ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಜಾತಿ, ಪಂಗಡದವರ ಸ್ವಯಂ ಉದ್ಯೋಗಕ್ಕೆ ‘ಉನ್ನತಿ’

‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ.ಎಸ್‌.ಬಿ. ಯೋಗೀಶ್‌
Last Updated 12 ಮಾರ್ಚ್ 2020, 9:50 IST
ಅಕ್ಷರ ಗಾತ್ರ

ಮಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸ್ವಯಂ ಉದ್ಯೋಗ ಆರಂಭಿಸುವ ಮೂಲಕ ಸ್ವಾವಲಂಬನೆ ಸಾಧಿಸಲು ಸರ್ಕಾರದಿಂದ ‘ಉನ್ನತಿ’ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ.ಎಸ್‌.ಬಿ. ಯೋಗೀಶ್‌ ತಿಳಿಸಿದರು.

ನಗರದ ‘ಪ್ರಜಾವಾಣಿ’ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಕರೆಗಳಿಗೆ ಉತ್ತರಿಸಿದ ಸಂದರ್ಭದಲ್ಲಿ ಈ ಮಾಹಿತಿ ನೀಡಿದರು.

ಉನ್ನತಿ ಯೋಜನೆಯಡಿ ವಾಹನಗಳನ್ನು ಖರೀದಿಸಿ ನೀಡಲಾಗುತ್ತದೆ. ಅದರ ಜತೆಗೆ ಓಲಾ, ಉಬರ್‌ನಂತಹ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡು, 3 ವರ್ಷಗಳವರೆಗೆ ಆ ವಾಹನದಿಂದ ತಿಂಗಳಿಗೆ ₹ 30 ಸಾವಿರ ಆದಾಯ ಬರುವಂತೆ ನೋಡಿಕೊಳ್ಳಲಾಗುತ್ತಿದೆ. ಇದಲ್ಲದೇ ಈ ಯೋಜನೆಯಡಿ ಸುಮಾರು 60 ಕಂಪನಿಗಳ ಜತೆಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು, ಈ ಕಂಪನಿಗಳ ಫ್ರಾಂಚೈಸಿಗಳನ್ನೂ ಒದಗಿಸಿಕೊಡಲಾಗುತ್ತಿದೆ ಎಂದು ಹೇಳಿದರು.

ಫ್ರಾಂಚೈಸಿ ಪಡೆಯುವ ಫಲಾನುಭವಿಗಳಿಗೆ ಇಲಾಖೆಯಿಂದಲೇ 6 ತಿಂಗಳ ತರಬೇತಿ ನೀಡಲಾಗುತ್ತದೆ. ನಂತರ ಐದು ವರ್ಷಗಳವರೆಗೆ ಸರ್ಕಾರದ ಗ್ಯಾರಂಟಿ ಮೇಲೆ ಸರಕುಗಳನ್ನು ಕಂಪನಿಗಳು ಒದಗಿಸುತ್ತವೆ. ಅದನ್ನು ಮಾರಾಟ ಮಾಡಿ, ಬರುವ ಲಾಭದಿಂದ ಫಲಾನುಭವಿಗಳು ಸ್ವಯಂ ಉದ್ಯೋಗವನ್ನು ಮುಂದುವರಿಸಬಹುದಾಗಿದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲಾಖೆಯ ಅಡಿಯಲ್ಲಿ 29 ವಸತಿ ನಿಲಯಗಳು, 1 ಆಶ್ರಮ ಶಾಲೆ ಹಾಗೂ 7 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲ ಹಾಸ್ಟೆಲ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.

102 ಹುದ್ದೆಗಳು ಖಾಲಿ: ದಕ್ಷಿಣ ಕನ್ನಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಟ್ಟು 224 ಹುದ್ದೆಗಳು ಮಂಜೂರಾಗಿದ್ದು, 102 ಹುದ್ದೆಗಳು ಖಾಲಿ ಉಳಿದಿವೆ. ಮಂಜೂರಾಗಿರುವ ಐದು ಸಹಾಯಕ ನಿರ್ದೇಶಕ ಹುದ್ದೆಗಳಲ್ಲಿ ಮೂರು ಖಾಲಿ ಉಳಿದಿವೆ. ಕಚೇರಿ ಅಧೀಕ್ಷಕರ ಐದು ಹುದ್ದೆಗಳಲ್ಲಿ ಎರಡು ಖಾಲಿ ಉಳಿದಿವೆ ಎಂದು ಡಾ.ಯೋಗೀಶ್‌ ತಿಳಿಸಿದರು.

ಜಿಲ್ಲೆಯಲ್ಲಿ 29 ವಾರ್ಡನ್‌ ಹುದ್ದೆಗಳು ಮಂಜೂರಾಗಿದ್ದು, 19 ಖಾಲಿ ಇವೆ. ಏಳು ಸಿಪಾಯಿ ಹುದ್ದೆಗಳಲ್ಲಿ, ಐದು ಖಾಲಿ ಇವೆ. ಜಿಲ್ಲೆಗೆ ಒಟ್ಟು 69 ಅಡುಗೆ ಸಿಬ್ಬಂದಿ ಮಂಜೂರಾತಿ ಇದ್ದು, 35 ಖಾಲಿ ಇವೆ. ಅಡುಗೆ ಸೇವಕರ ಒಟ್ಟು 40 ಹುದ್ದೆಗಳಲ್ಲಿ, 12 ಖಾಲಿ ಇವೆ. ರಾತ್ರಿ ಕಾವಲುಗಾರರ 25 ಹುದ್ದೆಗಳಲ್ಲಿ ಅದರಲ್ಲಿ 17 ಖಾಲಿ ಇವೆ ಎಂದು ಹೇಳಿದರು.

ಸದ್ಯಕ್ಕೆ ಖಾಲಿ ಹುದ್ದೆಗಳ ಸಮಸ್ಯೆ ಉಂಟಾಗಿಲ್ಲ. ಹೊರಗುತ್ತಿಗೆ ಮೂಲಕ ಅಗತ್ಯ ಸಿಬ್ಬಂದಿಯನ್ನು ತೆಗೆದುಕೊಂಡು ಕಾರ್ಯನಿರ್ವಹಣೆ ಮಾಡಲಾಗುತ್ತಿದೆ ಎಂದರು.

ದೌರ್ಜನ್ಯ ಪ್ರಕರಣ

2019 ರ ಜನವರಿಯಿಂದ 2020 ರ ಜನವರಿ 31ರವರೆಗೆ ಜಿಲ್ಲೆಯಲ್ಲಿ ಒಟ್ಟು 50 ಪರಿಶಿಷ್ಟ ಜಾತಿ, ಪಂಗಡದ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 50 ಪ್ರಕರಣಗಳಲ್ಲಿ ಮಂಗಳೂರಿನ ತಾಲ್ಲೂಕಿನಲ್ಲಿ 13, ಬಂಟ್ವಾಳದಲ್ಲಿ 12, ಪುತ್ತೂರಿನಲ್ಲಿ ಏಳು, ಬೆಳ್ತಂಗಡಿಯಲ್ಲಿ 12 ಮತ್ತು ಸುಳ್ಯ ತಾಲ್ಲೂಕಿನಲ್ಲಿ 6 ಪ್ರಕರಣಗಳು ದಾಖಲಾಗಿವೆ.

38 ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದ್ದು, ಐದು ಪ್ರಕರಣಗಳಲ್ಲಿ ಬಾಕಿ ಉಳಿದಿದೆ. ಐದು ಪ್ರಕರಣಗಳಲ್ಲಿ ಸಂತ್ರಸ್ತರ ಜಾತಿ ಪ್ರಮಾಣಪತ್ರ, ಆಧಾರ್ ಕಾರ್ಡ್ ಪ್ರತಿ ಮತ್ತು ಸಂತ್ರಸ್ತರ ಬ್ಯಾಂಕ್ ಪಾಸ್‌ಬುಕ್ ಪಡೆಯಲು ಕೋರಲಾಗಿದೆ. ನಾಲ್ಕು ಪ್ರಕರಣಗಳನ್ನು ಕೈಬಿಡಲಾಗಿದೆ. ಮೂರು ಪ್ರಕರಣಗಳಲ್ಲಿ ಬಿ ವರದಿಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.

‘ಸ್ಮಶಾನಕ್ಕೆ ಸರ್ಕಾರದಿಂದಲೇ ನಿವೇಶನ’

ಹಳ್ಳಿಗಳಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳಿಗೆ ಯಾವುದೇ ಸ್ಮಶಾನ ಇಲ್ಲದೇ ಇದ್ದರೆ, ಸರ್ಕಾರದಿಂದ ಭೂಮಿ ಪಡೆದು, ಸ್ಮಶಾನ ನಿರ್ಮಾಣ ಮಾಡಿಕೊಡಲಾಗುತ್ತದೆ. ಇದಕ್ಕೆ ಹಿಂದೂ ಸ್ಮಶಾನ ಎಂದು ಹೆಸರಿಡಲಾಗುತ್ತದೆ. ಒಂದು ವೇಳೆ ಸರ್ಕಾರಿ ಭೂಮಿ ಲಭ್ಯವಿಲ್ಲದಿದ್ದರೆ ಖಾಸಗಿ ಭೂಮಿಯನ್ನು ಖರೀದಿಸಿ, ಅದನ್ನು ಹಿಂದೂ ಸ್ಮಶಾನವನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಬಿ. ಯೋಗೀಶ್ ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಾತ್ರ ಸ್ಮಶಾನವನ್ನು ಕಾಯ್ದಿರಿಸುವುದರಿಂದ, ಮತ್ತಷ್ಟು ತಾರತಮ್ಯಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಎಸ್‌ಸಿ, ಎಸ್‌ಟಿ ನಿಧಿಯನ್ನು ಬಳಸಿಕೊಂಡು ಈ ಭೂಮಿಯನ್ನು ಖರೀದಿಸಿ, ಇದನ್ನು ಹಿಂದೂ ಸ್ಮಶಾನವಾಗಿ ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT