ಶುಕ್ರವಾರ, ಮೇ 14, 2021
21 °C

ಸಂಘಟಕರ ನಿದ್ದೆಗೆಡಿಸಿದ ಮಾರ್ಗಸೂಚಿ: ಕರಾವಳಿಯಲ್ಲಿ ಸಾಲುಸಾಲು ಧಾರ್ಮಿಕ ಚಟುವಟಿಕೆ

ಪ್ರದೀಶ್‌ ಎಚ್‌. ಮರೋಡಿ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಏಪ್ರಿಲ್‌ ಮತ್ತು ಮೇ ತಿಂಗಳಿನಿಂದ ಕರಾವಳಿಯಾದ್ಯಂತ ಬ್ರಹ್ಮಕಲಶ, ಜಾತ್ರೆ, ನೇಮ, ಯಕ್ಷಗಾನ ಹೀಗೆ ಸಾಲುಸಾಲು ಕಾರ್ಯಕ್ರಮಗಳು ನಿಗದಿಯಾಗಿದ್ದು, ಸರ್ಕಾರದ ಹೊಸ ಕೋವಿಡ್‌ ಮಾರ್ಗಸೂಚಿಯು ಸಂಘಟಕರ ನಿದ್ದೆಗೆಡಿಸಿದೆ.

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಹೆಚ್ಚುತ್ತಿರುವ ಕಾರಣ ಮಂಗಳೂರು ನಗರದಲ್ಲಿ ಇದೇ 10ರಿಂದ ‘ಕೊರೊನಾ ಕರ್ಫ್ಯೂ’ ಜಾರಿಯಾಗಿದ್ದರಿಂದ ರಾತ್ರಿ ನಡೆಯುವ ಬಹುತೇಕ ಧಾರ್ಮಿಕ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದವು. ಆದರೆ, ನಗರದ ಹೊರ ಭಾಗದಲ್ಲಿ ಕಾರ್ಯ ಕ್ರಮಗಳು ಎಂದಿನಂತೆ ನಡೆಯು ತ್ತಿದ್ದವು. ಇದೀಗ ಹೊಸ ಮಾರ್ಗಸೂಚಿ ರಾಜ್ಯದಾದ್ಯಂತ ಅನ್ವಯವಾಗುತ್ತಿದ್ದು, ಸಂಘಟಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಜಿಲ್ಲೆಯಲ್ಲಿ ಮುಂದಿನ ಎರಡು ವಾರಗಲ್ಲಿ ಹತ್ತಾರು ದೇವಸ್ಥಾನಗಳ ಮತ್ತು ದೈವಸ್ಥಾನಗಳ ಬ್ರಹ್ಮಕಲಶೋತ್ಸವ ನಡೆಯಲಿವೆ. ಇದೇ 18ರಿಂದ ಸೋಮೇಶ್ವರ ದೇವಸ್ಥಾನದಲ್ಲಿ, 20ರಿಂದ ಬೆಳ್ತಂಗಡಿಯ ಕಾಟಾಜೆ ದುರ್ಗಾಪರಮೇಶ್ವರಿದೇವಸ್ಥಾನದಲ್ಲಿ, 21ರಿಂದ ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ– ಮೂಲಸ್ಥಾನದಲ್ಲಿ, 24ರಿಂದ ಕೋಡಿಂಬಾಡಿ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ಹೀಗೆ ಇನ್ನೂ ಹಲವು ಧಾರ್ಮಿಕ ಕೇಂದ್ರಗಳಲ್ಲಿ ಬ್ರಹ್ಮಕಲಶೋತ್ಸವಕ್ಕೆ ‌‌ಸಿದ್ಧತೆಗಳು ನಡೆದಿವೆ. ಮತ್ತೊಂದೆಡೆ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ, ಕಟೀಲು ದೇವಸ್ಥಾನ ಸೇರಿದಂತೆ ಹಲವೆಡೆ ಜಾತ್ರೋತ್ಸವ ನಡೆಯುತ್ತಿವೆ. ಈ ಮಧ್ಯೆ ರಾಜ್ಯ ಸರ್ಕಾರವು 17ರಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿದೆ.

‘ಕಳೆದ ವರ್ಷ ನಡೆಯಬೇಕಿದ್ದ ಭೂತ ಕೋಲವನ್ನು ಇದೇ 24ರಂದು ನಡೆಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಈಗಾಗಲೇ ಆಮಂತ್ರಣ ಪತ್ರವನ್ನು ಹಂಚಿದ್ದೇವೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಏಕಾಏಕಿ ನಿಷೇಧ ಹೇರಿದರೆ ಜನಸಾಮಾನ್ಯರಿಗೆ ತುಂಬಾ ಕಷ್ಟ
ವಾಗುತ್ತದೆ. ಇಂತಹ ಮಹತ್ವದ ನಿರ್ಧಾರವನ್ನು ಕನಿಷ್ಠ ಒಂದು ತಿಂಗಳ ಮುಂಚೆ ತೆಗೆದುಕೊಳ್ಳಬೇಕು’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಸಂಘಟಕ.

‘ಫೆಬ್ರುವರಿಯಿಂದ 2 ತಿಂಗಳು ಮೌಢ್ಯ ಇದ್ದ ಕಾರಣ ಮದುವೆಗೆ ಮುಹೂರ್ತ ಸಿಕ್ಕಿರಲಿಲ್ಲ. ಈಗ ಮದುವೆಗೆ ಎಲ್ಲಾ ಸಿದ್ಧತೆ ನಡೆದಿದೆ. ಬಂಧುಮಿತ್ರರಿಗೆ, ಆತ್ಮೀಯರಿಗೆ ಆಮಂತ್ರಣ ಪತ್ರ ನೀಡಿದ್ದೇವೆ. ಈಗ ನೂರು ಮಂದಿಗೆ ಮಾತ್ರ ಅವಕಾಶ ಎಂದರೆ ಕಷ್ಟವಾಗುತ್ತದೆ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಮದುಮಗ.

ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶಕ್ಕೆ ಕೋರಿಕೆ
ರಾಜಕೀಯ, ಮದುವೆ ಸಮಾರಂಭಗಳಿಗೆ ಅನುಮತಿ ನೀಡಿ, ಧಾರ್ಮಿಕ ಕಾರ್ಯಕ್ರಮಕ್ಕೆ ಸರ್ಕಾರ ನಿರ್ಬಂಧ ಹೇರಿರುವುದು ಸರಿಯಲ್ಲ ಎಂದು ವಿಶ್ವ ಹಿಂದೂ ಪರಿಷತ್‌ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಹೇಳಿದ್ದಾರೆ.

‘2 ತಿಂಗಳುಗಳಲ್ಲಿ ಸಾಕಷ್ಟು ಕಡೆ ದೈವಾರಾಧನೆಯ ನೇಮ, ಕೋಲಗಳು, ಜಾತ್ರೆ, ನಾಗಮಂಡಲ, ಬ್ರಹ್ಮಕಲಶ, ಯಕ್ಷಗಾನದಂತಹ ಧಾರ್ಮಿಕ ಕಾರ್ಯಕ್ರಮಗಳ ದಿನಾಂಕ ನಿಗದಿಯಾಗಿದೆ. ತಯಾರಿ ಕೂಡ ನಡೆದಿದೆ. ಕೆಲ ದೇವಸ್ಥಾನಗಳ ಬ್ರಹ್ಮಕಲಶ ಪ್ರಾರಂಭವಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಬಾರದು’ ಎಂದು ತಿಳಿಸಿದ್ದಾರೆ.

‘ಈಗಾಗಲೇ ನಿಯೋಗದೊಂದಿಗೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವರಿಕೆ ಮಾಡಲಾಯಿತು. ಮಾರ್ಗಸೂಚಿ ಅನುಸರಿಸಿ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡಲು ಒತ್ತಾಯಿಸಲಾಗಿದೆ’ ಎಂದು ತಿಳಿಸಿದ್ದಾರೆ.

ನಿಯೋಗದಲ್ಲಿ ಮಾಣಿಲದ ಮೋಹನದಾಸ ಸ್ವಾಮೀಜಿ, ಮುಖಂಡ ಗೋಪಾಲ್ ಕುತ್ತಾರ್, ಬಿಜೆಪಿಯ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ್, ಜಗದೀಶ್ ಶೇಣವ ಜೊತೆಗಿದ್ದರು.

**
ಪಡುಮಲೆಯ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆಗಳು ನಡೆದಿದೆ. ಇನ್ನು ಮುಂದೂಡಲು ಅಸಾಧ್ಯ. ವೈದಿಕ ವಿಧಿಗಳೊಂದಿಗೆ ಮಾಡುವುದು ಅನಿವಾರ್ಯ. ಇದನ್ನು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದ್ದೇವೆ.
-ಹರಿಕೃಷ್ಣ ಬಂಟ್ವಾಳ್, ಪಡುಮಲೆ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ

*
ಸೋಮೇಶ್ವರದ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವನ್ನು ಮಾರ್ಗಸೂಚಿಯಂತೆ ಮಾಡಲಾಗುತ್ತದೆ. ವೈದಿಕ ವಿಧಿಗಳಿಗೆ ಅವಕಾಶ ಇರುವಂತೆ ನಡೆಸಲು ಸಮಿತಿ ನಿರ್ಧರಿಸಿದೆ.
-ಬಿ. ರವೀಂದ್ರನಾಥ ರೈ, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು