ಗುರುವಾರ , ಜೂನ್ 24, 2021
27 °C
ಖಾಸಗಿ, ಸರ್ಕಾರಿ ಕಂಪನಿಗಳಿಗೆ ಸಂಸದ ನಳಿನ್‌ಕುಮಾರ್ ಸೂಚನೆ

ಕೋವಿಡ್ ನಿಯಂತ್ರಣಕ್ಕೆ ಕೈಜೋಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್–19 ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಆಮ್ಲಜನಕ ಘಟಕಗಳ ನಿರ್ಮಾಣ, ಆಮ್ಲಜನಕದ ಸಿಲಿಂಡರ್‌ ಪೂರೈಕೆ ಸೇರಿದಂತೆ ಅಗತ್ಯ ವೈದ್ಯಕೀಯ ನೆರವು ನೀಡುವಂತೆ ಸಂಸದ ನಳಿನ್‌ಕುಮಾರ್ ಕಟೀಲ್‌, ಜಿಲ್ಲೆಯಲ್ಲಿರುವ ಸರ್ಕಾರಿ ಸಹಭಾಗಿತದ್ವದ ಕಂಪನಿಗಳು ಹಾಗೂ ಖಾಸಗಿ ಕಂಪನಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆ ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಹಿಂದೆಂದೂ ಕಾಣದಂತಹ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗತೊಡಗಿದ್ದು, ಸೋಂಕಿತರನ್ನು ರಕ್ಷಿಸಿಕೊಳ್ಳುವುದು ಸರ್ಕಾರ ಮತ್ತು ವೈದ್ಯರಿಗೆ ದೊಡ್ಡ ಸವಾಲಾಗಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರಿ ಸಹಭಾಗಿತ್ವದ ಕಂಪನಿಗಳು ಹಾಗೂ ಖಾಸಗಿ ಕಂಪನಿಗಳು ಸರ್ಕಾರಕ್ಕೆ ನೆರವಿನ ಹಸ್ತ ಚಾಚಬೇಕು’ ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿದ್ದು, ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಅಗತ್ಯವಿರುವ ಆಮ್ಲಜನಕಯುಕ್ತ ಹಾಸಿಗೆಗಳನ್ನು ಹೆಚ್ಚು ಕಾಯ್ದಿರಿಸಬೇಕು. ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಮುಂದಾಗಬೆಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಹೆಚ್ಚಾದಲ್ಲಿ, ಅಗತ್ಯ ಕಂಡುಬಂದರೆ ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ನಿಲಯಗಳು, ಸರ್ಕಾರಿ ವಿದ್ಯಾರ್ಥಿ ನಿಲಯ ಹಾಗೂ ಶಾಲೆಗಳಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭಿಸಲು ಅಗತ್ಯ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.

ನೆರವು ನೀಡುವ ಸಂಸ್ಥೆಗಳು ವೈದ್ಯಕೀಯ ಮೂಲಸೌಕರ್ಯವನ್ನು ಒದಗಿಸುವ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಜೊತೆ ಸಮನ್ವಯ ಸಾಧಿಸಿ, ತುರ್ತಾಗಿ ಕ್ರಮ ಕೈಗೊಳ್ಳಬೇಕು. ಮೂರು ದಿನಗಳೊಳಗೆ ಕಾರ್ಯಾದೇಶ ನೀಡಿ ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ನೀಡುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ್, ಶಾಸಕ ರಾಜೇಶ್ ನಾಯ್ಕ್ ಇದ್ದರು.

ವಿವಿಧ ಕಂಪನಿಗಳಿಗೆ ಜವಾಬ್ದಾರಿ: ಸಂಸದ ನಳಿನ್‌

ಜಿಲ್ಲೆಯ ಖಾಸಗಿ ಸಂಸ್ಥೆಗಳಾದ ಎಂಆರ್‌ಪಿಎಲ್ ವತಿಯಿಂದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ 930 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ, ಎಂಸಿಎಫ್ ವತಿಯಿಂದ ಇಎಸ್‌ಐ ಆಸ್ಪತ್ರೆ ಹಾಗೂ ಬಂಟ್ವಾಳ ತಾಲ್ಲೂಕು ಆಸ್ಪತ್ರೆಗಳಲ್ಲಿ 80 ಎಲ್‌ಪಿಎಂ ಸಾಮರ್ಥ್ಯ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ, ಗೇಲ್ ಇಂಡಿಯಾ ಮತ್ತು ಗೇಲ್ ಗ್ಯಾಸ್ ವತಿಯಿಂದ ಪುತ್ತೂರು ಮತ್ತು ಬೆಳ್ತಂಗಡಿಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ, ಕೆಐಒಸಿಲ್ ವತಿಯಿಂದ ಉಪ್ಪಿನಂಗಡಿ ಮತ್ತು ಮೂಡುಬಿದಿರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ ಮಾಡಲು ಸಂಸದ ನಳಿನ್‌ಕುಮಾರ್ ಸೂಚಿಸಿದರು.

ಇನ್ಫೊಸಿಸ್ ಮಂಗಳೂರು ವತಿಯಿಂದ ಉಳ್ಳಾಲದಲ್ಲಿ ವಿದ್ಯುತ್ ಚಿತಾಗಾರ, ಎಂಎಸ್‌ಇಜೆಡ್‌ ವತಿಯಿಂದ ಜಿಲ್ಲೆಯಾದ್ಯಂತ ಆಂಬುಲೆನ್ಸ್ ನಿರ್ವಹಣೆ, ಆಂಬುಲೆನ್ಸ್‌ಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು, ಅವಶ್ಯಕತೆಗೆ ಅನುಗುಣವಾಗಿ ತಕ್ಷಣ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಭಾರತೀಯ ಉದ್ಯಮಗಳ ಒಕ್ಕೂಟ ಮಂಗಳೂರು ಘಟಕ (ಸಿಐಐ)ದ ವತಿಯಿಂದ ಬಾಡಿಗೆ ಆಧಾರದಲ್ಲಿ 100 ಆಮ್ಲಜನಕ ಸಿಲಿಂಡರ್‌ಗಳ ಪೂರೈಕೆ, ಎನ್‌ಎಂಪಿಟಿ ವತಿಯಿಂದ 20 ಡ್ಯೂರೋ ಸಿಲಿಂಡರ್, ಬಿಎಎಸ್‌ಎಫ್ ಇಂಡಿಯಾ ವತಿಯಿಂದ 20 ಡ್ಯೂರೋ ಸಿಲಿಂಡರ್ ನೆರವನ್ನು ಒದಗಿಸುವಂತೆ ಸಂಸದರು ಸೂಚಿಸಿದರು.

ಸಂಸದರು ಸೂಚಿಸಿದ ಕಾರ್ಯಗಳಿಗೆ ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸಲು ಸಭೆಯಲ್ಲಿ ಹಾಜರಿದ್ದ ಎಲ್ಲ ಕಂಪನಿಗಳ ಸಂಸ್ಥೆಗಳು ಪ್ರತಿನಿಧಿಗಳು ಒಪ್ಪಿಕೊಂಡರು. ಜಿಲ್ಲಾಡಳಿತಕ್ಕೆ ಅಗತ್ಯ ನೆರವಿನ ಹಸ್ತ ಚಾಚುವುದಾಗಿ ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು