ಬುಧವಾರ, ಜನವರಿ 19, 2022
27 °C

‘ಕಷ್ಟದಿಂದಲ್ಲ, ಇಷ್ಟಪಟ್ಟು ಗುರಿ ಸಾಧಿಸಿ: ಡಾ.ರಾಜೇಂದ್ರ ಕೆ.ವಿ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ನಾಗರಿಕ ಸೇವಾ ಪರೀಕ್ಷೆ ಕಬ್ಬಿಣದ ಕಡಲೆಯಲ್ಲ. ಶಿಸ್ತು, ಶ್ರದ್ಧೆ, ಸಮರ್ಪಣಾ ಮನೋಭಾವ ಇದ್ದರೆ ಯಾವುದೇ ಸಾಧನೆ ಮಾಡಬಹುದು. ಕಷ್ಟಪಟ್ಟು ಗುರಿಯನ್ನು ಬೆನ್ನು ಹತ್ತುವುದಕ್ಕಿಂತ ಇಷ್ಟಪಟ್ಟು ತಲುಪುವುದು ಮುಖ್ಯ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

‘ಒಬ್ಬ ಐಎಎಸ್‌ ಅಧಿಕಾರಿ ತೆಗೆದುಕೊಳ್ಳುವ ನಿರ್ಧಾರ ಸಾವಿರಾರು ಜನರ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಇದು ಆ ಹುದ್ದೆಗೆ ಇರುವ ತೂಕ ಮತ್ತು ಘನತೆ. ಹೀಗಾಗಿ, ಈ ಕ್ಷೇತ್ರವನ್ನು ಆಯ್ಕೆ ಮಾಡುವವರಿಗೆ ಸಾಮಾಜಿಕ ಕಳಕಳಿ, ನಾಗರಿಕ ಪ್ರಜ್ಞೆ ಅತಿ ಅಗತ್ಯ’ ಎಂದರು.

‘ನಾಗರಿಕ ಸೇವೆ ಪರೀಕ್ಷೆ ಎದುರಿಸುವವರಿಗೆ ತಮ್ಮ ಸಾಮರ್ಥ್ಯದಲ್ಲಿ ನಂಬಿಕೆ ಇರಬೇಕು. ಕಾಲೇಜು ಹಂತದಲ್ಲಿಯೇ ಸುಂದರ ಭವಿಷ್ಯದ ಕನಸು ಕಾಣಬೇಕು. ಕನಸು ಯಾವಾಗಲೂ ದೊಡ್ಡದಾಗಿರಬೇಕು. ಅದನ್ನು ನನಸು ಮಾಡಲು ನಿರಂತರವಾಗಿ ಪ್ರಯತ್ನಿಸಬೇಕು. ದೈನಂದಿನ ಚಟುವಟಿಕೆಗಳಲ್ಲಿ ಮೂಡುವ ಕುತೂಹಲಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಇದೇ ಯಶಸ್ಸಿನ ಪ್ರಮುಖ ಸೂತ್ರ’ ಎಂದು ಅಭಿಪ್ರಾಯಪಟ್ಟರು.

‘ದಕ್ಷಿಣ ಕನ್ನಡ ಜಿಲ್ಲೆಯವರು ವೈದ್ಯಕೀಯ, ಶಿಕ್ಷಣ, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಮುಂಚೂಣಿಯಲ್ಲಿದ್ದಾರೆ. ನಾಗರಿಕ ಸೇವೆಯಲ್ಲಿ ಜಿಲ್ಲೆಯವರ ಸಾಧನೆ ತುಸು ಕಡಿಮೆ. ಮಾರ್ಗದರ್ಶನದ ಕೊರತೆಯೂ ಅದಕ್ಕೆ ಕಾರಣ ಇರಬಹುದು. ಇಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಸಮಾಜದಲ್ಲಿ ಎಲ್ಲ ವರ್ಗದ ಜನರೂ ಇದ್ದರೆ ಆ ಪ್ರದೇಶ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ’ ಎಂದರು.

‘ಐಎಎಸ್‌’ ಹಾದಿಯ ಮೆಲುಕು: ತಾವು ಸಾಗಿಬಂದ ‘ಐಎಎಸ್‌’ ಹಾದಿಯನ್ನು ‌ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ವಿದ್ಯಾರ್ಥಿಗಳ ಮುಂದೆ ಬಿಚ್ಚಿಟ್ಟರು.

‘ದಾವಣಗೆರೆಯಲ್ಲಿ ಮೆಡಿಕಲ್‌ ಓದಿದ್ದ ನಾನು ಇಷ್ಟಪಟ್ಟು ನಾಗರಿಕ ಸೇವೆ ಪರೀಕ್ಷೆ ಎದುರಿಸಿದೆ. 2013ರಲ್ಲಿ 32ನೇ ರ‍್ಯಾಂಕ್‌ನಲ್ಲಿ ತೇರ್ಗಡೆ ಹೊಂದಿದೆ. ಆಗ ನನಗೆ 27 ವರ್ಷ ವಯಸ್ಸು. ‘ತುಂಬಾ ಕಷ್ಟ ಪಟ್ಟು ಓದಿದವ ನಾನೇ’ ಎಂಬ ಭಾವನೆ ಇತ್ತು. ಆದರೆ, ಉತ್ತರಾಖಂಡದ ಮಸ್ಸೂರಿಗೆ ಪ್ರೊಬೇಷನರಿ ತರಬೇತಿಗೆ ಹೋದಾಗ, ನನಗಿಂತಲೂ ಕಷ್ಟಪಟ್ಟು ಓದಿ ಬಂದವರು ಸಾಕಷ್ಟು ಮಂದಿ ಇರುವುದು ಇಳಿಯಿತು. ತರಬೇತಿಗೆ ಬಂದಿದ್ದ 180 ಮಂದಿಯಲ್ಲಿ ಶೇ 70ರಷ್ಟು ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದರು. ಅದರಲ್ಲೂ 21ರಿಂದ 23ರ ವಯೋಮಾನದವರು ಸಾಕಷ್ಟು ಮಂದಿ ಇದ್ದರು. ಇಲ್ಲಿ ಭಾಷೆ, ಧರ್ಮ, ಧನಿಕ– ಬಡವ ಎಂಬ ಭೇದಭಾವಗಳಿಲ್ಲ. ಶಿಸ್ತುಬದ್ಧ ಕಲಿಕೆಗೆ ಖಂಡಿತ ಪ್ರತಿಫಲ ಸಿಗುತ್ತದೆ’ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು