ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದಿಗಂತದ ರಂಗೋತ್ಸವ ನಾಳೆಯಿಂದ

ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ರಂಗ ಸಂವಾದ, ರಂಗ ಸಂಗೀತ, ಲಯವಾದ್ಯ ಸಮ್ಮಿಲನ
Published 19 ಮಾರ್ಚ್ 2024, 5:26 IST
Last Updated 19 ಮಾರ್ಚ್ 2024, 5:26 IST
ಅಕ್ಷರ ಗಾತ್ರ

ಮಂಗಳೂರು: ಶ್ರೀರಂಗಪಟ್ಟಣದ ಕೆ.ಶೆಟ್ಟಿಹಳ್ಳಿಯ ನಿರ್ದಿಗಂತ ಸಂಸ್ಥೆ, ಸೇಂಟ್ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿರುವ ನಾಟಕ, ಸಂಗೀತ, ಚಿತ್ರ, ಸಿನಿಮಾ ಮತ್ತು ಸಾಹಿತ್ಯಗಳ ಸಮ್ಮಿಲನದ ರಂಗೋತ್ಸವ ಇದೇ 20ರಿಂದ 25ರ ವರೆಗೆ ಸೇಂಟ್ ಅಲೋಶಿಯಸ್ ಕಾಲೇಜು ಆವರಣದಲ್ಲಿ ನಡೆಯಲಿದೆ.

ನಿರ್ದಿಗಂತದಲ್ಲಿ ರಂಗ ತರಬೇತಿ ಪಡೆದು ಫೆಲೋಶಿಪ್ ಗಳಿಸಿರುವ ನಿರ್ದೇಶಕರು ಸಿದ್ಧಪಡಿಸಿದ ನಾಟಕಗಳು ಪ್ರದರ್ಶನಗೊಳ್ಳಲಿವೆ. ಇದರೊಂದಿಗೆ ಮಂಟೇಸ್ವಾಮಿ ಕಾವ್ಯ ಪ್ರಯೋಗ, ಬಹುವಾದ್ಯಗಳ ನುಡಿ ನಡಿಗೆ, ರಂಗ ಸಂವಾದ, ಕೊಂಕಣಿ ಬ್ರಾಸ್ ಬ್ಯಾಂಡ್‌, ರಂಗ ಸಂಗೀತ, ಯಕ್ಷ ರೂಪಕ, ರಂಗ ವಿನ್ಯಾಸದ ಪ್ರಾತ್ಯಕ್ಷಿಕೆ, ಲಯವಾದ್ಯ ಸಮ್ಮಿಲನ ಇತ್ಯಾದಿ ಇರುತ್ತದೆ ಎಂದು ನಿರ್ದಿಗಂತ ಸಂಸ್ಥೆಯ ಸ್ಥಾಪಕ, ನಟ ಪ್ರಕಾಶ್ ರಾಜ್ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಂಗೋತ್ಸವಕ್ಕೆ 20ರಂದು ಸಂಜೆ 5.30ಕ್ಕೆ ನಟ ನಾನಾ ಪಾಟೇಕರ್ ಚಾಲನೆ ನೀಡಲಿದ್ದು 7 ಗಂಟೆಗೆ ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ ನಾಟಕ ಪ್ರದರ್ಶನಗೊಳ್ಳಲಿದೆ. 21ರಂದು ಬೆಳಿಗ್ಗೆ 9.30ಕ್ಕೆ ರಂಗ ಸಂವಾದ 2 ಗಂಟೆಗೆ ದ್ವೀಪ ನಾಟಕ, 3.30ಕ್ಕೆ ಬಯಲು ರಂಗ ಸಂಭ್ರಮದ ನಂತರ ಲಯವಾದ್ಯ ಸಮ್ಮಿಲನ ನಡೆಯಲಿದೆ. ಸಂಜೆ 7ಕ್ಕೆ ತಪ್ಪಿದ ಎಳೆ ನಾಟಕ ಪ್ರದರ್ಶನ ಇರುತ್ತದೆ ಎಂದರು.

22ರಂದು ಬೆಳಿಗ್ಗೆ 9.30ಕ್ಕೆ ಶಧಿಧರ ಅಡಪ ಅವರು ರಂಗವಿನ್ಯಾಸ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದು 2.30ಕ್ಕೆ ಅನಾಮಿಕನ ಸಾವು ನಾಟಕ, ಸಂಜೆ 5ರಿಂದ ರಂಗ ಸಂಗೀತ, 7ರಿಂದ ನಾವು ನಾಟಕ, 23ರಂದು 9.30ಕ್ಕೆ ಐ.ಕೆ.ಬೊಳುವಾರು ಜೊತೆ ರಂಗಸಂವಾದ, 2 ಗಂಟೆಗೆ ಫೋಟೊ ಸಿನಿಮಾ, ಸಂಜೆ 5ಕ್ಕೆ ಗೃಹಭಂಗ ಯಕ್ಷರೂಪಕ, 7ಕ್ಕೆ ‘ಮತ್ತಾಯ 22:39’ ನಾಟಕ ಇರುತ್ತದೆ. 24ರಂದು 11ಕ್ಕೆ ವಿಚಾರಸಂಕಿರಣದಲ್ಲಿ ಎಚ್‌.ಎಸ್‌.ಶಿವಪ್ರಕಾಶ್‌, ಸವಿತಾ ರಾಣಿ, ಕೃಪಾಕರ ಸೇನಾನಿ, ಕೆ.ರಾಮಯ್ಯ, ಕೆ.ವೈ.ನಾರಾಯಣಸ್ವಾಮಿ ಪಾಲ್ಗೊಳ್ಳಲಿದ್ದು 5.30ರಿಂದ ಕೊಂಕಣಿ ಬ್ರಾಸ್ ಬ್ಯಾಂಡ್‌, 7ಕ್ಕೆ ‘ಎ ಫ್ರೆಂಡ್ ಬಿಯಾಂಡ್ ದಿ ಫೆನ್ಸ್‌’ನಾಟಕ ಇರುತ್ತದೆ ಎಂದರು.

25ರಂದು 9.30ಕ್ಕೆ ಸುಧಾ ಆಡುಕಳ ಅವರೊಂದಿಗೆ ರಂಗಸಂವಾದ, 2.30ಕ್ಕೆ ರಂಗಭೂಮಿ ವರ್ತಮಾನ ಕುರಿತು ಮಾತುಕತೆ, 5.30ರಿಂದ ಬಹುವಾದ್ಯಗಳ ನುಡಿ ನಡಿಗೆ, 7ಕ್ಕೆ ಮಂಟೇಸ್ವಾಮಿ ಕಾವ್ಯ ಪ್ರಯೋಗ ನಡೆಯಲಿದೆ ಎಂದು ಅವರು ವಿವರಿಸಿದರು.

ಶ್ರೀಪಾದ ಭಟ್, ಚಂದ್ರಹಾಸ ಉಳ್ಳಾಲ್‌, ಧರ್ಮಗುರು ಆಲ್ವಿನ್ ಸೆರಾವೊ, ಕ್ರಿಸ್ಟೋಫರ್ ಇದ್ದರು.

ಶಾಲಾ ರಂಗ ಜೂನ್‌ನಿಂದ

ನಿರ್ದಿಗಂತ ಸಂಸ್ಥೆ ಆರಂಭಿಸಿರುವ ಶಾಲಾ ರಂಗದ ಮುಂದಿನ ಕಾರ್ಯಕ್ರಮಗಳು ಈ ವರ್ಷದ ಜೂನ್‌ನಿಂದ ಆರಂಭವಾಗಲಿವೆ. ಸದ್ಯ 40ರಷ್ಟು ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಮೈಸೂರಿನಲ್ಲಿ ತರಬೇತಿ ನೀಡಲಾಗುತ್ತಿದ್ದು ಮುಂದಿನ ವರ್ಷದಿಂದ ಈ ಯೋಜನೆ ರಾಜ್ಯದಾದ್ಯಂತ ವಿಸ್ತಾರಗೊಳ್ಳಲಿದೆ ಎಂದು ಪ್ರಕಾಶ್ ರಾಜ್ ತಿಳಿಸಿದರು. ಶಾಲಾ ರಂಗ ಐದು ವರ್ಷಗಳ ಪ್ರಯಾಣ. ಪಠ್ಯಕ್ರಮದಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆ ಇರಬೇಕು ಎಂಬುದು ಯೋಜನೆಯ ಉದ್ದೇಶ. ಆದ್ದರಿಂದ ಈ ಕುರಿತು ಸರ್ಕಾರದ ಗಮನವನ್ನೂ ಸೆಳೆಯಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT