ಮಂಗಳೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗದಂತೆ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ಜಿಲ್ಲೆಯ ಬಿಜೆಪಿ ಶಾಸಕರಿಂದ ಹಕ್ಕುಚ್ಯುತಿಗೆ ಸಂಬಂಧಿಸಿದ ಆರೋಪದ ಕುರಿತ ಪ್ರಶ್ನೆಗೆ ಉತ್ತರಿಸಿ ಸರ್ಕಾರ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದು ಶಾಸಕರ ಹಕ್ಕು ಚ್ಯುತಿ ಆಗಬಾರದು ಎಂದು ಮುಖ್ಯಮಂತ್ರಿಯೇ ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲ ಜನಪ್ರತಿನಿಧಿಗಳಿಗೆ ಸಮಾನ ಗೌರವ ಸಿಗಬೇಕಾಗಿದೆ ಎಂದರು.
‘ಆಮಂತ್ರಣ ಪತ್ರಿಕೆಯನ್ನು ಶಿಷ್ಟಾಚಾರದ ಪ್ರಕಾರವೇ ಸಿದ್ಧಗೊಳಿಸಲಾಗುತ್ತದೆ. ಆದರೆ ಕೆಲವೊಮ್ಮೆ ಅವರವರಿಗೆ ಬೇಕಾದವರಿಗೆ ಆಹ್ವಾನ ಕೊಟ್ಟು ವಿಶೇಷ ಅಹ್ವಾನಿತರು ಎಂಬ ಪಟ್ಟಿಗೆ ಸೇರಿಸುತ್ತಾರೆ. ಶಾಸಕರು ಮತ್ತು ಅಧಿಕಾರಿಗಳ ಹೆಸರು ಈ ರೀತಿ ಹಾಕಿದರೆ ಸಮಸ್ಯೆ ಇಲ್ಲ. ಯಾರದೋ ಹೆಸರು ಹಾಕಿದರೆ ತೊಂದರೆ. ಆದ್ದರಿಂದ ಅಂಥದ್ದಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ’ ಎಂದು ಸಚಿವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.