ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ

ಜನರಿಗೆ ಪೊಲೀಸ್‌ ಕಮಿಷನರ್ ಎನ್‌. ಶಶಿಕುಮಾರ್ ಮನವಿ
Last Updated 10 ಮೇ 2021, 3:53 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಜನರಿಗೆ ಮನವಿ ಮಾಡಿದರು.

ಸಾಮಾಜಿಕ ಜಾಲತಾಣದಲ್ಲಿ ಲೈವ್‌ ಕಾರ್ಯಕ್ರಮದ ಮೂಲಕ ಭಾನುವಾರ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಮಂಗಳೂರಿನಲ್ಲಿ ಜನರು ಸೂಕ್ಷ್ಮವಾಗಿದ್ದು, ಶೇ 99 ರಷ್ಟು ಜನರು ಮಾರ್ಗಸೂಚಿ ಅನುಸರಿಸುತ್ತಿದ್ದಾರೆ. ಜನರು ಮಾರ್ಗಸೂಚಿಗಳ ಉಲ್ಲಂಘನೆ ಮಾಡಿದಾಗ ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದೇವೆ’ ಎಂದರು.

‘ನಾವು ಸಾರ್ವಜನಿಕರ ಮೇಲೆ ಯಾವುದೇ ಒತ್ತಡವನ್ನು ಹೇರಿಲ್ಲ. ಕೆಲವೊಮ್ಮೆ ಸಾರ್ವಜನಿಕರ ಗುಂಪನ್ನು ಚದುರಿಸಲು ಅಥವಾ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಇಲಾಖೆಯು ಕನಿಷ್ಠ ಬಲವನ್ನು ಪ್ರಯೋಗ ಮಾಡಬೇಕಾಗುತ್ತದೆ’ ಎಂದರು.

ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಿಂದ ಬರುವವರು ತಮ್ಮ ಟಿಕೆಟ್‌ಗಳನ್ನು ತೋರಿಸಿ ಪ್ರಯಾಣಿಸಬಹುದು. ವಿನಾಃಕಾರಣ ನಿಯಮ ಉಲ್ಲಂಘನೆಯಾದ ಸಂದರ್ಭದಲ್ಲಿ, ನಾವು ಪ್ರಕರಣ ದಾಖಲಿಸಿ ವಾಹನಗಳನ್ನು ವಶಪಡಿಸಿಕೊಂಡಿದ್ದೇವೆ'' ಎಂದು ತಿಳಿಸಿದರು.

ಲಸಿಕೆ ಹಾಕಿಸಿಕೊಳ್ಳುವವರಿಗೆ ಅನುಕೂಲ ಮಾಡಿಕೊಡಿ ಎಂಬ ಸಲಹೆಗೆ ಪ್ರತಿಕ್ರಿಯಿಸಿದ ಅವರು, ‘ವೈದ್ಯಕೀಯ ಚಿಕಿತ್ಸೆ ಹಾಗೂ ಲಸಿಕೆ ಪಡೆಯಲು ಹಿರಿಯ ನಾಗರಿಕರಿಗೆ ಇಲಾಖೆಯ ವಾಹನಗಳನ್ನು ಬಳಸಿಕೊಂಡು ಪೊಲೀಸ್ ಸಿಬ್ಬಂದಿ ಸಹಾಯ ಮಾಡಿದ ಉದಾಹರಣೆಗಳಿವೆ’ ಎಂದು ಹೇಳಿದರು.

ಬೆಂಗಳೂರಿನಿಂದ ಮಂಗಳೂರಿಗೆ ಬರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಮಿಷನರ್, ‘ನಿಜವಾದ ಕಾರಣವಾಗಿದ್ದರೆ, ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಯಾವುದೇ ಕಾರಣವಿಲ್ಲದೇ ಪ್ರಯಾಣಿಸಿದರೆ ಪ್ರಕರಣ ದಾಖಲು ಮಾಡಿ ವಾಹನವನ್ನು ವಶಪಡಿಸಿಕೊಳ್ಳಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ಗೃಹರಕ್ಷಕರನ್ನು ನಿಯೋಜಿಸುವ ಕುರಿತು ಕೆಲ ಸರ್ವಜನಿಕರು ಸಲಹೆ ನೀಡಿದ್ದು, ‘ನಾವು ನಗರದಲ್ಲಿ 150 ಗೃಹರಕ್ಷಕರನ್ನು ನಿಯೋಜಿಸಿದ್ದೇವೆ. 75 ಹೆಚ್ಚುವರಿ ಗೃಹರಕ್ಷಕರನ್ನು ಒದಗಿಸುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದೇವೆ’ ಎಂದರು.

ಯಾವುದೇ ಸಂಸ್ಥೆ, ಪಕ್ಷಗಳು ತಮ್ಮದೇ ಆದ ಪಾಸ್‌ಗಳೊಂದಿಗೆ ಸಂಚರಿಸುವುದನ್ನು ನಿಷೇಧಿಸಲಾಗಿದೆ’ ಎಂದ ಅವರು, ‘ಮಾನವೀಯ ನೆಲೆಯಲ್ಲಿ ಅಶಕ್ತರಿಗೆ ಸಹಾಯ ಮಾಡಲು ಯಾವುದೇ ಅಡ್ಡಿ ಮಾಡುವುದಿಲ್ಲ’ ಎಂದರು.

‘20 ಹಾಸಿಗೆ ಆರೈಕೆ ಕೇಂದ್ರ’

ಕೋವಿಡ್ ಲಕ್ಷಣಗಳಿದ್ದು, ಪ್ರತ್ಯೇಕವಾಗಿ ಇರಲು ಬಯಸುವ ಪೊಲೀಸ್‌ ಸಿಬ್ಬಂದಿಗಾಗಿ 20 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರವನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಪೊಲೀಸ್ ಕಮಿಷನರ್‌ ಎನ್‌. ಶಶಿಕುಮಾರ್ ತಿಳಿಸಿದರು.

ಈಗಾಗಲೇ ಕಮಿಷನರೇಟ್‌ ವ್ಯಾಪ್ತಿಯ 48 ಪೊಲೀಸರಿಗೆ ಕೋವಿಡ್‌ ದೃಢವಾಗಿದೆ. ಆ ಪೈಕಿ ಏಳು ಜನರು ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಶೇ 95 ರಷ್ಟು ಪೊಲೀಸ್‌ ಸಿಬ್ಬಂದಿಗೆ ಮೊದಲ ಡೋಸ್‌ ಹಾಗೂ ಶೇ 80 ರಷ್ಟು ಸಿಬ್ಬಂದಿಗೆ ಎರಡನೇ ಡೋಸ್‌ ಲಸಿಕೆ ಹಾಕಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT