ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಗೆಲ್ಲಲು ‘ಜಲಬಂಧನ್’ ತಂತ್ರ:40 ಸಾವಿರ ಕೈಪಿಡಿ

ಮಂಗಳೂರು ಧರ್ಮಪ್ರಾಂತ್ಯದ ಪರಿಸರ ಆಯೋಗದಿಂದ ಅಭಿಯಾನ
Published 11 ಮೇ 2024, 6:18 IST
Last Updated 11 ಮೇ 2024, 6:18 IST
ಅಕ್ಷರ ಗಾತ್ರ

ಮಂಗಳೂರು: ಬಿಸಿಲ ಝಳಕ್ಕೆ ಬತ್ತುತ್ತಿರುವ ಜಲಮೂಲಗಳು, ಎಲ್ಲೆಡೆ ಜೀವಜಲಕ್ಕಾಗಿ ಪರಿತಪಿಸುತ್ತಿರುವ ಸಂದರ್ಭದಲ್ಲಿ ಜಲದ ಮಹತ್ವ ತಿಳಿಸಲು ಮಂಗಳೂರು ಧರ್ಮಪ್ರಾಂತ್ಯದ ಪರಿಸರ ಆಯೋಗವು ಈ ಬಾರಿ ಮತ್ತೊಮ್ಮೆ ‘ಜಲಬಂಧನ್’ ಅಭಿಯಾನಕ್ಕೆ ಟೊಂಕ ಕಟ್ಟಿದೆ.

ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಪರಿಸರ ಸಂರಕ್ಷಣೆಯೂ ಒಂದಾಗಿದ್ದು, ಇದಕ್ಕಾಗಿ ಮೀಸಲಿರುವ ಪರಿಸರ ಆಯೋಗವು, ನಿರಂತರವಾಗಿ ಜಲ ಜಾಗೃತಿ ಕಾರ್ಯ ನಡೆಸುತ್ತಿದೆ. 2020ರಲ್ಲಿ ‘ಜಲಬಂಧನ್’ ಎನ್ನುವ ಕೈಪಿಡಿ ಸಿದ್ಧಪಡಿಸಿ, ಚರ್ಚ್‌ಗಳು, ಶಿಕ್ಷಣ ಸಂಸ್ಥೆಗಳಲ್ಲಿ ಜಲ ಸಾಕ್ಷರತೆಯ ಅರಿವು ಮೂಡಿಸಿತ್ತು. ನಂತರ 2022ರಲ್ಲಿ ಮತ್ತೊಮ್ಮೆ ಇದೇ ಮಾದರಿಯ ಅಭಿಯಾನ ನಡೆಸಿತ್ತು. ಈ ಬಾರಿ ಮುಂಗಾರು ಪೂರ್ವದಲ್ಲಿ ಮತ್ತೊಮ್ಮೆ ಜನರ ಮನದ ಕದ ತಟ್ಟಲು ಮುಂದಾಗಿದೆ.

‘ಹವಾಮಾನ ವೈಪರೀತ್ಯವು ಜೀವಜಲಕ್ಕೆ ಆಪತ್ತು ತಂದಿದೆ. ಎಲ್ಲೆಡೆ ನೀರಿನ ಕೊರತೆಯ ಮಾತುಕತೆ ಜೋರಾಗಿದೆ. ಮಳೆ ನಮ್ಮ ಕೈಯಲ್ಲಿ ಇಲ್ಲದಿದ್ದರೂ, ಮಳೆ ನೀರನ್ನು ರಕ್ಷಿಸಿಕೊಳ್ಳುವ ಸಾಧ್ಯತೆ ನಮ್ಮ ಕೈಯಲ್ಲಿದೆ. ಓಡುವ ಮಳೆ ನೀರಿಗೆ ತಡೆ ಹಾಕಿ, ನಮ್ಮ ಜಲಮೂಲ ಭದ್ರಗೊಳಿಸಿಕೊಂಡರೆ ಬೇಸಿಗೆಯಲ್ಲಿ ನೀರಿನ ಬರ ಎದುರಾಗದು. ಜನರಲ್ಲಿ ಈ ಅರಿವು ಮೂಡಿಸಲು ಅಭಿಯಾನ ಕೈಗೆತ್ತಿಕೊಂಡಿದ್ದೇವೆ’ ಎನ್ನುತ್ತಾರೆ ಪರಿಸರ ಆಯೋಗದ ಕಾರ್ಯದರ್ಶಿ ಲುವಿಸ್ ಪಿಂಟೊ. 

‘ಬಿಷಪ್‌ ಅವರ ಆಶಯದಂತೆ ಧರ್ಮಪ್ರಾಂತ್ಯದ ಅಡಿಯಲ್ಲಿ ಬರುವ 125 ಚರ್ಚ್‌ಗಳು, ಶಿಕ್ಷಣ ಸಂಸ್ಥೆಗಳು, ವೃದ್ಧಾಶ್ರಮಗಳು, ಇನ್ನಿತರ ಸಂಸ್ಥೆಗಳಲ್ಲಿ ಮಳೆ ನೀರನ್ನು ಬೋರ್‌ವೆಲ್‌ಗೆ ಬಿಡುವುದು, ಮಳೆ ನೀರು ಬಾವಿಗೆ ಬಿಡುವುದು, ಮಳೆ ನೀರು ಇಂಗಿಸುವ ಇಂಗುಗುಂಡಿ ರಚನೆ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು. ಕಳೆದ ನಾಲ್ಕೈದು ವರ್ಷಗಳಲ್ಲಿ ಶೇ 80ಕ್ಕೂ ಹೆಚ್ಚು ಚರ್ಚ್‌ಗಳಲ್ಲಿ, ಶೇ 90ಕ್ಕೂ ಹೆಚ್ಚು ಕಾನ್ವೆಂಟ್‌ಗಳು, ಶಾಲೆಗಳು, ಶಿಕ್ಷಣ ಸಂಸ್ಥೆಗಳಲ್ಲಿ ಮಳೆ ನೀರು ಸದ್ಬಳಕೆ ಕಾರ್ಯ ಸಾಕಾರಗೊಂಡಿದೆ. ಬಹಳಷ್ಟು ಕಡೆಗಳಲ್ಲಿ ಪ್ರತಿವರ್ಷ ಮಳೆಗಾಲ ಪೂರ್ವಭಾವಿಯಾಗಿ ಅವುಗಳನ್ನು ಸುಸಜ್ಜಿತಗೊಳಿಸುವ ಕಾರ್ಯವೂ ನಡೆಯುತ್ತದೆ’ ಎಂದು ಅವರು ತಿಳಿಸಿದರು.

‘ಆದರೆ, ವೈಯಕ್ತಿಕವಾಗಿ ಮನೆಗಳಲ್ಲಿ ಮಳೆ ನೀರು ಸಂರಕ್ಷಣೆಯ ಪ್ರಜ್ಞೆ ಇನ್ನಷ್ಟು ಢಾಳಾಗಿ ಮೂಡಿಸುವ ಅಗತ್ಯ ಮನಗಂಡು, ಈ ಬಾರಿ ‘ಜಲಬಂಧನ್‌’ ಎನ್ನುವ ಎಂಟು ಪುಟಗಳ 40 ಸಾವಿರ ಕೈಪಿಡಿಗಳನ್ನು ಮುದ್ರಿಸಿ, ಕ್ರಿಶ್ಚಿಯನ್ ಕುಟುಂಬಗಳನ್ನು ತಲುಪಲು ನಿರ್ಧರಿಸಲಾಗಿದೆ. ಚರ್ಚ್‌ಗಳ
ಮೂಲಕ ಪ್ರತಿ ವ್ಯಕ್ತಿಯನ್ನು ತಲುಪಿ, ಮನೆಯಲ್ಲಿ ಈ ಮಾದರಿ ನಿರ್ಮಿಸಲು ಪ್ರೇರೇಪಿಸುವುದು ಅಭಿಯಾನದ ಉದ್ದೇಶ. ಮುಂದಿನ ವಾರ ಈ ಅಭಿಯಾನಕ್ಕೆ ಚಾಲನೆ ನೀಡಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

ಜಲ ಸಂರಕ್ಷಣೆಯ ಭಾಗವಾಗಿ ಪರಿಸರ ರಕ್ಷಣೆ ಪ್ರತಿಜ್ಞೆ, ವೃಕ್ಷಾವಂದನ್, ನೀರು ಮಿತ ಬಳಕೆಯ ಬಗ್ಗೆ 1.64 ಲಕ್ಷ ಜನರ ಸಹಿ ಪಡೆದು ಪ್ರತಿಜ್ಞೆ ಸ್ವೀಕಾರದಂತಹ ಕಾರ್ಯಕ್ರಮ ನಡೆಸಲಾಗಿದೆ. ಇದು ಉತ್ತಮ ಫಲಿತಾಂಶ ನೀಡಿದೆ. ಕೊಳವೆಬಾವಿ, ಬಾವಿಗಳ ಜಲಮರುಪೂರಣ ಅಥವಾ ಇಂಗುಗುಂಡಿ ನಿರ್ಮಾಣದ ಬಗ್ಗೆ ನಾವು ತಿಳಿವಳಿಕೆ ನೀಡುತ್ತೇವೆ. ಪ್ರತಿ
ಕುಟುಂಬ ಜಲಸಾಕ್ಷರವಾಗಿ, ಅವರವರ ಆರ್ಥಿಕ ಅನುಕೂಲಕ್ಕೆ ತಕ್ಕಂತೆ, ನೀರಿನ ಸಂರಕ್ಷಣೆ ಮಾಡಿದರೆ ಈ ವರ್ಷದ ಅಭಿಯಾನದ ಉದ್ದೇಶ ಈಡೇರಿದಂತಾಗುತ್ತದೆ ಎಂದು ಅವರು ಹೇಳುತ್ತಾರೆ.

‘ಅನೇಕ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ಮಳೆ ನೀರು ಇಂಗಿಸುವ ವ್ಯವಸ್ಥೆಗೆ ಒತ್ತು ನೀಡಿವೆ. ಹಲವಾರು ಶಿಕ್ಷಣ ಸಂಸ್ಥೆಗಳು ಈ ಹಿಂದೆ ಮಾಡಿರುವ ಮಳೆ ನೀರು ಸಂರಕ್ಷಣಾ ವ್ಯವಸ್ಥೆಯನ್ನು ಸುಸಜ್ಜಿತಗೊಳಿಸಿವೆ. ಇದನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಆಗಬೇಕು’ ಎನ್ನುತ್ತಾರೆ ಸುರತ್ಕಲ್ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ.

ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಯಲ್ಲಿ ಅಳವಡಿಸಿರುವ ಮಳೆ ನೀರು ಸದ್ಬಳಕೆಯ ವ್ಯವಸ್ಥೆ
ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಯಲ್ಲಿ ಅಳವಡಿಸಿರುವ ಮಳೆ ನೀರು ಸದ್ಬಳಕೆಯ ವ್ಯವಸ್ಥೆ

40 ಸಾವಿರ ಕೈಪಿಡಿ ಮುದ್ರಣ ಮುಂದಿನ ವಾರ ಅಭಿಯಾನ ಆರಂಭ ಮಳೆ ನೀರು ಸಂರಕ್ಷಣೆಯ ಅರಿವು ಮೂಡಿಸುವ ಉದ್ದೇಶ

‘ಕೈಪಿಡಿ ಕಾಪಿಟ್ಟರೆ ಬಹುಮಾನ’ ಕೈಪಿಡಿಯನ್ನು ಓದಿ ಮೂಲೆಗೆ ಎಸೆಯದೆ 2027ರವರೆಗೆ ಜೋಪಾನವಾಗಿ ಇಟ್ಟುಕೊಂಡರೆ ಬಹುಮಾನವನ್ನೂ ಪಡೆಯಬಹುದು. 2027ರ ಜೂನ್‌ನಲ್ಲಿ ಲಕ್ಕಿ ಡ್ರಾ ನಡೆಸಿ ಕೈಪಿಡಿ ಕಾಪಿಟ್ಟುಕೊಂಡ ಒಬ್ಬ ಅದೃಷ್ಟಶಾಲಿಗೆ ₹10 ಸಾವಿರ ಬಹುಮಾನ ನೀಡಲಾಗುತ್ತದೆ ಎಂದು ಲುವಿಸ್ ಪಿಂಟೊ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT