ಉಜಿರೆ (ದಕ್ಷಿಣ ಕನ್ನಡ): ‘ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರ ಹಿಂಬಾಲಕರು ಆಗಸ್ಟ್ 25ರಿಂದ ಧರ್ಮಸ್ಥಳಕ್ಕೆ ಗುಂಪಾಗಿ ಬಂದು ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ಉಂಟುಮಾಡುವ ಸಂಚು ರೂಪಿಸುತ್ತಿರುವುದಾಗಿ ತಿಳಿದು ಬಂದಿದೆ. ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗೆ ನಾವು ಯಾವುದೇ ತ್ಯಾಗಕ್ಕೂ ಸಿದ್ಧ, ಪ್ರಾಣತ್ಯಾಗಕ್ಕೂ ಹಿಂದೇಟು ಹಾಕುವುದಿಲ್ಲ’ ಎಂದು ಧರ್ಮಸ್ಥಳದ ಗ್ರಾಮಸ್ಥರು ಹೇಳಿದರು.
ಶ್ರೀನಿವಾಸ ರಾವ್ ಧರ್ಮಸ್ಥಳ, ಸಂದೀಪ್ ರೈ, ಛಾಯಾ, ಶಾಂಭವಿ ರೈ, ವಕೀಲ ಕೇಶವ ಬೆಳಾಲು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ದಿವಾಕರ ರಾವ್, ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ವಿಠಲ ಶೆಟ್ಟಿ ಅವರು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ಸೌಜನ್ಯಾ ಕೊಲೆ ಪ್ರಕರಣದ ಆರೋಪಿಯನ್ನು ಪತ್ತೆಮಾಡಿ ಕಠಿಣ ಶಿಕ್ಷೆ ವಿಧಿಸಿ ನ್ಯಾಯ ಒದಗಿಸಬೇಕು ಎಂಬುದು ಎಲ್ಲರ ಆಗ್ರಹವಾಗಿದೆ. ಆದರೆ, ಈ ನೆಪದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಜೂನ್ 17ರಿಂದ ಸಾರ್ವಜನಿಕ ಸಭೆ, ಪತ್ರಿಕಾಗೋಷ್ಠಿ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಸಮಾಜದ ಏಕತೆ ಮತ್ತು ಸಮಗ್ರತೆಗೆ ಭಂಗ ಉಂಟು ಮಾಡುತ್ತಿದ್ದಾರೆ. ಧರ್ಮಸ್ಥಳದ ಬಗ್ಗೆ ಅವಹೇಳನಕಾರಿಯಾಗಿ, ವದಂತಿ ಪಸರಿಸುತ್ತಿರುವುದು ಖಂಡನೀಯ’ ಎಂದರು.
‘ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ, ನ್ಯಾಯಾಲಯ, ಸರ್ಕಾರ, ಸಂವಿಧಾನ, ಪೊಲೀಸ್ ಇಲಾಖೆ, ಸಿಬಿಐ ಬಗ್ಗೆ ಸದಾ ಅವಹೇಳನ ಮಾಡುತ್ತಾ ಸಾಮಾಜಿಕ ಶಾಂತಿ-ಸಾಮರಸ್ಯಕ್ಕೆ ಭಂಗ ತರುವ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅನುಯಾಯಿಗಳ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಗ್ರಾಮಸ್ಥರು ಧರ್ಮಸ್ಥಳ ಗ್ರಾಮ ಪಂಚಾಯಿತಿ, ಪೊಲೀಸ್ ಠಾಣೆ ಮೂಲಕ ಜಿಲ್ಲಾಧಿಕಾರಿ, ಎಸ್‌ಪಿ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.