ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ ರಾಮರಾಜ್ಯಕ್ಕೆ ನಾಂದಿ: ವಿಶ್ವಪ್ರಸನ್ನತೀರ್ಥ ಶ್ರೀ

Published 16 ಜನವರಿ 2024, 4:37 IST
Last Updated 16 ಜನವರಿ 2024, 4:37 IST
ಅಕ್ಷರ ಗಾತ್ರ

ಮಂಗಳೂರು: ನೂರಾರು ವರ್ಷಗಳ ಕನಸು ನನಸಾಗುವ ದಿನ ಸಮೀಪಿಸುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗುವ ಮೂಲಕ ಭಾರತದಲ್ಲಿ ರಾಮರಾಜ್ಯಕ್ಕೆ ನಾಂದಿ ಆಗಬೇಕು ಎಂದು ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಟ್ರಸ್ಟಿ, ಉಡುಪಿ ಪೇಜಾವರಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳು ಆಶಯ ವ್ಯಕ್ತಪಡಿಸಿದರು.

ಕದ್ರಿ ದೇವಸ್ಥಾನದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಸೋಮವಾರ ಏರ್ಪಡಿಸಿದ್ದ ವಿಶ್ವಪ್ರಸನ್ನತೀರ್ಥ ಶ್ರೀಗಳ ಷಷ್ಠ್ಯಬ್ಧ ಅಭಿನಂದನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು ಅಸಾಹಯಕರ ಸೇವೆ ಮಾಡುವ ಮೂಲಕ ರಾಮಸೇವೆ ಮಾಡುತ್ತ ರಾಮರಾಜ್ಯ ಕಟ್ಟಲು ಸರ್ವರೂ ಕೈಜೋಡಿಸಬೇಕಾಗಿದೆ ಎಂದರು.

‘ರಾಮ ಮಹಾನ್ ದೇಶಭಕ್ತ ಆಗಿದ್ದ. ಆದ್ದರಿಂದ ರಾಮಭಕ್ತಿ ಮತ್ತು ದೇಶಭಕ್ತಿಯನ್ನು ಭಿನ್ನವಾಗಿ ಕಾಣಲು ಸಾಧ್ಯವಿಲ್ಲ. ದೇಶದ ಬಗ್ಗೆ ಕಾಳಜಿ ಉಳಿಸಿಕೊಳ್ಳುತ್ತಲೇ ರಾಮಮಂದಿರವನ್ನು ಉಳಿಸುವ ಕೆಲಸವೂ ಆಗಬೇಕು. ಮಂದಿರವನ್ನು ಮಂದಿರವಾಗಿಯೇ ಉಳಿಸದಿದ್ದರೆ ಮತ್ತೊಮ್ಮೆ ವಿದೇಶಿಯರು ಮತ್ತು ವಿದ್ವಂಸಕರ ಕುಕೃತ್ಯಕ್ಕೆ ದೇವಾಲಯ ಬಲಿ ಆದೀತು. ಹೀಗಾಗದಿರಬೇಕಾದರೆ ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿಯೇ ಉಳಿಯಬೇಕು’ ಎಂದು ಅವರು ಹೇಳಿದರು.

ಮಕ್ಕಳಿಗೆ ಅರ್ಥಪೂರ್ಣ ಹೆಸರಿಡಿ: ಸಂಸ್ಕೃತಿ, ಸಾಹಿತ್ಯ ಮತ್ತು ಪರಂಪರೆಯ ಬೇರುಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಯಬೇಕಾದರೆ ಮಕ್ಕಳಿಗೆ ಅರ್ಥಪೂರ್ಣ ಹೆಸರಿಡಬೇಕು. ಇಲ್ಲದಿದ್ದರೆ ನಮ್ಮ ಮತ ಮತ್ತು ದೇಶವನ್ನು ಬಿಟ್ಟು ಬೇರೆ ಕಡೆಗೆ ಹೋಗುತ್ತಾರೆ. ಮುಂದೊಂದು ದಿನ ಅವರೇ ರಾಮಮಂದಿರವನ್ನು ಒಡೆದು ಹಾಕುವ ಸಾಧ್ಯತೆಯೂ ಇದೆ. ನಮ್ಮತನವನ್ನು ಬಿಟ್ಟು ಬೇರೆ ಕಡೆ ಹೋದವರ ಮರುನಾಮಕರಣಕ್ಕೆ ದೊಡ್ಡದೊಂದು ಅಭಿಯಾನವನ್ನೇ ಆಯೋಜಿಸಬೇಕಾಗಿದೆ ಎಂದು ವಿಶ್ವಪ್ರಸನ್ನತೀರ್ಥರು ಸಲಹೆ ನೀಡಿದರು. 

ಕದ್ರಿ ದೇವಸ್ಥಾನದ ಮುಖ್ಯ ತಂತ್ರಿ ಬ್ರಹ್ಮಶ್ರೀ ವೇದಮೂರ್ತಿ ವಿಠಲದಾಸ ತಂತ್ರಿಗಳು ಶ್ರೀಗಳನ್ನು ಮಡಿಬಟ್ಟೆ ನೀಡಿ ಗೌರವಿಸಿದರು. ಮುಂಡಾಸು ತೊಡಿಸಿ ಸನ್ಮಾನ‌ಪತ್ರ ಅರ್ಪಿಸಿ ಹೂಮಾಲೆ ಹಾಕಿ ಸ್ವಾಮೀಜಿಯನ್ನು ಸನ್ಮಾನಿಸಲಾಯಿತು.

ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್.ಪ್ರಕಾಶ್ ಅಭಿನಂದನಾ ಭಾಷಣದಲ್ಲಿ ವಿಶ್ವಪ್ರಸನ್ನರು ಎಂಬ ಸಂತರ ಒಳಗೆ ಸಕಲ ಜೀವರಾಶಿ ರಕ್ಷಣೆಯ ಸಂಕಲ್ಪ ಇದೆ. ಅದ್ಭುತ ಪಾಂಡಿತ್ಯ ಇರುವ ಅವರು ಹಿಂದುತ್ವ, ರಾಷ್ಟ್ರದ ವಿಷಯ ಬಂದಾಗ ಕಠೋರವಾಗುತ್ತಾರೆ, ಪ್ರಾಣಿ ಪಕ್ಷಿಗಳ ವಿಷಯದಲ್ಲಿ ಮೃದು ಹೃದಯಿ ಆಗುತ್ತಾರೆ ಎಂದರು.

ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ ಮಂಗಳೂರು ಘಟಕದ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ ಸ್ವಾಗತಿಸಿದರು. ದಕ್ಷಿಣ ಮಧ್ಯ ಪ್ರಾಂತದ ಪ್ರಮುಖ ಎಂ.ಬಿ.ಪುರಾಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ವೇದವ್ಯಾಸ ಕಾಮತ್, ಪ್ರಮುಖರಾದ ಶರಣ್ ಪಂಪ್‌ವೆಲ್, ಕರುಣಾಕರ, ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ಸುಧಾಕರ ರಾವ್ ಪೇಜಾವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT