ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಶ್ವಾನ ‘ಸುಧಾ’ಗೆ ಗೌರವದ ವಿದಾಯ

Last Updated 24 ಜುಲೈ 2021, 13:19 IST
ಅಕ್ಷರ ಗಾತ್ರ

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ಹಾಗೂ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಹಲವು ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರಿಗೆ ಸಹಕಾರ ನೀಡಿದ್ದ ಪೊಲೀಸ್ ಶ್ವಾನ ‘ಸುಧಾ’ ಶನಿವಾರ ಬೆಳಿಗ್ಗೆ ಮೃತಪಟ್ಟಿದೆ. ನಗರದ ಪೊಲೀಸ್ ಕಮಿಷನರೇಟ್ ವತಿಯಿಂದ ಪೊಲೀಸ್ ಮೈದಾನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸುಧಾಗೆ ಅಂತಿಮ ನಮನ ಸಲ್ಲಿಸಲಾಯಿತು.

ಬಿಳಿ ವಸ್ತ್ರದಲ್ಲಿ ಶ್ವಾನ ಸುಧಾಳ ಮೃತದೇಹವನ್ನು ಸುತ್ತಿ, ಹೂವಿನಿಂದ ಅಲಂಕರಿಸಿ, ಪೊಲೀಸ್ ವಾದ್ಯ, ತೋಪು ಹಾರಿಸುವ ಮೂಲಕ ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಸೇರಿದಂತೆ ಹಿರಿಯ ಅಧಿಕಾರಿಗಳು, ಸಿಬ್ಬಂದಿಯ ಸಮ್ಮುಖದಲ್ಲಿ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ಮೃತದೇಹವನ್ನು ಪೊಲೀಸ್ ಮೈದಾನದ ಅಂಚಿನಲ್ಲಿ ಹೂಳುವ ಮೂಲಕ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು.

ಡಾಬರ್‌ಮೆನ್ ಪಿಂಚರ್ ಜಾತಿಗೆ ಸೇರಿದ ಸುಧಾ, 2011ರ ಮಾರ್ಚ್ 15ರಂದು ಜನಿಸಿತ್ತು. ಅಪರಾಧ ಪತ್ತೆ ಶ್ವಾನವಾಗಿ 2012 ರ ಏಪ್ರಿಲ್ 2ರಿಂದ ಪೊಲೀಸ್ ಇಲಾಖೆಯನ್ನು ಸೇರಿತ್ತು. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ವಾನಗಳಲ್ಲಿ ಅತ್ಯಂತ ಸೂಕ್ಷ್ಮಮತಿ ಹಾಗೂ ಚುರುಕಿನ ಶ್ವಾನವಾಗಿ ಗುರುತಿಸಿಕೊಂಡಿದ್ದ ಸುಧಾ ಕೆಲ ಸಮಯದ ಹಿಂದೆ ಕ್ಯಾನ್ಸರ್‌ಗೆ ಒಳಗಾಗಿ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗಿತ್ತು.

ಭಾವುಕರಾದ ಸಂದೀಪ್‌:‘3 ತಿಂಗಳ ಶ್ವಾನವನ್ನು ತಂದು, ಸಾಕಿ ಸಲುಹಿ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ಸಂದೀಪ್, ಭಾವುಕರಾಗಿದ್ದರು. ಕಣ್ಣೀರಿಡುತ್ತಲೇ ಸಂದೀಪ್ ಅವರು ಸುಧಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ಸಂದೀಪ್‌ ಅವರಿಗೆ ಸುಧಾ ಜತೆಗಿನ ನಂಟು ಅದೆಷ್ಟು ಗಾಢವಾಗಿತ್ತೆಂದರೆ ಕೆಲ ಸಮಯದ ಹಿಂದೆ ತಾವು ಖರೀದಿಸಿದ್ದ ಹೊಸ ಬೈಕ್‌ಗೂ ಅವರು ‘ಸುಧಾ’ಳ ಹೆಸರನ್ನಿಟ್ಟಿದ್ದಾರೆ.

‘ಮೂರು ತಿಂಗಳ ಮರಿಯಿಂದ ನಾನು ಆಕೆಯನ್ನು ಸಾಕಿದ್ದೇನೆ. ಅತ್ಯಂತ ಚುರುಕಿನ ಶ್ವಾನ. ನಾನು ಅರ್ಧ ಗಂಟೆ ಎಲ್ಲಿಯಾದರೂ ಹೋದರೂ, ನಾನೆಲ್ಲಿ ಕುಳ್ಳಿರಿಸಿ ಹೋಗುತ್ತೇನೋ ಅಲ್ಲಿಯೇ ನನಗಾಗಿ ಕಾಯುತ್ತಿದ್ದಳು. ಅತ್ಯಂತ ಸೂಕ್ಷ್ಮಮತಿಯಾಗಿದ್ದ ಸುಧಾ ಹಲವಾರು ಅಪರಾಧ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿದ್ದು, ಪ್ರಕರಣ ಭೇದಿಸಲು ಸಹಕರಿಸಿದ್ದಾಳೆ’ ಎಂದು ಸಂದೀಪ್ ಪ್ರತಿಕ್ರಿಯಿಸಿದರು.

‘ಐದು ತಿಂಗಳ ಹಿಮದೆ ಎದೆಭಾಗದಲ್ಲಿ ಗಡ್ಡೆ ಕಾಣಿಸಿಕೊಂಡಿದ್ದು, ಚಿಕಿತ್ಸೆ ಒದಗಿಸಲಾಗಿತ್ತು. ಆ ಬಳಿಕ ಚೆನ್ನಾಗಿಯೇ ಇದ್ದ ಸುಧಾ ಆರೋಗ್ಯ ಒಂದು ವಾರದಿಂದ ಹದಗೆಟ್ಟಿತ್ತು. ಎರಡು ದಿನಗಳಿಂದ ಆಹಾರವನ್ನೂ ತ್ಯಜಿಸಿದ್ದು, ಶನಿವಾರ ಬೆಳಿಗ್ಗೆ 10.20ರ ವೇಳೆಗೆ ಮೃತಪಟ್ಟಿದೆ. ಎರಡು ಕೊಲೆ ಪ್ರಕರಣ ಸೇರಿದಂತೆ ಜಿಲ್ಲೆಯಾದ್ಯಂತ ಹಲವಾರು ಪ್ರಕರಣಗಳನ್ನು ಭೇದಿಸುವಲ್ಲಿ ಸುಧಾ ಪೊಲೀಸರಿಗೆ ಸಹಕಾರ ನೀಡಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT