ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಂಬುಟಾನ್ ವಿರಳ; ನೇರಳೆ ಹೇರಳ

ರಸ್ತೆ ಬದಿಯಲ್ಲೂ ಮಾರುಕಟ್ಟೆಗಳಲ್ಲೂ ಸೂಪರ್ ಮಾರ್ಕೆಟ್‌ನಲ್ಲೂ ಗ್ರಾಹಕರಿಂದ ಭಾರಿ ಬೇಡಿಕೆ
Published 8 ಜೂನ್ 2024, 7:28 IST
Last Updated 8 ಜೂನ್ 2024, 7:28 IST
ಅಕ್ಷರ ಗಾತ್ರ

ಮಂಗಳೂರು: ಹಣ್ಣುಗಳ ರಾಜ ಮಾವು ಮತ್ತು ಕರಾವಳಿ ಜನರ ಇಷ್ಟದ ಹಲಸು ಮಾರುಕಟ್ಟೆಯಲ್ಲಿ ಮುಗಿಯುತ್ತ ಬರುತ್ತಿದ್ದಂತೆ ರಂಬುಟಾನ್ ಮತ್ತು ನೇರಳೆ ಹಣ್ಣು ಜನರ ಗಮನ ಸೆಳೆಯುತ್ತಿದೆ. ಹೆಚ್ಚು ಸಿಹಿ ಇಲ್ಲದೇ ಇದ್ದರೂ ತಿನ್ನಲು ರುಚಿಕರವಾದ ಈ ಹಣ್ಣುಗಳಲ್ಲಿ ಆರೋಗ್ಯಕ್ಕೆ ಉಪಯುಕ್ತವಾದ ಅಂಶಗಳು ಇರುವುದರಿಂದ ಬೇಡಿಕೆ ಹೆಚ್ಚಿದೆ.

ಕರಾವಳಿಯ ಜನರಿಗೆ ನೇರಳೆ ಹಣ್ಣು ಅಪರೂಪವೇನಲ್ಲ. ಮನೆಗಳ ಸಮೀಪ ಅಥವಾ ಕಾಡು ಪ್ರದೇಶಗಳಲ್ಲಿ ಕಂಡುಬರುವ ಹೆಮ್ಮರಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಿಗುವ ಈ ಹಣ್ಣಿನ ರುಚಿ ಒಗರು ಆಗಿದ್ದರೂ ಕಂಡರೆ ಬಾಯಿಗೆ ಹಾಕದವರು ಯಾರೂ ಇಲ್ಲ. ಆದರೆ ರಂಬುಟಾನ್ ಈ ಭಾಗಕ್ಕೆ ಈಚೆಗೆ ಪ್ರವೇಶಿಸಿದ ಹಣ್ಣು. ಆದರೆ ಈ ಹಣ್ಣಿನ ಬಗ್ಗೆ ತಿಳಿಯದವರು ಹಾಗೂ ರುಚಿ ನೋಡದೇ ಇರುವವರು ತೀರಾ ಕಡಿಮೆ.

ಜೂನ್ ತಿಂಗಳು ಬಂದು ಮುಂಗಾರಿನ ಸ್ವಾಗತಕ್ಕೆ ವೇದಿಕೆ ಸಿದ್ಧವಾಗುತ್ತಿದ್ದಂತೆ ಈ ಎರಡು ಹಣ್ಣುಗಳು ರಸ್ತೆಬದಿಯಲ್ಲೂ ಮಳಿಗೆಗಳಲ್ಲೂ ಹೇರಳವಾಗಿ ಕಾಣಸಿಗುತ್ತವೆ. ಈ ಬಾರಿ ನೇರಳೆ ಹಣ್ಣು ಯತೇಚ್ಛವಾಗಿ ಸಿಗುತ್ತಿದೆ. ಆದರೆ ಬೇಸಿಗೆಯಲ್ಲಿ ಬಿರುಬಿಸಿಲು ಇದ್ದ ಕಾರಣ ರಂಬುಟಾನ್ ಇಳುವರಿ ಕಡಿಮೆಯಾಗಿದೆ. ಆದ್ದರಿಂದ ಬೆಲೆ ಸ್ವಲ್ಪ ಹೆಚ್ಚು. ನೇರಳೆ ಕೆಜಿಗೆ ₹ 320 ಇದ್ದರೆ ರಂಬುಟಾನ್ ಕೆಜಿಗೆ ₹ 480ರಿಂದ ₹ 500ರ ವರೆಗೆ ಇದೆ.

‘ರಂಬುಟಾನ್ ಸೀಜನ್ ಈಗ ಆರಂಭ ಆಗಿದೆಯಷ್ಟೆ. ಈ ಬಾರಿ ಹಣ್ಣಿನ ಆವಕ ಕಡಿಮೆಯಾಗಿದೆ. ಉತ್ತಮ ಬೇಡಿಕೆ ಇರುವುದರಿಂದ ಬೆಲೆ ಹೆಚ್ಚಿದೆ. ಒಂದು ತಿಂಗಳ ನಂತರ ಬೆಲೆ ಒಂದಿಷ್ಟು ಕಡಿಮೆಯಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ವ್ಯಾಪಾರಿ ಮಹಮ್ಮದ್ ಬಶೀರ್‌.

ಇಂಡೊನೇಷ್ಯಾ ಮೂಲದ ರಂಬುಟಾನ್ ಈಚೆಗೆ ಭಾರತದಲ್ಲಿ ಹೆಚ್ಚು ಪ್ರಚಲಿತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ, ಉಪ್ಪಿನಂಗಡಿ, ಪುತ್ತೂರು, ಧರ್ಮಸ್ಥಳ ಭಾಗದಲ್ಲಿ ಹೆಚ್ಚು ಬೆಳೆಯುತ್ತಾರೆ. ಮಂಗಳೂರು ನಗರಕ್ಕೆ ಬರುವ ರಂಬುಟಾನ್‌ ಹಣ್ಣುಗಳಲ್ಲಿ ಹೆಚ್ಚಿನವು ಉಪ್ಪಿನಂಗಡಿ, ಧರ್ಮಸ್ಥಳ ಭಾಗದ್ದು. ಕೇರಳದಿಂದ ಲೋಡುಗಟ್ಟಲೆ ತಂದು ಇಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಹಂಚುವ ದೊಡ್ಡ ವ್ಯಾಪಾರಿಗಳೂ ಇದ್ದಾರೆ.

‘ಐದು ವರ್ಷಗಳಿಂದ ಕೇರಳದಿಂದ ರಂಬುಟಾನ್ ತಿರಿಸಿ ರಸ್ತೆಬದಿಯಲ್ಲಿ ಕೆಲವು ಅಂಗಡಿಗಳನ್ನು ಹಾಕಿ ವ್ಯಾಪಾರ ಮಾಡುತ್ತಿದ್ದೇನೆ. ಇದರಿಂದ ಕೆಲವರಿಗೆ ಉದ್ಯೋಗ ಕೊಟ್ಟ ಹಾಗೂ ಆಗುತ್ತದೆ. ಹಣ್ಣಿನ ಸೀಜನ್ ಮುಗಿದರೆ ಮೀನು ಮಾರಾಟಕ್ಕೆ ಹೋಗುತ್ತೇನೆ. ರಂಬುಟಾನ್‌ಗೆ ಉತ್ತಮ ಬೇಡಿಕೆ ಇದೆ. ಕೆಲವರು ಇದರ ಸೀಜನ್‌ಗಾಗಿ ಕಾಯುತ್ತಿರುತ್ತಾರೆ. ಜೂನ್ ಆರಂಭವಾಗುತ್ತಿದ್ದಂತೆ ಹಣ್ಣು ಬಂದಿದೆಯೇ ಎಂದು ಕೇಳುವವರು ಬಹಳ ಮಂದಿ ಇದ್ದಾರೆ. ಗರ್ಭಿಣಿಯರ ‘ಬಯಕೆ’ಯಲ್ಲೂ ಈ ಹಣ್ಣು ಸ್ಥಾನ ಪಡೆದುಕೊಂಡಿದೆ’ ಎನ್ನುತ್ತಾರೆ ಮಹಮ್ಮದ್ ಬಶೀರ್‌.   ‌

ಉಪ್ಪಿನಂಗಡಿ, ಧರ್ಮಸ್ಥಳ ಭಾಗದಿಂದ ರಂಬುಟಾನ್ ಮತ್ತು ಮಹಾರಾಷ್ಟ್ರದಿಂದ ನೇರಳೆ ಹಣ್ಣು ತರಿಸಿ ಚಿಲ್ಲರೆ ವ್ಯಾಪಾರಿಗಳಿಗೆ ಹಂಚುವ ಎಂಎಚ್‌ಎಂ ಏಜೆನ್ಸಿ ಮಾಲೀಕ ರಫೀಕ್‌, ಈ ಎರಡು ಹಣ್ಣುಗಳ ಮೇಲೆ ಜನರಿಗೆ ಇರುವ ಆಸಕ್ತಿ ಅಪಾರ ಎನ್ನುತ್ತಾರೆ.

ಮೊಹಮ್ಮದ್ ಬಶೀರ್‌
ಮೊಹಮ್ಮದ್ ಬಶೀರ್‌
ರಂಬುಟಾನ್‌
ರಂಬುಟಾನ್‌

ರಂಬುಟಾನ್ ನಾಲ್ಕು ದಿನ ಇರಿಸಿದರೂ ಹಾಳಾಗುವುದಿಲ್ಲ. ಎಲೆ ಮತ್ತು ಕಡ್ಡಿಯನ್ನು ಮುರಿಯದೇ ಗೊಂಚಲು ಸಮೇತ ಇಟ್ಟರೆ ಸುಮಾರು 20 ದಿನಗಳ ವರೆಗೆ ಏನೂ ಆಗುವುದಿಲ್ಲ. ಸ್ಥಳೀಯ ಮತ್ತು ಕೇರಳದ ಹಣ್ಣುಗಳಲ್ಲಿ ವ್ಯತ್ಯಾಸವೇನೂ ಇಲ್ಲ. ರುಚಿ ಒಂದೇ.

–ಮಹಮ್ಮದ್ ಬಶೀರ್‌ ವ್ಯಾಪಾರಿ

ಗ್ರಾಮೀಣ ಭಾಗದಲ್ಲಿ ದರ ಕಡಿಮೆ ನೇರಳೆ ಮತ್ತು ರಂಬುಟಾನ್ ಹೇರಳವಾಗಿ ಬೆಳೆಯುವ ಗ್ರಾಮೀಣ ಪ್ರದೇಶಗಳ ಕೆಲವು ಭಾಗಗಳಲ್ಲಿ ಹಲವರು ಸ್ಥಳೀಯವಾಗಿ ತಮ್ಮದೇ ಮಾರುಕಟ್ಟೆ ಸೃಷ್ಟಿಸಿ ಪ್ರಯಾಸವಿಲ್ಲದೆ ಮಾರಾಟ ಮಾಡುತ್ತಿದ್ದಾರೆ. ಅಲ್ಲೆಲ್ಲ ಗ್ರಾಹಕರಿಗೆ ನೇರವಾಗಿ ಹಣ್ಣು ಸಿಗುವುದರಿಂದ ದರವೂ ಕಡಿಮೆ ಇರುತ್ತದೆ. ‘ನೇರಳೆಗೆ ವಿಶೇಷ ಆರೈಕೆ ಅಗತ್ಯವಿಲ್ಲ. ಅದು ತನ್ನಷ್ಟಕ್ಕೇ ಬೆಳೆಯುತ್ತದೆ. ರಂಬುಟಾನ್‌ಗೆ ವರ್ಷವಿಡೀ ವಿಶೇಷ ಉಪಚಾರ ಅಗತ್ಯವಿಲ್ಲ. ಮಾರ್ಚ್‌ ತಿಂಗಳಲ್ಲಿ ಗಿಡಗಳಲ್ಲಿ ಹೂ ಬಿಡುತ್ತದೆ. ಆ ಹಂತದಿಂದ ನೀರು ಕೊಟ್ಟರೆ ಸಾಕು. ಈ ಬಾರಿ ಬರ ಕಾಡಿದ್ದರಿಂದ ಸಮರ್ಪಕವಾಗಿ ನೀರುಣಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಶೇಕಡಾ 50ರಷ್ಟು ಫಸಲು ಮಾತ್ರ ಕೈಗೆ ಬಂದಿದೆ. ಆದ್ದರಿಂದ ದರ ಸ್ವಲ್ಪ ಹೆಚ್ಚು. ಆದರೂ ದಲ್ಲಾಳಿ ಇಲ್ಲದೆ ಮಾರಾಟ ಮಾಡುವುದರಿಂದ ಗ್ರಾಹಕರಿಗೆ ಅನಕೂಲ ಆಗುತ್ತಿದೆ’ ಎಂದು ಷರೀಫ್ ಹೇಳುತ್ತಾರೆ.

ಮಧುಮೇಹಕ್ಕೆ ನೇರಳೆ ಉತ್ತಮ ನೇರಳೆ ಹಣ್ಣಿನಲ್ಲಿ ರಕ್ತ ಶುದ್ಧಿ ಮಾಡುವ ಮತ್ತು ಚರ್ಮಕ್ಕೆ ಕಾಂತಿ ನೀಡುವ ಅಂಶಗಳು ಇವೆ. ಮಧುಮೇಹ ಇರುವವರಿಗೂ ಈ ಹಣ್ಣು ತುಂಬ ಉಪಕಾರಿ. ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡುವ ಸಾಮರ್ಥ್ಯ ಈ ಹಣ್ಣಿಗೆ ಇದೆ. ಆದ್ದರಿಂದ ಇದರ ಪುಡಿಯನ್ನು ಔಷಧಿಯಾಗಿ ಬಳಸಲಾಗುತ್ತದೆ. ಆಸವ (ಸಿರಪ್‌) ಕೂಡ ಸಿಗುತ್ತದೆ. ಹಣ್ಣುಗಳು ಸಿಗುವ ಸಂದರ್ಭದಲ್ಲಿ ಹಸಿಯಾಗಿ ತಿನ್ನವುದರಿಂದಲೂ ಉಪಯೋಗವಿದೆ ಎಂದು ಮಂಗಳೂರಿನ ಆಯುರ್ವೇದ ವೈದ್ಯ ಡಾ.ಜಯಪ್ರಕಾಶ್ ಬಿ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT