ಭಾನುವಾರ, ಫೆಬ್ರವರಿ 28, 2021
21 °C
ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ: ಶಾಸಕ ಯು.ಟಿ.ಖಾದರ್

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರತಿಭಟನೆ 25ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಕಾಂಗ್ರೆಸ್‌ ಜಿಲ್ಲಾ ಘಟಕದ ವತಿಯಿಂದ ಜಿಲ್ಲೆಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಇದೇ 25ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಯು.ಟಿ. ಖಾದರ್‌ ತಿಳಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೆಹಲಿಯಲ್ಲಿ ರೈತರು ಪ್ರತಿಭಟನೆ ಆರಂಭಿಸಿ ಎರಡು ತಿಂಗಳು ಕಳೆದಿದೆ. ಆದರೂ ಸರ್ಕಾರ ಸ್ಪಂದಿಸುತ್ತಿಲ್ಲ. ರೈತರ ಪ್ರತಿಭಟನೆಗೆ ಬೆಂಬಲವಾಗಿ ಕಾಂಗ್ರೆಸ್‌ನಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೇಂದ್ರದ ಕೃಷಿ ಕಾಯ್ದೆಯಿಂದ ದೇಶದ 130 ಕೋಟಿ ಜನರಿಗೆ ತೊಂದರೆ ಆಗಲಿದೆ. ದೇಶದ ಆಹಾರ ಸುರಕ್ಷತೆಗೆ ಸಂಕಷ್ಟ ಬರಲಿದೆ’ ಎಂದರು.

ಈ ಮೊದಲು ಭಾರತೀಯ ಆಹಾರ ನಿಗಮದಿಂದ ಭತ್ತವನ್ನು ಖರೀದಿಸಿ, ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿತ್ತು. ಆದರೆ, ಹೊಸ ಕಾನೂನಿನ ಪ್ರಕಾರ ಯಾರು ಬೇಕಾದರೂ ನೇರವಾಗಿ ರೈತರಿಂದ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಆಹಾರ ನಿಗಮದಿಂದ ಅಗತ್ಯಕ್ಕೆ ತಕ್ಕಷ್ಟು ಭತ್ತದ ಖರೀದಿ ಆಗದೇ ಇದ್ದರೆ, ರಾಜ್ಯಗಳಿಗೆ ಹಂಚಿಕೆಯಾಗುವ ಪಡಿತರ ಧಾನ್ಯಗಳ ಕೊರತೆಯಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.

ಅಗತ್ಯ ವಸ್ತುಗಳ ಕಾಯ್ದೆಯಡಿ ಹೆಚ್ಚಿನ ದಾಸ್ತಾನು ಇರಿಸುವಂತಿಲ್ಲ. ಆದರೆ, ಹೊಸ ಕಾಯ್ದೆಯಡಿ ಎಷ್ಟು ಬೇಕಾದರೂ ಭತ್ತವನ್ನು ಖರೀದಿಸಬಹುದು. ಅದಕ್ಕೆ ಯಾವುದೇ ನಿರ್ಬಂಧವಿಲ್ಲ. ಇದರಿಂದಾಗಿ ಬಂಡವಾಳಶಾಹಿಗಳು ಉತ್ಪನ್ನದ ಬೆಲೆ ಹೆಚ್ಚಳ ಆಗುವವರೆಗೆ ಗೋದಾಮುಗಳಲ್ಲಿ ದಾಸ್ತಾನು ಇರಿಸಲಿದ್ದು, ಬೆಲೆ ಹೆಚ್ಚಳದ ಲಾಭ ಪಡೆಯುವ ಪ್ರಯತ್ನ ಮಾಡಲಿದ್ದಾರೆ ಎಂದು ತಿಳಿಸಿದರು.

ಶೈಕ್ಷಣಿಕ ವರ್ಷ ಕಳೆಯಲು ಇನ್ನು ನಾಲ್ಕು ತಿಂಗಳಷ್ಟೇ ಬಾಕಿ ಇದ್ದು, ಅಷ್ಟರಲ್ಲಿ ಶೇ 90ರಷ್ಟು ಪಠ್ಯ ಬೋಧಿಸಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಸಾಧ್ಯವೇ? ಸರ್ಕಾರದ ಈ ನೀತಿಯಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಶಾಲೆ–ಕಾಲೇಜುಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಆಗಿಲ್ಲ. ಇದರಿಂದ ಈಗಿರುವ ಶಿಕ್ಷಕರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಹರೀಶ್‌ಕುಮಾರ್, ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು