ಬುಧವಾರ, ಮೇ 25, 2022
31 °C
ಕಾರ್ಯಾಗಾರ ಉದ್ಘಾಟಿಸಿದ ಪ್ರೊ. ರಾಜು ಕೃಷ್ಣ ಚಲ್ಲಣ್ಣವರ್‌ ಅಭಿಮತ

ಮಂಗಳೂರು: ನಗರಗಳ ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ನಗರಗಳ ತ್ಯಾಜ್ಯ ನಿರ್ವಹಣೆ 21ನೇ ಶತಮಾನದ ದೊಡ್ಡ ಸವಾಲು. ಎಸೆಯುವ ಕಸವನ್ನು ತ್ಯಾಜ್ಯ ಎಂದು ಪರಿಗಣಿಸದೆ, ಉದ್ಯೋಗ ಸೃಷ್ಟಿ ಮತ್ತು ಮತ್ತು ಆದಾಯದ ಮೂಲ ಉತ್ಪನ್ನವಾಗಿ ಮಾರ್ಪಡಿಸಬಹುದು’ ಎಂದು ಮಂಗಳೂರು ವಿಶ್ವವಿದ್ಯಾಲಯದ ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ರಾಜು ಕೃಷ್ಣ ಚಲ್ಲಣ್ಣವರ್ ಹೇಳಿದರು.

ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶನಿವಾರ ಬೆಂಗಳೂರಿನ ಎನ್ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ ಮತ್ತು ಮಂಗಳೂರು ಮಹಾನಗರ ಪಾಲಿಕೆ ಆಶ್ರಯದಲ್ಲಿ ‘ಮಂಗಳೂರನ್ನು ದಕ್ಷಿಣ ಭಾರತದ ನ್ಯಾಯಯುತ ನಗರವನ್ನಾಗಿ ಮಾಡುವುದು - ಸುಸ್ಥಿರ ಮತ್ತು ನ್ಯಾಯಯುತ ಘನತ್ಯಾಜ್ಯ ನಿರ್ವಹಣಾ ತಂತ್ರ ವಿಕಸನ’ ಎಂಬ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಾವು ಉತ್ಪಾದಿಸುವ, ಬಳಸುವ ಪ್ರತಿ ವಸ್ತುವು ಕೊನೆಗೆ ಏನಾಗುತ್ತದೆ ಎಂಬ ಜವಾಬ್ದಾರಿಯಿಂದ ವರ್ತಿಸಬೇಕು. ನಾವು ಎಸೆಯುವ ಕಸವು ಪರಿಸರ, ಜಲ, ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಸುಸ್ಥಿರ ಘನ ತ್ಯಾಜ್ಯ ನಿರ್ವಹಣೆಯಿಂದ ಶೇ 95 ರಷ್ಟು ವಸ್ತುಗಳ ಮರು ಬಳಕೆ, ಕಾಂಪೋಸ್ಟ್‌ ತಯಾರಿಕೆಗೆ ಅನುಕೂಲ. ಇದರಿಂದ ಮಾಲಿನ್ಯ ತಡೆಗಟ್ಟುವ ಜತೆಗೆ ಭೂಮಿ ಫಲವತ್ತತೆ ಕೂಡ ಕಾಪಾಡಬಹುದು. ಸಾಕಷ್ಟು ಮಂದಿಗೆ ಉದ್ಯೋಗ ಕಲ್ಪಿಸಬಹುದು. ಈ ಮೂಲಕ ಜಗತ್ತಿನಲ್ಲಿ ಮಂಗಳೂರನ್ನು ಮಾದರಿ ನಗರವನ್ನಾಗಿ ರೂಪಿಸಬಹುದು’ ಎಂದರು.

ಉಳ್ಳಾಲ ನಗರಸಭೆ ಮುಖ್ಯಾಧಿಕಾರಿ ಕೆ. ರಾಯಪ್ಪ ಮಾತನಾಡಿ, ನಗರಗಳು ಬೆಳೆದಂತೆ ತ್ಯಾಜ್ಯದ ಪ್ರಮಾಣ ಹೆಚ್ಚುತ್ತದೆ. ಮನೆಯಿಂದ ಹಿಡಿದು ಮದುವೆಮನೆ ತನಕ ತ್ಯಾಜ್ಯ ಉತ್ಪತ್ತಿ ಹೆಚ್ಚುತ್ತದೆ. ಅದನ್ನು ತಗ್ಗಿಸುವ ಪ್ರಯತ್ನ ಮಾಡಬೇಕು. ಘನ ತ್ಯಾಜ್ಯ ನಿರ್ವಹಣೆಯಲ್ಲಿ ನಗರದ ಎಲ್ಲ ಕಸವನ್ನು ಸಂಪನ್ಮೂಲವಾಗಿ ಮಾರ್ಪಡಿಸಲು ಸಾಧ್ಯವಿದೆ. ಉಳ್ಳಾಲದಲ್ಲಿ ಆರು ತಿಂಗಳ ಸವಾಲಿನ ಬಳಿಕ ಸಾವಯವ ಗೊಬ್ಬರ, ಸಾವಯವ ಕೃಷಿ, ಕೋಳಿ ತ್ಯಾಜ್ಯದಿಂದ ಪ್ರಾಣಿಗಳ ಆಹಾರ ಉತ್ಪಾದನೆ, ಪ್ಲಾಸ್ಟಿಕ್ ಮುಕ್ತ ಬೀಚ್‌ಗಳನ್ನು ಯಶಸ್ವಿಯಾಗಿ ಮಾಡಿದ್ದೇವೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಪೃಥ್ವಿರಾಜ್ ವರ್ಣೇಕರ್, ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್‌ನ ಲಿಯೋ ಎಫ್. ಸಲ್ಡಾನ ಮತ್ತು ಭಾರ್ಗವಿ ಎಸ್.ರಾವ್, ಮಹಾನಗರ ಪಾಲಿಕ ಜಂಟಿ ಆಯುಕ್ತ ಅಜಿತ್, ಮಂಗಳೂರು ವಿಶ್ವವಿದ್ಯಾಲಯದ ಜೈವಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಪ್ರಶಾಂತ್ ನಾಯಕ್ ಮಾತನಾಡಿದರು.

ಸ್ವಾಸ್ಥ್ಯ ಮಂಗಳೂರು ಸಮಿತಿ ಜಂಟಿ ಸಂಚಾಲಕಿ ರೀಟಾ ನೊರೊನ್ಹ ಸ್ವಾಗತಿಸಿದರು. ಮಂಗಳೂರು ವಿಶ್ವವಿದ್ಯಾಲಯ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿನಿ ರಾಮಾಂಜಿ ವಂದಿಸಿದರು.

‘ಕಸ ವಿಂಗಡಣೆ ಶೇ 70 ಪ್ರಗತಿ’
ಮಂಗಳೂರಿನ ಮನೆಗಳಿಂದ ಹಸಿ ಮತ್ತು ಒಣ ಕಸ ವಿಂಗಡಣೆ ಮಾಡಿ ಕೊಡಲು ಆರು ತಿಂಗಳ ಹಿಂದೆ ಸೂಚನೆ ನೀಡಿದ್ದು, ಶೇ 70 ರಷ್ಟು ಪ್ರಗತಿ ಸಾಧಿಸಿದ್ದೇವೆ ಎಂದು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದರು.

ನಗರದ ಪ್ರತಿಯೊಬ್ಬ ನಾಗರಿಕನಿಗೂ ನಮ್ಮ ಕಸ ನಮ್ಮ ಜವಾಬ್ದಾರಿ ಎಂಬ ಭಾವನೆ ಬರಬೇಕು. ಪಚ್ಚನಾಡಿಯಲ್ಲಿ ತ್ಯಾಜ್ಯ ದುರಂತಕ್ಕೆ ಮೊದಲು ಸ್ಚಚ್ಛತೆಯಲ್ಲಿ ಮಂಗಳೂರು ನಗರ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿತ್ತು. ತ್ಯಾಜ್ಯ ದುರಂತದ ಬಳಿಕ ಈ ಸ್ಪರ್ಧೆಗೆ ಭಾಗವಹಿಸಲೂ ಅವಕಾಶ ಸಿಗಲಿಲ್ಲ. ಇದು ನಮಗೆ ಪಾಠ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.