ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 50 ಹಾಸಿಗೆ ಕೊಡಲೇಬೇಕು: ಸಚಿವ ಶ್ರೀನಿವಾಸ ಪೂಜಾರಿ ತಾಕೀತು

ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಭೇಟಿ
Last Updated 6 ಆಗಸ್ಟ್ 2020, 15:40 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್ ನಿರ್ವಹಣೆಗೆ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳು ತಮ್ಮ ಹಾಸಿಗೆ ಸಾಮಥ್ಯ೯ದ ಶೇ 50 ರಷ್ಟನ್ನು ಸರ್ಕಾರಕ್ಕೆ ಬಿಟ್ಟು ಕೊಡಲೇಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಕೋವಿಡ್ ನಿರ್ವಹಣೆ ಸಂಬಂಧ ನಗರದ ಎ.ಜೆ ಆಸ್ಪತ್ರೆ ಹಾಗೂ ಶ್ರೀನಿವಾಸ ವೈದ್ಯಕೀಯ ಕಾಲೇಜುಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಸಾರ್ವಜನಿಕ ಆರೋಗ್ಯ ರಕ್ಷಣೆ ಸರ್ಕಾರದ ಆದ್ಯತೆಯಾಗಿದೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್–19 ಸೋಂಕಿತರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಸರ್ಕಾರದೊಂದಿಗೆ ಸಹಕರಿಸಬೇಕು. ರಾಜ್ಯ ಸರ್ಕಾರವು ಆಯುಷ್ಮಾನ್ ಭಾರತ್‌ ಯೋಜನೆಯಡಿ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಉದ್ದೇಶಿಸಿದೆ. ಅಲ್ಲದೆ ಖಾಸಗಿಯಾಗಿ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ಸರ್ಕಾರ ನಿಗದಿಪಡಿಸಿದ ದರದಲ್ಲಿ ಚಿಕಿತ್ಸೆ ನೀಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ವಿವರ, ಶುಲ್ಕ ಮಾಹಿತಿ, ಆಯುಷ್ಮಾನ್ ಯೋಜನೆಯ ಸಮರ್ಪಕ ಮಾಹಿತಿಯನ್ನು ರೋಗಿಗಳು ದಾಖಲಾಗುವಾಗಲೇ ನೀಡಬೇಕು. ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ದೊಡ್ಡ ಫಲಕ ಹಾಕಿ ವಿವರ ನಮೂದಿಸಬೇಕು ಎಂದು ಸೂಚಿಸಿದರು.

ಸಾರ್ವಜನಿಕರಿಗೆ ಆಯುಷ್ಮಾನ್ ಸೌಲಭ್ಯದ ಮಾಹಿತಿ ನೀಡಲು ಆರೋಗ್ಯ ಇಲಾಖೆ ವತಿಯಿಂದ ಪ್ರತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರ ಕಾರ್ಯಕರ್ತರನ್ನು ನೇಮಿಸಿದ್ದು, ಇವರು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ನಿರ್ಲಕ್ಷ್ಯ ತೋರುವವರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ಶಾಸಕ ಡಾ. ಭರತ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಸೆಲ್ವಮಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ವೆನ್ಲಾಕ್‌ನ ವೈದ್ಯಕೀಯ ಅಧೀಕ್ಷಕ ಡಾ.ಸದಾಶಿವ, ಎ.ಜೆ. ಆಸ್ಪತ್ರೆ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ, ಶ್ರೀನಿವಾಸ ವೈದ್ಯಕೀಯ ಕಾಲೇಜಿನ ಡೀನ್ ಡಾ. ಉದಯಕುಮಾರ್ ಇದ್ದರು.

*
ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ರ‍್ಯಾಪಿಡ್‌ ಆಂಟಿಜನ್‌ ಟೆಸ್ಟ್‌ ಕಿಟ್‌ ನೀಡಲಾಗುತ್ತಿದ್ದು, ನಿತ್ಯ 100 ಮಂದಿಗೆ ಉಚಿತವಾಗಿ ಕೋವಿಡ್ ಪರೀಕ್ಷೆ ನಡೆಸಬೇಕು.
-ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT