್ಟು ಕರೆಗಳು ಬರುತ್ತವೆ. ಎರಡು ವರ್ಷಗಳಲ್ಲಿ ಈ ಸಂಖ್ಯೆಗೆ 7,687 ಕರೆಗಳು ಬಂದಿವೆ. ಪೊಲೀಸ್ ಸಹಾಯ ಅಗತ್ಯ ಇದ್ದರೆ ಜನರು ಈ ಸಂಖ್ಯೆಗೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದರು.

ಜಾಗೃತರಾಗಿರಿ: ಇತ್ತೀಚಿನ ದಿನಗಳಲ್ಲಿ ಸೈಬರ್‌ ಕ್ರೈಗಳು ಹೆಚ್ಚುತ್ತಿವೆ. ಒಟಿಪಿ, ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವ ಸಂದೇಶ ಅಥವಾ ಕರೆಗಳು ಬರುತ್ತವೆ. ಹಲವಾರು ಶಿಕ್ಷಣವಂತರು ಕೂಡ ಹಣ ಕಳೆದುಕೊಂಡಿದ್ದಾರೆ. ಒಂದೊಮ್ಮೆ ಇದಕ್ಕೆ ಮೋಸ ಹೋಗಿ ಹಣ ಕಳೆದುಕೊಂಡರೆ, ತಕ್ಷಣದಲ್ಲಿ 1930 ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದರೆ, ಬೇರೆ ಖಾತೆಗೆ ಹೋಗಿರುವ ಹಣವನ್ನು ಅಲ್ಲಿ ಬ್ಲಾಕ್‌ ಮಾಡಲು ಸಾಧ್ಯವಾಗುತ್ತದೆ. ದೇಶದಾದ್ಯಂತ ಈ ಸಂಖ್ಯೆಗೆ ಕರೆ ಮಾಡುವ ಸೌಲಭ್ಯವನ್ನು ಪೊಲೀಸ್ ಇಲಾಖೆ ಒದಗಿಸಿದೆ. ಸೈಬರ್‌ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ಮೂಲಕ ಕೂಡ ಆನ್‌ಲೈನ್‌ನಲ್ಲಿ ದೂರು ದಾಖಲಿಸಬಹುದು ಎಂದು ತಿಳಿಸಿದರು.

ಬೆರಳಚ್ಚು ದಾಖಲೆ: ರಾತ್ರಿ ವೇಳೆ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಕಂಡುಬಂದಲ್ಲಿ ಅಂತಹ ವ್ಯಕ್ತಿಗಳ ಬೆರಳಚ್ಚು ಪಡೆದು ಮಾಹಿತಿ ಸಂಗ್ರಹಿಸಲಾಗುತ್ತದೆ. ಬೆರಳಚ್ಚು ದಾಖಲಾತಿಗೆ ಪೊಲೀಸ್ ಇಲಾಖೆ ಆಂತರಿಕ ಆ್ಯಪ್‌ವೊಂದನ್ನು ರೂಪಿಸಿದೆ. ದೇಶದ ಯಾವುದೇ ಭಾಗದಲ್ಲಿ ಈ ವ್ಯಕ್ತಿ ಈ ಹಿಂದೆ ಅಪರಾಧ ಕೃತದಲ್ಲಿ ಭಾಗಿಯಾಗಿದ್ದರೆ, ಸ್ಥಳೀಯವಾಗಿ ಬೆರಳಚ್ಚು ಪಡೆದಾಗ, ಈ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ಆರೋಪಿಯ ಪತ್ತೆ ಕೂಡ ಸುಲಭವಾಗುತ್ತದೆ ಎಂದು ವಿವರ ನೀಡಿದರು.

‘E-FIR ಆ್ಯಪ್‌ನಲ್ಲಿ ದಾಖಲಿಸಿ’

ವಾಹನ ಕಳ್ಳತನವಾದರೆ ಆನ್‌ಲೈನ್‌ ಮೂಲಕ ದೂರು ನೀಡಲು ಪೊಲೀಸ್ ಇಲಾಖೆ E-FIR ಆ್ಯಪ್‌ ರೂಪಿಸಿದೆ. ದೂರು ದಾಖಲಿಸುವ ಕ್ರಮದ ಬಗ್ಗೆ ಇಲಾಖೆಯ ಯೂಟ್ಯೂಬ್‌ನಲ್ಲಿ ಸಮಗ್ರ ಮಾಹಿತಿ ಇದೆ. ಅದನ್ನು ನೋಡಿ, ದೂರು ದಾಖಲಿಸಬಹುದು. ದಾಖಲೆ ಕಳೆದು ಹೋದರೆ ಇ– ಲಾಸ್ಟ್‌ ಕೆಎಸ್‌ಪಿ ಆ್ಯಪ್ ಮೂಲಕ ದೂರು ದಾಖಲಿಸಬಹುದು ಎಂದು ಋಷಿಕೇಶ್ ಸೋನಾವಣೆ ತಿಳಿಸಿದರು.

ಅಕ್ರಮ ಮರಳು ಗಣಿಗಾರಿಕೆ, ಗಾಂಜಾ ಮಾರಾಟ, ಸಂಚಾರ ಸಮಸ್ಯೆ ಕುರಿತು ಜನರು ಎಸ್ಪಿ ಋಷಿಕೇಶ್ ಸೋನಾವಣೆ ಅವರ ಬಳಿ ಸಮಸ್ಯೆ ಹೇಳಿಕೊಂಡರು. ಜನರ ದೂರುಗಳನ್ನು ದಾಖಲಿಸಿಕೊಂಡ ಅವರು, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸಾರ್ವಜನಿಕರು ಕೇಳಿದ ಆಯ್ದ ಪ್ರಶ್ನೆಗಳು ಮತ್ತು ಎಸ್ಪಿ ನೀಡಿದ ಉತ್ತರ ಇಲ್ಲಿದೆ:

* ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಯಾವಾಗಲೂ ಆಟೊರಿಕ್ಷಾ ಚಾಲಕರು ಮತ್ತು ಬಸ್ ಚಾಲಕರ ನಡುವೆ ಗೊಂದಲ ಸೃಷ್ಟಿಯಾಗುತ್ತದೆ. ಹಲವು ವರ್ಷಗಳ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ.

– ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಬರುವ ಈ ಸಮಸ್ಯೆಯನ್ನು ಕಮಿಷನರ್‌ ಕಚೇರಿ ಗಮನಕ್ಕೆ ತರಲಾಗುವುದು

* ಗಾಂಜಾ ಸೇವನೆ, ಮಾರಾಟ ಪ್ರಕರಣಗಳ ಬಗ್ಗೆ ಇಲಾಖೆ ಕೈಗೊಂಡಿರುವ ಕ್ರಮಗಳು ಏನು?

– ಈ ವರ್ಷ ಒಟ್ಟು 35 ಗಾಂಜಾ ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 25 ಗಾಂಜಾ ಸೇವನೆ, ಉಳಿದವು ಪೆಡ್ಲರ್ಸ್‌ಗಳ ಮೇಲೆ ದಾಖಲಾದ ಪ್ರಕರಣಗಳಾಗಿವೆ. ಸಾರ್ವಜನಿಕರು ಮಾಹಿತಿ ನೀಡಿದಲ್ಲಿ, ಹೆಸರು ಗೌಪ್ಯವಾಗಿಟ್ಟು, ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.

* ಹಲವಾರು ಕಡೆಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಇಲಾಖೆ ಏನು ಕ್ರಮ ಕೈಗೊಂಡಿದೆ?

– ಸಾರ್ವಜನಿಕ ಸ್ಥಳಗಳಲ್ಲಿ ಸುಮಾರು 2,000 ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇವೆ. ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುವ ಮಾಹಿತಿ ನೀಡಿದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ.

* ಪೊಲೀಸ್ ಸಮವಸ್ತ್ರ ಧರಿಸಿ ನೃತ್ಯ ಮಾಡಿದ ವಿಡಿಯೊ ಗಮನಕ್ಕೆ ಬಂದಿದೆಯೇ?

– ನಮ್ಮ ಸಿಬ್ಬಂದಿ ಯಾರೂ ಸಮವಸ್ತ್ರ ಧರಿಸಿ, ನೃತ್ಯ ಮಾಡಿಲ್ಲ. ಚೆಕ್ ಮಾಡುತ್ತೇವೆ.

* ಈ ಭಾಗದಲ್ಲಿ ಯಕ್ಷಗಾನವು ಕಲೆಯನ್ನು ಮೀರಿದ ಆರಾಧನಾ ಕ್ರಮವಾಗಿದೆ. ಧ್ವನಿವರ್ಧಕ ನಿರ್ಬಂಧಕ್ಕೆ ಸಂಬಂಧಿಸಿ, ಯಕ್ಷಗಾನ ಪ್ರದರ್ಶನಕ್ಕೆ ವಿನಾಯಿತಿ ನೀಡಬೇಕು.

– ನಿಯಮಗಳನ್ನು ಪರಿಶೀಲಿಸಿ, ಅದರಂತೆ ನಡೆದುಕೊಳ್ಳಲಾಗುವುದು.

* ಮೊಗರು ಗ್ರಾಮದಲ್ಲಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ.

– ಪರಿಶೀಲಿಸಿ, ಕ್ರಮಕೈಗೊಳ್ಳಲಾಗುವುದು.

* ಚಾರ್ಮಾಡಿ ಚೆಕ್‌ಪೋಸ್ಟ್‌ ಅನ್ನು ಇನ್ನಷ್ಟು ಬಲಗೊಳಿಸಬೇಕು, ಪೆಟ್ರೋಲಿಂಗ್ ಹೆಚ್ಚಿಸಬೇಕು

– ಈ ಬಗ್ಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು.

* ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಕಟ್ಟಡ ಸೋರುತ್ತದೆ. ಟಾರ್ಪಾಲ್ ಹಾಕಿ ರಕ್ಷಣೆ ಒದಗಿಸಲಾಗಿದೆ.

– ಹೊಸ ಕಟ್ಟಡಕ್ಕೆ ಜಾಗ ನೋಡಿದ್ದು, ಟೆಂಡರ್ ಆಗಿದೆ. ಸದ್ಯ ಕಾಮಗಾರಿ ಆರಂಭವಾಗಲಿದೆ.

* ಹೆದ್ದಾರಿಯಲ್ಲಿ ರಸ್ತೆ ಬದಿಗಳಲ್ಲಿ ವಾಹನ ನಿಲುಗಡೆ ಹೆಚ್ಚಾಗಿರುವುದರಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.

– ಇಲಾಖೆ ಕ್ರಮವಹಿಸುವ ಜತೆಗೆ, ಜನರು ಸ್ವಯಂಶಿಸ್ತು ಅಳವಡಿಸಿಕೊಂಡಾಗ, ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತದೆ.

* ಬಂಟ್ವಾಳದಲ್ಲಿ ಅಕ್ರಮ ಮರಳು ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ. ಇಲಾಖೆ ಗಮನಕ್ಕೆ ತರಲಾಗಿದೆ.

– ನಿರ್ದಿಷ್ಟ ಸ್ಥಳದ ಬಗ್ಗೆ ನನಗೆ ಮಾಹಿತಿ ನೀಡಿ, ಕ್ರಮ ಕೈಗೊಳ್ಳುತ್ತೇವೆ.

* ಕುಕ್ಕೆ ಸುಬ್ರಹ್ಮಣ್ಯದ ನಗರ ಪ್ರದೇಶ, ಆದಿ ಸುಬ್ರಹ್ಮಣ್ಯ ಭಾಗದಲ್ಲಿ ಪಾರ್ಕಿಂಗ್ ದೊಡ್ಡ ಸಮಸ್ಯೆಯಾಗಿದೆ.

– ಸ್ಥಳೀಯ ಠಾಣೆಗೆ ಸೂಚನೆ ನೀಡಿ ಸಮಸ್ಯೆ ನಿವಾರಿಸಲಾಗುವುದು.

ಪ್ರಶ್ನೆ ಕೇಳಿದವರು: ಅಮೃತ್‌ ಪ್ರಭು, ಜಿ.ಕೆ.ಭಟ್, ಜಯಪ್ರಕಾಶ್ ಎಕ್ಕೂರು, ನಿರಂಜನ್ ಸುರತ್ಕಲ್, ಅಶೋಕ್ ಸುರತ್ಕಲ್, ಸತೀಶ್ ಉಜಿರೆ, ಅಬೂಬಕ್ಕರ್ ಕೊಲ್ನಾಡು, ಅಶೋಕ್ ಕೆಂಜಿಲ, ಅಶೋಕ್ ನೆಕ್ರಾಜೆ, ಹರ್ಷ ಪುತ್ತೂರು, ವಿಕ್ಟರ್ ಮೆಂಡೋನ್ಸಾ, ಹಮೀದ್ ವಿಟ್ಲ, ಅರುಣ್ ಮೇರಿಹಿಲ್, ಅಬೂಬಕ್ಕರ್ ವಿಟ್ಲ, ಅಬ್ದುಲ್ ಖಾದರ್, ಸಾದಿಕ್, ಮೊಹಮ್ಮದ್ ಉಳ್ಳಾಲ, ಅಬ್ದುಲ್ ಕರೀಂ, ಶಶಿಧರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು