ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ, ಎನ್‌ಆರ್‌ಸಿ ವಿರೋಧಿಸಿ ಫೆ.25ರಂದು ಕುದ್ರೋಳಿಯಲ್ಲಿ ಪ್ರತಿಭಟನೆ

ಮುಸ್ಲಿಂ ಐಕ್ಯತಾ ವೇದಿಕೆ
Last Updated 22 ಫೆಬ್ರುವರಿ 2020, 9:42 IST
ಅಕ್ಷರ ಗಾತ್ರ

ಮಂಗಳೂರು: ಡಿಸೆಂಬರ್‌ 19ರಂದು ನಡೆದ ಪೊಲೀಸ್‌ ಗೋಲಿಬಾರ್‌ನಲ್ಲಿ ಮೃತರಾದ ನೌಶೀನ್‌ ಮತ್ತು ಅಬ್ದುಲ್‌ ಜಲೀಲ್‌ ಅವರ ಮನೆಗಳಿರುವ ಕುದ್ರೋಳಿ ಪ್ರದೇಶದ ಟಿಪ್ಪು ಸುಲ್ತಾನ್‌ ಗಾರ್ಡನ್‌ನಲ್ಲಿ ಮುಸ್ಲಿಂ ಐಕ್ಯತಾ ವೇದಿಕೆಯು ಇದೇ 25ರಂದು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಪ್ರತಿಭಟನೆ ಆಯೋಜಿಸಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷರೂ ಆಗಿರುವ ಮಾಜಿ ಮೇಯರ್‌ ಕೆ.ಅಶ್ರಫ್‌, ‘ಸಿಎಎ, ಎನ್‌ಆರ್‌ಸಿ, ರಾಷ್ಟ್ರೀಯ ಜನಸಂಖ್ಯಾ ದಾಖಲೆ (ಎನ್‌ಪಿಆರ್‌) ವಿರುದ್ಧ ಫೆ.25ರ ಮಧ್ಯಾಹ್ನ 2 ಗಂಟೆಯಿಂದ ಪ್ರತಿಭಟನೆ ನಡೆಯಲಿದೆ. ಡಿ.19ರ ಗೋಲಿಬಾರ್‌ ಮತ್ತು ನಂತರದ ಘಟನೆಗಳ ಕುರಿತು ನ್ಯಾಯಾಂಗ ತನಿಖೆಗೆ ಆಗ್ರಹಿಸುವುದೂ ಪ್ರತಿಭಟನೆಯ ಭಾಗವಾಗಲಿದೆ’ ಎಂದರು.

ಶಾಸಕ ಯು.ಟಿ.ಖಾದರ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್.ಮೊಹಮ್ಮದ್ ಮಸೂದ್ ಸಹಿತ ಹಲವು ಪ್ರಮುಖರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸುವರು. ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಹೋರಾಟಗಾರರಾದ ಬಿ.ಆರ್. ಭಾಸ್ಕರ್ ಪ್ರಸಾದ್, ರಾ. ಚಿಂತನ್, ಸುಧೀರ್‌ಕುಮಾರ್ ಮುರೊಳ್ಳಿ, ನಜ್ಮಾ ನಝೀರ್ ಚಿಕ್ಕನೇರಳೆ, ಎಸ್‌ಡಿಪಿಐ ಮುಖಂಡ ಇಲ್ಯಾಸ್ ತುಂಬೆ, ಎಚ್.ಐ. ಸುಫಿಯಾನ್ ಸಖಾಫಿ ಕಾವಳಕಟ್ಟೆ, ಕೆ.ಎಂ. ಇಕ್ಬಾಲ್ ಬಾಳಿಲ, ಎ.ಕೆ. ಕುಕ್ಕಿಲ, ಎಂ.ಜಿ. ಮುಹಮ್ಮದ್, ರಫೀವುದ್ದೀನ್ ಕುದ್ರೋಳಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಬಂದರು, ಕುದ್ರೋಳಿ, ಕಂದಕ್‌ ಸೇರಿದಂತೆ ಐದು ಮಸೀದಿಗಳ ಜಮಾತ್‌ನಿಂದ ಮುಸ್ಲಿಂ ಐಕ್ಯತಾ ವೇದಿಕೆ ರಚಿಸಲಾಗಿದೆ. ಮೃತ ನೌಶೀನ್‌ ಕುದ್ರೋಳಿ ಮತ್ತು ಅಬ್ದುಲ್‌ ಜಲೀಲ್‌ ಹೆಸರಿನ ವೇದಿಕೆಯಲ್ಲಿ ಪ್ರತಿಭಟನೆ ನಡೆಯಲಿದೆ. 5,000ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಆಹ್ವಾನ ರದ್ದು: ‘ಅಮೂಲ್ಯ ಲಿಯೋನ ಅವರಿಗೂ ಈ ಸಭೆಯಲ್ಲಿ ಭಾಷಣಕ್ಕೆ ಆಹ್ವಾನ ನೀಡಲಾಗಿತ್ತು. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಅವರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ. ಭಾರತದ ನೆಲದಲ್ಲಿ ಇದ್ದುಕೊಂಡು ಪಾಕಿಸ್ತಾನದ ಪರ ಘೋಷಣೆ ಕೂಗುವುದನ್ನು ವೇದಿಕೆ ಖಂಡಿಸುತ್ತದೆ. ಅಮೂಲ್ಯ ಅವರಿಗೆ ನೀಡಿದ್ದ ಆಹ್ವಾನವನ್ನು ರದ್ದು ಮಾಡಲಾಗಿದೆ. ಅವರಿಗಾಗಿ ಕಾಯ್ದಿರಿಸಿದ್ದ ವಿಮಾನದ ಟಿಕೆಟ್‌ ಅನ್ನೂ ರದ್ದು ಮಾಡಲಾಗಿದೆ’ ಎಂದು ಅಶ್ರಫ್‌ ತಿಳಿಸಿದರು.

ಮುಸ್ಲಿಂ ಐಕ್ಯತಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ.ಅಬ್ದುಲ್ ಅಝೀಝ್ ಕುದ್ರೋಳಿ, ಕೋಶಾಧಿಕಾರಿ ಮಕ್ಬೂಲ್ ಅಹ್ಮದ್, ಉಪಾಧ್ಯಕ್ಷರಾದ ಬಿ.ಅಬೂಬಕರ್, ಪಝಲ್ ಮುಹಮ್ಮದ್, ನಾಸಿರುದ್ದೀನ್ ಹೈಕೊ, ಶಂಸುದ್ದೀನ್ ಎಚ್.ಟಿ., ಕಾರ್ಯದರ್ಶಿ ಗಳಾದ ಮುಝೈರ್ ಅಹ್ಮದ್, ಮುಹಮ್ಮದ್ ಹಾರಿಸ್, ಅಶ್ರಫ್ ಕಿನಾರ, ಸದಸ್ಯರಾದ ಕೆ.ಕೆ. ಲತೀಫ್, ಮುಹಮ್ಮದ್ ಯಾಸೀನ್, ಎನ್.ಕೆ. ಅಬೂಬಕರ್, ಅಬ್ದುಲ್ ವಹಾಬ್, ಅಬ್ದುಲ್ ರಹ್ಮಾನ್, ಎಸ್.ಎ. ಖಲೀಲ್, ಇಕ್ಬಾಲ್ ಕಂಡತ್‌ಪಳ್ಳಿ, ಅಬ್ದುಲ್ ಲತೀಫ್, ಮಕ್ಬೂಲ್ ಅಹ್ಮದ್, ಮುಸ್ತಾಕ್, ಇಸ್ಮಾಯಿಲ್ ಬಿ.ಎ. ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT