ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಮನೆಗಳಲ್ಲಿ ದೀಪ ಬೆಳಗಿಸಿ ಸಂಭ್ರಮ

ರಾಮ ಮಂದಿರ ನಿರ್ಮಾಣಕ್ಕೆ ಇಂದು ಭೂಮಿಪೂಜೆ
Last Updated 4 ಆಗಸ್ಟ್ 2020, 15:45 IST
ಅಕ್ಷರ ಗಾತ್ರ

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಬುಧವಾರ (ಇದೇ 5) ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಲಿದ್ದು, ಕರಾವಳಿಯಲ್ಲಿ ಸಂಭ್ರಮ ಮನೆ ಮಾಡಿದೆ. ಪುಣ್ಯ ಕ್ಷೇತ್ರಗಳಲ್ಲಿ ವಿಶೇಷ ಪೂಜೆ ಹಾಗೂ ಮನೆಗಳಲ್ಲಿ ದೀಪ ಹಚ್ಚಿ ದೀಪೋತ್ಸವ ಮಾದರಿಯಲ್ಲಿ ಆಚರಿಸಲು ಸಿದ್ಧತೆ ಮಾಡಲಾಗಿದೆ.

‘ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 12.30ರವರೆಗೆ ಭೂಮಿಪೂಜೆ ನಡೆಯಲಿದ್ದು, ನೇರ ಪ್ರಸಾರ ಇರಲಿದೆ. ಈ ಸಂದರ್ಭದಲ್ಲಿ ರಾಮನಾಮ ಜಪ, ತಪ, ವಿಶೇಷ ಪೂಜೆಗಳನ್ನು ಮನೆಗಳಲ್ಲಿ ಹಾಗೂ ದೇಗುಲ, ಮಠ ಮಂದಿರಗಳಲ್ಲಿ ನೆರವೇರಿಸಲಾಗುವುದು. ವಾಹನಗಳಲ್ಲಿ ಭಗವಾಧ್ವಜ ಹಾರಿಸುವಂತೆಯೂ ಜನರಲ್ಲಿ ಮನವಿ ಮಾಡಲಾಗಿದೆ’ ಎಂದು ವಿಶ್ವ ಹಿಂದೂ ಪರಿಷತ್‌ ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್‌ ಎಂ. ತಿಳಿಸಿದ್ದಾರೆ.

ಮನೆಗಳಲ್ಲಿಯೇ ಸಂಭ್ರಮ: ‘ರಾಮ ಮಂದಿರದ ಭೂಮಿಪೂಜೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮನೆಯಲ್ಲಿಯೇ ಪೂಜೆ ಮಾಡಬೇಕು. ಬೀದಿಯಲ್ಲಿ ಪೂಜೆ ಮಾಡಿ, ಪಟಾಕಿ ಸಿಡಿಸಿ, ಮೆರವಣಿಗೆ ಮಾಡುವುದನ್ನು ಮಾಡಬಾರದು. ಅಯೋಧ್ಯೆಯಂತಹ ಸೂಕ್ಷ್ಮ ವಿಚಾರದಲ್ಲಿ ಯಾರ ಭಾವನೆಗೂ ಧಕ್ಕೆ ಉಂಟಾಗಬಾರದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸೂಚನೆ ನೀಡಿದ್ದಾರೆ.

‘ಕಾರ್ಯಕರ್ತರು ಜವಾಬ್ದಾರಿಯಿಂದ ವರ್ತಿಸಬೇಕು. ಗುಂಪು ಸೇರಿ ಸಂಭ್ರಮಾಚರಣೆ ಮಾಡಬಾರದು. ದೇವಸ್ಥಾನಗಳಲ್ಲಿ ಅಂತರ ಕಾಯ್ದುಕೊಂಡು, ಮಾಸ್ಕ್‌ ಧರಿಸಿ ದೀಪ ಬೆಳಗಿಸಬೇಕು. ಬುಧವಾರ ನಡೆಯಲಿರುವ ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದ್ದು, ಸಾಮಾಜಿಕ ಜಾಲತಾಣದಲ್ಲೂ ಲೈವ್‌ ಇರಲಿದೆ. ಅದರ ಮೂಲಕ ಜನರು ವೀಕ್ಷಿಸಬಹುದು’ ಎಂದು ತಿಳಿಸಿದ್ದಾರೆ.

‘ಕಾರ್ಯಕರ್ತರು ಬಹಿರಂಗ ಮೆರವಣಿಗೆ ಮಾಡಬಾರದು. ಅಂತರ ಕಾಯ್ದುಕೊಂಡು ಮಂದಿರ ನಿರ್ಮಾಣ ಕಾರ್ಯದ ಸಂಭ್ರಮವನ್ನು ಆಚರಿಸಬೇಕು. ಕೋವಿಡ್–19 ವಿರುದ್ಧ ಎಲ್ಲರೂ ಒಂದಾಗಿ ಹೋರಾಡೋಣ’ ಎಂದು ಶಾಸಕ ವೇದವ್ಯಾಸ ಕಾಮತ್ ಮನವಿ ಮಾಡಿದ್ದಾರೆ.

‘ಮಂದಿರ ನಿರ್ಮಾಣದ ಮೂಲಕ ರಾಮ ರಾಜ್ಯದ ಚಿಂತನೆಗೆ ಅಡಿಗಲ್ಲು ಹಾಕುವ ಸುಯೋಗ ಬಂದಿದೆ. ಮಂದಿರಕ್ಕಾಗಿ ಬಲಿದಾನ ಮಾಡಿದವರ ಆತ್ಮಕ್ಕೆ ಪುಣ್ಯ ಪ್ರಾಪ್ತಿಯಾಗುವ ಕಾಲ ಸನ್ನಿಹಿತವಾಗಿದೆ’ ಎಂದು ಆರ್‌ಎಸ್‌ಎಸ್‌ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಕಲ್ಲಡ್ಕ ಪ್ರಭಾಕರ ಭಟ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT